“ಆ ಬಿರುಗಾಳಿ ಬಂದಿದ್ದು ಮತ್ತು ನನ್ನ ಮನೆಯ ಮೇಲೆ ಭಾರಿ ಮಳೆ ಸುರಿದಿದ್ದು ನನಗೆ ನೆನಪಿದೆ. ನಂತರ ನನ್ನ ಕಣ್ಣೆದುರೇ ಮನೆ ಕುಸಿದು ಬಿತ್ತು ಮತ್ತು [ಮುರಿ ಗಂಗಾ] ನದಿ ಅದನ್ನು ಕೊಚ್ಚಿಕೊಂಡು ಹೋಯಿತು" ಎಂದು ಪೂರ್ಣಿಮಾ ಭುಯಾನ್ ಹೇಳುತ್ತಾರೆ. ಖಾಸಿಮಾರಾದಲ್ಲಿದ್ದ ತಮ್ಮ ಮನೆ ನಾಶವಾದ ಹಲವು ಸಂದರ್ಭಗಳಲ್ಲಿ ಅವರು ನೆನಪಿಸಿಕೊಳ್ಳುತ್ತಿದ್ದಾರೆ.

South 24 Parganas, West Bengal
|MON, JUN 01, 2026
'ನಮ್ಮ ಮನೆಗಳೆಲ್ಲ ನಾಶವಾಗಿವೆ, ಈ ಬಗ್ಗೆ ಯಾರಿಗೂ ಚಿಂತೆ ಇಲ್ಲ'
ದಶಕಗಳಿಂದ, ಸುಂದರಬನದ ಘೋರಮಾರಾ ದ್ವೀಪದ ಗ್ರಾಮಸ್ಥರು ನದಿಯ ಪ್ರವಾಹ ಮತ್ತು ಮಳೆಯ ಕಾರಣದಿಂದಾಗಿ ತಮ್ಮ ಮನೆಗಳು ನಿರಂತರವಾಗಿ ಕೊಚ್ಚಿಹೋಗುತ್ತಿರುವುದರಿಂದ ಸಾಗರ್ ಎನ್ನುವ ದ್ವೀಪಕ್ಕೆ ವಲಸೆ ಹೋಗುತ್ತಿದ್ದಾರೆ. ಅವರ ಈ ಸಂಕಷ್ಟದ ನಡುವೆಯೂ, ರಾಜ್ಯ ಸರ್ಕಾರದಿಂದ ಅವರಿಗೆ ಅಲ್ಪ ಪ್ರಮಾಣದ ಸಹಾಯ ಮಾತ್ರ ದೊರೆತಿದೆ
Author
Translator
Translation Editor

