“ಅಲ್ಲಿ ಗೊರಲ್ ನೋಡಿ!” ಎಂದು ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಸಿಂಗ್ಚುಂಗ್ ಪಟ್ಟಣದ ತಿರುವಿನ ರಸ್ತೆಗಳಲ್ಲಿಶಾಂತ ರಸ್ತೆಯಲ್ಲಿ ಡ್ರೈವ್ ಮಾಡುತ್ತಿದ್ದ ಡಾ.ಉಮೇಶ್ ಶ್ರೀನಿವಾಸನ್ ಕೂಗಿದರು.
ದೂರದಲ್ಲೊಂದು ಸಣ್ಣ ಬೂದು ಬಣ್ಣದ ಮೇಕೆ ಜಾತಿಯ ಪ್ರಾಣಿಯೊಂದು ನಮ್ಮ ರಸ್ತೆಗೆ ಸಮಾನಂತರದಲ್ಲಿ ಪೂರ್ವ ಹಿಮಾಲಯದ ಕಾಡುಗಳತ್ತ ಓಡುತ್ತಿತ್ತು.
“ನೀವು ಇದನ್ನು ಈ ಹಿಂದೆ ನೋಡಿರಲು ಸಾಧ್ಯವಿಲ್ಲ” ಎಂದು ಹಿಂದೆಂದೂ ನೋಡಿರಲಿಲ್ಲ" ಎಂದು ಪಶ್ಚಿಮ ಕಾಮೆಂಗ್ ಪ್ರದೇಶದ ಕಾಡುಗಳಲ್ಲಿ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ವನ್ಯಜೀವಿ ಜೀವಶಾಸ್ತ್ರಜ್ಞ ಅಚ್ಚರಿಯೊಂದಿಗೆ ಹೇಳುತ್ತಾರೆ.
ಬೂದು ಗೋರಲ್ (Naemorhedus goral) ಹಿಮಾಲಯದ ಗುಂಟ ಭೂತಾನ್, ಚೀನಾ, ಉತ್ತರ ಭಾರತ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಕಂಡುಬರುವ ಸಾರಂಗ ಜಾತಿಯ ಪ್ರಾಣಿ. ಆದರೆ 2008ರ ಹೊತ್ತಿಗೆ, ಇಂಟರ್ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಆವಾಸಸ್ಥಾನದ ನಷ್ಟ ಮತ್ತು ಬೇಟೆಯ ಕಾರಣದಿಂದಾಗಿ ಇದನ್ನು "ಅಳಿವಿನಂಚಿನಲ್ಲಿರುವ ಪ್ರಾಣಿ" ಎಂದು ಪಟ್ಟಿ ಮಾಡಿದೆ.
ಹಿಮಾಲಯದ ಕೆಳಭಾಗ ಮತ್ತು ಈಶಾನ್ಯ ಭಾರತದಲ್ಲಿ ಮಾನವ ಉಪಸ್ಥಿತಿ ಹೆಚ್ಚಿರುವ ಕುರಿತಾಗಿ ಹೇಳುತ್ತಾ “ಅವು ಹೆಚ್ಚಾಗಿ ಕಾಡಿ ತೀರಾ ಒಳ ಭಾಗದಲ್ಲಿರುತ್ತಿದ್ದವು. ಅವು ಬಹಳ ಹೆದರಿಕೆ ಸ್ವಭಾವದ ಪ್ರಾಣಿಗಳು” ಎಂದು ಉಮೇಶ್ ಹೇಳುತ್ತಾರೆ.
ಗೋರಲ್ ಅನ್ನು ನೋಡಿದ ಸ್ವಲ್ಪ ಸಮಯದ ನಂತರ, ಸಿಂಗ್ಚುಂಗ್ ಎನ್ನುವಲ್ಲಿನ ರೈತರಾದ ನಿಮಾ ತ್ಸೆರಿಂಗ್ ಮೊನ್ಪಾ ನಮಗೆ ಕುಡಿಯಲು ಚಹಾ ನೀಡಿ ಮತ್ತೊಂದು ಪ್ರಾಣಿ ವೀಕ್ಷಣೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತಾರೆ, "ಕೆಲವು ವಾರಗಳ ಹಿಂದೆ, ನಾನು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಕೃಷಿ ಭೂಮಿಯಲ್ಲಿ ಕೆಂಪು ಪಾಂಡಾ (Ailurus fulgens) ನೋಡಿದೆ." ಅಳಿವಿನಂಚಿನಲ್ಲಿರುವ ಜಾತಿಯ ಕೆಂಪು ಪಾಂಡಾ ಚೀನಾ, ಮ್ಯಾನ್ಮಾರ್, ಭೂತಾನ್, ನೇಪಾಳ ಮತ್ತು ಭಾರತದಲ್ಲಿ ಕಂಡುಬರುತ್ತದೆ ಆದರೆ ಕಳೆದ ಮೂರು ತಲೆಮಾರುಗಳಲ್ಲಿ ಅದರ ಸಂಖ್ಯೆ ಶೇಕಡಾ 50ರಷ್ಟು ಕುಸಿದಿದೆ ಮತ್ತು ಮುಂದಿನ ಎರಡು ದಶಕಗಳಲ್ಲಿ ಹದಗೆಡುವ ನಿರೀಕ್ಷೆಯಿದೆ ಎಂದು ಐಯುಸಿಎನ್ ಎಚ್ಚರಿಸಿದೆ.






















