ಅಂಬಿಯಾ ಖಾತುನ್ ತನ್ನ ಕೂದಲನ್ನು ಸೆರಗಿನ ಮೂಲಕ ಮರೆಮಾಡಿಕೊಳ್ಳಲು ಹೆಣಗಾಡುತ್ತಿದ್ದರೆ, ನೇರಳೆ ಬಣ್ಣದ ಹೂಗಳನ್ನು ಹೊಂದಿದ್ದ ಆ ಹರಿದ ಸೆರಗು ಅವರ ಮಾತನ್ನು ಕೇಳದೆ ಮತ್ತೆ ಮತ್ತೆ ಗಾಳಿಗೆ ಹಾರುತ್ತಿತ್ತು. ಸೆಣಬಿನ ಎಳೆಗಳನ್ನು ಹೊಸೆಯುತ್ತಾ, ಅವುಗಳಿಗೆ ಮಣಿಯನ್ನು ಪೋಣಿಸುತ್ತಿದ್ದ ಅವರ ಬೆರಳುಗಳು ಮತ್ತೆ ಮತ್ತೆ ಸೆರಗನ್ನೂ [ಪರ್ದಾ] ಸರಿಪಡಿಸುತ್ತಿದ್ದವು. ಜೌಗು ಪ್ರದೇಶದ ಅಂಚಿನಲ್ಲಿರುವ ತಮ್ಮ ಗುಡಿಸಲಿನ ಎದುರು ಕುಳಿತಿದ್ದ ಅವರು ಅಲ್ಲಿ ತಿರುಗಾಡುವ ಗಂಡಸರ ನೋಟ ತನ್ನ ಮೇಲೆ ಬೀಳದಂತೆ ಜಾಗೃತೆ ವಹಿಸುತ್ತಿದ್ದರು. ಅವರ ಮನೆಯಿರುವುದು ಬೇಕಿ ನದಿಯ ದಡದಲ್ಲಿ. ಆದರೆ ಈ ನದಿ ಮುಂಗಾರಿನ ಸಮಯದಲ್ಲಿ ದಡದ ಖಾಸಗಿತನದ ಬಗ್ಗೆ ಒಂದಿಷ್ಟೂ ತಲೆ ಕೆಡಿಸಿಕೊಳ್ಳದೆ ಎಲ್ಲೆಂದರಲ್ಲಿ ನುಗ್ಗುವುದು ತೀರಾ ಮಾಮೂಲಿ.
ತನ್ನ ಮನೆಯ ಎದುರಿನ ನೆಲದ ಮೇಲೆ ಕುಳಿತಿದ್ದ ಅಂಬಿಯಾ ಖಾತುನ್ ಸಿಕಾ/ಸಿಗಾ (ಹಳೆಯ ಮನೆಗಳಲ್ಲಿ ಕಾಣುತ್ತಿದ್ದ ಹುರಿ ಹಗ್ಗದ ಸಿಕ್ಕದ ರೀತಿಯದ್ದು) ತಯಾರಿಸುತ್ತಿದ್ದರು. ಈ ಸಿಕಾವನ್ನು ಪಾತ್ರೆ, ಬಿತ್ತನೆ ಬೀಜ, ಬಟ್ಟೆ, ಹಾಸಿಗೆ ಮತ್ತು ಒಡವೆಗಳನ್ನು ತೂಗು ಹಾಕಲು ಸಹ ಬಳಸಲಾಗುತ್ತದೆ. ಮಿಯಾ ಸಮುದಾಯದ ಪಾಲಿಗೆ ಸಿಕಾ ಕೇವಲ ಒಂದು ಅಲಂಕಾರಿಕ ವಸ್ತುವಲ್ಲ. ಇದು ಈ ಸಮುದಾಯದಲ್ಲಿ ತನ್ನದೇ ಆದ ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಸಹ ಹೊಂದಿರುವ ಕಲಾಕೃತಿ. ಸಿಕಾ ಅಸ್ಸಾಮಿನ ಮಿಯಾ ಮುಸ್ಲಿಂ ಮತ್ತು ಇಂದಿನ ಬಾಂಗ್ಲಾದೇಶದ ರೈತಾಪಿ ಜನರ ನಡುವೆ ಹೆಚ್ಚು ಜನಪ್ರಿಯ. ನೆರೆ ಹಾವಳಿ ಇರುವಂತಹ ಊರುಗಳಲ್ಲಿ ಮನೆಯ ಬೆಲೆ ಬಾಳುವ ವಸ್ತುಗಳು ನೆನಯದಂತೆ ಈ ಸಿಕಾ ನೋಡಿಕೊಳ್ಳುತ್ತದೆ.
71 ವರ್ಷದವರಾದ ಈ ಹಿರಿಯ ಕುಶಲಕರ್ಮಿ ಮಹಿಳೆ ಕೋಳಿ ಕೂಗುವುದಕ್ಕೂ ಮೊದಲೇ ಎದ್ದು ಕೆಲಸ ಶುರು ಮಾಡುತ್ತಾರೆ. ಮನೆಗೆಲಸಗಳನ್ನು ಮುಗಿಸಿದ ನಂತರ ಈ ಸೆಣಬಿನ ಕೆಲಸಕ್ಕೆ ಕೂರುತ್ತಾರೆ. ಅವರ ಕೆಲಸದ ಜಾಗವೆಂದರೆ ಒಂದೇ ಕೋಣೆಯ ತಗಡು ಮತ್ತು ಹುಲ್ಲಿನ ಮನೆಯ ಮುಂದಿನ ಅಂಗಳ. ಮನೆಯ ಅಂಗಳದಲ್ಲಿ ಬೆಳೆಯಲಾಗಿರುವ ಬೂದುಗುಂಬಳ ಬಳ್ಳಿ ಚಪ್ಪರದಂತೆ ಹರಡಿದ್ದು, ಅದರ ಎಲೆಗಳ ಸಂದಿಯಿಂದ ಇಣುಕುತ್ತಿದ್ದ ಬಿಸಿಲಿಗೆ ಅಂಬಿಯಾ ಅವರ ಬಳಿಯಿದ್ದ ಬಣ್ಣಬಣ್ಣದ ಮಣಿಗಳು ಹೊಳೆಯುತ್ತಿದ್ದವು.
