Siddharth Adelkar

Siddharth Adelkar
ಪೂರ್ಣಿಮಾ ಅವರ ಮನೆ ಪದೇ ಪದೇ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಆ ವರ್ಷಗಳಲ್ಲಿ (ಅದು ಯಾವ ದಶಕಗಳು ಎಂದು ಅವರಿಗೆ ನೆನಪಿಲ್ಲ), ಅವರಿಗೆ ಸರ್ಕಾರದಿಂದ ಯಾವುದೇ ಸಹಾಯ ಸಿಗಲಿಲ್ಲವಂತೆ. ಕೊನೆಗೆ 1993 ರಲ್ಲಿ, ಘೋರಾಮಾರಾದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಸಾಗರ್ ದ್ವೀಪದಲ್ಲಿ ಸಣ್ಣ ಜಮೀನುಗಳನ್ನು ಕೇವಲ ಒಂದು ಎಕರೆಗಿಂತ ಕಡಿಮೆ ಸ್ಥಳದಲ್ಲಿ ನೀಡಲಾಯಿತು.
ಅವಕಾಶ ಸಿಕ್ಕರೆ ಭುಯಾನ್ ಅವರು ಇಂದಿಗೂ ಘೋರಾಮಾರಾದಲ್ಲೇ ವಾಸಿಸಲು ಇಷ್ಟಪಡುತ್ತಾರೆ. "ನನಗೆ ಅದು ಯಾಕೆ ಇಷ್ಟ ಎಂದರೆ, ಅಲ್ಲಿದ್ದ ಜನರು ತುಂಬಾ ಸಹಾಯ ಮಾಡುತ್ತಿದ್ದರು. ಒಂದು ಕುಟುಂಬ ಮನೆ ಕಳೆದುಕೊಂಡರೆ, ಮತ್ತೊಂದು ಕುಟುಂಬ ತಕ್ಷಣವೇ ಹೊಸ ಮನೆ ಕಟ್ಟಿಕೊಳ್ಳಲು ತನ್ನ ಭೂಮಿಯನ್ನು ನೀಡುತ್ತಿತ್ತು. ಆದರೆ ಇಲ್ಲಿ ಹಾಗಾಗುವುದಿಲ್ಲ," ಎಂದು ಅವರು ನಿಟ್ಟುಸಿರು ಬಿಡುತ್ತಾರೆ. ದುರದೃಷ್ಟವಶಾತ್, ಖಾಸಿಮಾರಾ ಗ್ರಾಮವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿದೆ ಮತ್ತು 2011 ರ ಜನಗಣತಿಯಲ್ಲಿ ಅಲ್ಲಿನ ಜನಸಂಖ್ಯೆ ''ಸೊನ್ನೆ” ಎಂದು ದಾಖಲಾಗಿದೆ. ಆದರೂ ದ್ವೀಪದ ಇತರ ಆರು ಗ್ರಾಮಗಳಲ್ಲಿ ಇನ್ನೂ ಜನರು ವಾಸಿಸುತ್ತಿದ್ದಾರೆ — ಘೋರಾಮಾರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 5,000 ಜನರು (2011 ರ ಜನಗಣತಿ ಪ್ರಕಾರ) ಇದ್ದರು (ಮತ್ತು ನಂತರದ ವರ್ಷಗಳಲ್ಲಿ ಈ ಜನಸಂಖ್ಯೆಯೂ ಕಡಿಮೆಯಾಗಿದೆ).
ಘೋರಾಮಾರಾದಿಂದ ಬಂದ ಇತರ ಕುಟುಂಬಗಳೊಂದಿಗೆ 1993 ರಲ್ಲಿ ಗಂಗಾಸಾಗರಕ್ಕೆ ಬಂದ ಮೊಂಟು ಮೊಂಡಲ್, ಸಾಗರ್ ದ್ವೀಪದ ಆರಂಭಿಕ ದಿನಗಳ ಕಷ್ಟಗಳನ್ನು ಮರೆತಿಲ್ಲ. ಸರ್ಕಾರ ಅವರಿಗೆ ನೀಡಿದ ಭೂಮಿಯಲ್ಲಿ ಮಣ್ಣಿನ ಉಪ್ಪಿನಂಶ ಹೆಚ್ಚಾಗಿದ್ದರಿಂದ ಆರಂಭದಲ್ಲಿ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಇದಲ್ಲದೆ, ಕುಡಿಯಲು ಮತ್ತು ಸ್ನಾನ ಮಾಡಲು ಸಿಹಿ ನೀರಿಗೂ ಅಭಾವವಿತ್ತು. ಜೀವನೋಪಾಯಕ್ಕಾಗಿ ಈಗ 65 ವರ್ಷದ ಮೊಂಡಲ್ ಅವರು ಮಣ್ಣು ಅಗೆಯುವುದು ಮತ್ತು ಒಣ ಮೀನು ಮಾರಾಟ ಮಾಡುವಂತಹ ದಿನಗೂಲಿ ಕೆಲಸಗಳನ್ನು ಮಾಡಿದರು. ತಮಗೆ ಸಿಕ್ಕ 1.5 ಬಿಘಾ (ಸುಮಾರು ಅರ್ಧ ಎಕರೆ) ಭೂಮಿಯಲ್ಲಿ ಅವರು ಒಂದು ಮನೆ ಕಟ್ಟಿಕೊಂಡರು ಮತ್ತು ಕಾಲಕ್ರಮೇಣ ಭತ್ತವನ್ನೂ ಬೆಳೆದರು.

