“ಮಂಚ ಹೆಣೆಯುವ ಕಲೆ ನನ್ನ ರಕ್ತದಲ್ಲೇ ಬಂದಿದೆ” ಎನ್ನುತ್ತಾರೆ ಕೃಷ್ಣಾವತಿ. ಇವರು ಮೂರನೇ ತಲೆಮಾರಿನ ಹಗ್ಗದ ಮಂಚದ ತಯಾರಕರು. “ನಾನು ಮದುವೆಯಾಗಿರುವುದು ಕೂಡಾ ಈ ಕಲೆಯನ್ನು ಪ್ರೀತಿಸುವವರನ್ನೇ!” ಎಂದರು ಈ 45 ವರ್ಷ ಪ್ರಾಯದ ಥಾರು ಸಮುದಾಯದ ಮಹಿಳೆ.
ಹೆಚ್ಚೂಕಡಿಮೆ ಕಳೆದ ಮೂರು ದಶಕಗಳಿಂದ ಕೃಷ್ಣಾವತಿ ಮತ್ತು ಅವರ ಗಂಡ ಚಂದ್ರಪಾಲ್ ಸಿಂಗ್ ರಾಣಾ ಹಗ್ಗದ ಮಂಚದ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಂಚಗಳಿಗೆ ಅಡಿಯಲ್ಲಿ ಹಲಗೆಯ ಬದಲು ಹಗ್ಗವನ್ನು ಹೆಣೆದು ತಳವನ್ನು ಮಾಡಲಾಗುತ್ತದೆ. ಮಂಚದ ಉಳಿದ ಭಾಗಗಳಿಗೆ ಮರವನ್ನು ಬಳಸುವ ದಂಪತಿ, ಹಲಗೆಯ ಭಾಗಕ್ಕೆ ಹಗ್ಗ ಹೆಣೆದು ವಿವಿಧ ವಿನ್ಯಾಸಗಳನ್ನು ಹೆಣೆಯುತ್ತಾರೆ.
ಬೇಸಗೆಯ ಸೆಖೆಯ ಸಮಯದಲ್ಲಿ ಜನರು ಮರದ ಹಲಗೆಯ ಮಂಚದ ಬದಲು ಇಂತಹ ಮಂಚಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಾರೆ. ಹೀಗಾಗಿ ಕುಶಲಕರ್ಮಿಗಳು ಮೇ ತಿಂಗಳಿನಿಂದ ಸೆಪ್ಟೆಂಬರ್ ತನಕ ಈ ಮಂಚವನ್ನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೃಷ್ಣಾವತಿ ದಿನವೊಂದಕ್ಕೆ 350 ರೂಪಾಯಿ ಕೂಲಿ ಸಂಪಾದಿಸಿದರೆ, ಅವರ ಪತಿ ಇದಕ್ಕಿಂತ ನೂರು ರೂಪಾಯಿ ಹೆಚ್ಚು ಸಂಪಾದಿಸುತ್ತಾರೆ. ಇವರಿಗೆ ವರ್ಷಕ್ಕೆ ಸರಿಸುಮಾರು 120-150 ದಿನಗಳ ತನಕ ಕೆಲಸ ಸಿಗುತ್ತದೆ.















