ನಾಮ್ಘರ್ ಮಣ್ಣಿನ ನೆಲ ಅದೇ ಮಣ್ಣಿನ ದೀಪಗಳಿಂದ ಅಲಂಕರಿಸಲ್ಪಟ್ಟಿದೆ. ದೀಪದ ಬೆಳಕು ನೆಲವನ್ನು ಬೆಳಗಿಸುತ್ತಾ ಆಗಷ್ಟೇ ಬರಲಾರಂಭಿಸಿದ್ದ ಭಕ್ತರಿಗೆ ದಾರಿ ತೋರುತ್ತಿದ್ದವು. ಗಾಯನ್ (ಗಾಯನ್) ಮತ್ತು ಬಾಯನ್ (ವಾದಕ) ಇಬ್ಬರೂ ತಮ್ಮ ಸ್ಥಾನವನ್ನು ಅಲಂಕರಿಸಿದರು. ವಾದಕನು ಖೋಲ್ ಎನ್ನುವ ಅಸ್ಸಾಮಿ ತಾಳವನ್ನು ಎದೆಗೆ ಒತ್ತಿ ಹಿಡಿದುಕೊಂಡನು. ಸಂಗೀತಗಾರರು ಪ್ರದರ್ಶನವನ್ನು ಆರಂಭಿಸುತ್ತಿದ್ದ ಹಾಗೆ ದೊಡ್ಡ ಹಿತ್ತಾಳೆ ತಾಳಗಳು (ಬೋರ್ ತಾಲ್) ದೀಪದ ಬೆಳಕಿನಲ್ಲಿ ಹೊಳೆಯುತ್ತಿದ್ದವು.
ಆ ಸಂಜೆಯ ನಿರೂಪಕರಾದ ಸೂತ್ರಧಾರ ಬಿಪುಲ್ ದಾಸ್ ಮಾತನಾಡುತ್ತಾ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದ ಹಾಗೆ ಕೋಣೆ ಮೌನವಾಗುತ್ತದೆ.
ಇದರೊಂದಿಗೆ ರಾತ್ರಿಯಿಡೀ ನಡೆಯಲಿರುವ ಭಾವೊನಾ - ಅಸ್ಸಾಂನ ಸಾಂಪ್ರದಾಯಿಕ ವೈಷ್ಣವ ಧಾರ್ಮಿಕ ರಂಗ ಕಲೆ – ರೋಮಾಂಚಕವಾಗಿ ಆದರೆ ಅಷ್ಟೇ ಗಂಭೀರ ರೀತಿಯಲ್ಲಿ ಆರಂಭಗೊಂಡಿತು. ಈ ನಾಟಕದಲ್ಲಿ ಸಾಮಾನ್ಯವಾಗಿ ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಆಧರಿಸಿ ನಟಿಸಲಾಗುತ್ತದೆ.
ಮಹಾಭಾರತ ಮಹಾಕಾವ್ಯದಲ್ಲಿ ಪಾಂಡವರ ತಾಯಿಯಾದ ಕುಂತಿಯ ಪಾತ್ರವೆಂದರೆ ಬಿಪುಲ್ ಅವರಿಗೆ ಪ್ರೀತಿ. "ಊರಿನಲ್ಲಿ ಜನರು ನನ್ನನ್ನು ಕುಂತಿ ಎಂದೇ ಕರೆಯುತ್ತಾರೆ” ಎಂದು ಅವರು ನಗುತ್ತಾ ಹೇಳುತ್ತಾರೆ. ಒಂಟಿ ತಾಯಿಯ ಪೋಷಣೆಯಲ್ಲಿ ಬೆಳೆದ ನನಗೆ ಈ ಪಾತ್ರ ಬಹಳ ಹತ್ತಿರವೆನ್ನಿಸುತ್ತದೆ ಎಂದು ಅವರು ಹೇಳುತ್ತಾರೆ. “ನನ್ನೊಳಗೆ ಒಬ್ಬಳು ತಾಯಿಯಿದ್ದಾಳೆ ಎನ್ನುವುದು ನನ್ನ ನಂಬಿಕೆ, ಅದು ನನ್ನನ್ನು ಕುಂತಿಯನ್ನು ಆಪ್ತವಾಗಿಸುತ್ತದೆ.” ಅವರು ತಮ್ಮ ನೆಚ್ಚಿನ ಸಾಲುಗಳನ್ನು ಹಾಡತೊಡಗಿದರು.
