Siddharth Adelkar

Siddharth Adelkar
ಮೊಂಡಲ್ ಘೋರಾಮಾರಾದಲ್ಲಿ ವಾಸಿಸುತ್ತಿದ್ದಾಗ, ನದಿಯು ಅವರ ಮನೆಯನ್ನು ಎರಡು ಬಾರಿ ಹಾಳು ಮಾಡಿತ್ತು. "ಸುಮಾರು 10-15 ವರ್ಷಗಳ ಹಿಂದೆ, ಘೋರಾಮಾರಾದ ಉತ್ತರದ ತುದಿಯಿಂದ ದಕ್ಷಿಣದ ತುದಿಗೆ ನಡೆದುಕೊಂಡು ಹೋಗಲು 2-3 ಗಂಟೆ ಬೇಕಾಗುತ್ತಿತ್ತು. ಆದರೆ ಈಗ ಆ ದೂರವನ್ನು ಕ್ರಮಿಸಲು ನಿಮಗೆ ಒಂದು ಗಂಟೆಗಿಂತ ಕಡಿಮೆ ಸಮಯ ಸಾಕು" ಎಂದು ಅವರು ಹೇಳುತ್ತಾರೆ.
ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯದ ಸಮುದ್ರಶಾಸ್ತ್ರ ಅಧ್ಯಯನ ಶಾಲೆಯ ಪ್ರೊ. ಸುಗತಾ ಹಜ್ರಾ ಅವರು, ಘೋರಾಮಾರಾದಿಂದ ಸ್ಥಳಾಂತರಗೊಂಡ ಗ್ರಾಮಸ್ಥರನ್ನು ಸರ್ಕಾರ 'ಹವಾಮಾನ ನಿರಾಶ್ರಿತರು' ಎಂದು ಗುರುತಿಸುತ್ತಿಲ್ಲ, ಏಕೆಂದರೆ ಅವರು ದೇಶದ ಒಳಗೆ ವಲಸೆ ಹೋಗಲು ಬದ್ಧರಾಗಿದ್ದಾರೆ ಎಂದು ಹೇಳುತ್ತಾರೆ. "ಆದರೆ ಅವರನ್ನು 'ಪರಿಸರ ವಲಸಿಗರು' ಎಂದು ಗುರುತಿಸಬೇಕು. ಸರ್ಕಾರವು ಇಂತಹ ಹೊಸ ವರ್ಗವನ್ನು ಸೃಷ್ಟಿಸಿ, ಈ ಅಸಹಾಯಕ ಜನರಿಗೆ ಗೌರವ ಮತ್ತು ನ್ಯಾಯವನ್ನು ಒದಗಿಸಬೇಕು," ಎಂದು ಅವರು ಅಭಿಪ್ರಾಯಪಡುತ್ತಾರೆ.

Siddharth Adelkar

Siddharth Adelkar
"ನನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಈ ಕುಗ್ಗುತ್ತಿರುವ ದ್ವೀಪವನ್ನು ಬಿಟ್ಟು ಹೋಗಲು ನಾನು ಸಿದ್ಧನಿದ್ದೇನೆ," ಎಂದು ದಿಲ್ಜಾನ್ ಹೇಳುತ್ತಾರೆ. "ಆದರೆ ಸರ್ಕಾರ ನಮಗೆ ಬೇರೆಲ್ಲೂ ಭೂಮಿ ನೀಡುತ್ತಿಲ್ಲ." ಲಭ್ಯವಿರುವ ಭೂಮಿಯ ಕೊರತೆಯಿಂದಾಗಿ 1993 ರ ನಂತರ ಸರ್ಕಾರವು ಸಾಗರ್ ದ್ವೀಪದಲ್ಲಿ ಜನರಗೆ ಪುನರ್ವಸತಿ ವ್ಯವಸ್ಥೆಯನ್ನು ನಿಲ್ಲಿಸಿತು.
ಸಾಗರ್ ದ್ವೀಪದಲ್ಲಿ ಕೆಲಸದ ಕೊರತೆಯಿಂದಾಗಿ, ಅನೇಕ ಕುಟುಂಬಗಳ ಪುರುಷರು ಕೆಲಸ ಹುಡುಕಿಕೊಂಡು ಪಶ್ಚಿಮ ಬಂಗಾಳದ ಹೊರಗೆ ವಲಸೆ ಹೋಗುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಆತಂಕವೂ ಇದೆ — ಸಾಗರ್ ದ್ವೀಪವು ಪ್ರತಿ ವರ್ಷ ಕುಗ್ಗುತ್ತಿದೆ ಮತ್ತು ಸವಕಳಿಯಾಗುತ್ತಿದೆ. ಅಲ್ಲಿನ ನಿವಾಸಿಗಳು ತಮ್ಮ ಭೂಮಿ ಮತ್ತು ಮನೆಗಳನ್ನು ಮತ್ತೆ ಕಳೆದುಕೊಳ್ಳುವ ಭಯದಲ್ಲಿದ್ದಾರೆ.
ನದಿಯು ದ್ವೀಪದ ದೊಡ್ಡ ಭಾಗಗಳನ್ನು ನುಂಗಿಹಾಕಿದ ಸ್ಥಳಕ್ಕೆ ನಮ್ಮನ್ನು ತಮ್ಮ ರಿಕ್ಷಾದಲ್ಲಿ ಕರೆದೊಯ್ದ ದಿಲ್ಜಾನ್ ಅವರೊಂದಿಗೆ ನಾವು ಮಾತನಾಡುತ್ತಿದ್ದಾಗ, ರಂಜಿತಾ ಪುರ್ಕೈತ್ ಕೂಡ ಸಂಭಾಷಣೆಗೆ ಸೇರಿಕೊಂಡರು. ಒಮ್ಮೆ ನದಿಯಲ್ಲಿ ಕೊಚ್ಚಿ ಹೋಗಿದ್ದ ಅವರ ಮನೆ, ಈಗ ನದಿ ತೀರದಿಂದ ಕೆಲವೇ ಮೀಟರ್ ದೂರದಲ್ಲಿದೆ. "ನಾನು ಈ ಮನೆಯನ್ನೂ ಕಳೆದುಕೊಳ್ಳಬಹುದು. ಸರ್ಕಾರ ಏನು ಮಾಡಿದೆ? ಏನೂ ಇಲ್ಲ," ಎಂದು ಅವರು ಹೇಳುತ್ತಾರೆ. "ಕನಿಷ್ಠ ಪಕ್ಷ ಅವರು ನದಿಯ ತಡೆಗೋಡೆಗಳನ್ನು (ಏರಿಗಳನ್ನು) ಬಲಪಡಿಸಬಹುದಿತ್ತು! ಎಷ್ಟೋ ಜನ ಪತ್ರಕರ್ತರು ಬರುತ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ ಮತ್ತು ಹೊರಟುಹೋಗುತ್ತಾರೆ. ಆದರೆ ನಮ್ಮ ಪರಿಸ್ಥಿತಿ ಎಂದಿಗೂ ಬದಲಾಗುವುದಿಲ್ಲ. ಸರ್ಕಾರ ನಮಗೆ ಬೇರೆ ಕಡೆ ಭೂಮಿ ನೀಡುತ್ತದೆಯೇ? ಈ ದ್ವೀಪವು ಕುಗ್ಗುತ್ತಿದೆ ಮತ್ತು ನಮ್ಮ ಮನೆಗಳು, ಭೂಮಿಗಳು ಕಣ್ಮರೆಯಾಗುತ್ತಿವೆ. ಯಾರಿಗೂ ಇದರ ಚಿಂತೆ ಇಲ್ಲ."
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/our-houses-are-vanishing-nobody-cares-kn

