ಹಿಂದೆಲ್ಲಾ ಇವರಿಗೆ ಇದು ಕಿರಿಕಿರಿಯನ್ನುಂಟು ಮಾಡುತ್ತಿತ್ತು.
ವಸೀಮ್ ಅವರು ಐದು ವರ್ಷ ಪ್ರಾಯದ ಬಾಲಕನಾಗಿದ್ದಾಗ ವಿಪರೀತ ಜ್ವರ ಬಂದು ತಮ್ಮ ನಡೆದಾಡುವ ಸಾಮರ್ಥ್ಯವನ್ನು ಕಳೆದುಕೊಂಡರು. "ಅವನು ಅಂಗಳದಲ್ಲಿ ಕುಸಿದು ಬಿದ್ದ. ಏಳುವುದಕ್ಕೂ ಸಾಧ್ಯವಾಗಲಿಲ್ಲ," ಎಂದು 55 ವರ್ಷ ಪ್ರಾಯದ ಅವರ ತಾಯಿ ಅನ್ವರಿ ನೆನಪಿಸಿಕೊಳ್ಳುತ್ತಾರೆ. "ಜೈಸೆ ಕೋಯಿ ಹವಾ ಲಗ್ ಗಯಿ ಹೋ [ಅವನಿಗೆ ಯಾವುದೋ ಕೆಟ್ಟ ಗಾಳಿ ಬಡಿದ ಹಾಗೆ]," ಎಂದು ಅವರು ಹೇಳುತ್ತಾರೆ.
"ಪೋಲಿಯೊ ಮಾರಾ ಥಾ [ನನಗೆ ಪೋಲಿಯೊ ಬಡಿದಿತ್ತು]," ಎಂದು ವಸೀಮ್ ಹೇಳುತ್ತಾರೆ.
ಬಾಲ್ಯದಲ್ಲಿ ಇವರ ತಂದೆ ಇವರನ್ನು ಸ್ಕೂಟರ್ನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ವಾಪಾಸ್ ಬರುವಾಗ ಇವರ ಅಣ್ಣ ಇವರನ್ನು ತಮ್ಮ ಬೆನ್ನಿನ ಮೇಲೆ ಹೊತ್ತುಕೊಂಡು ಬರುತ್ತಿದ್ದರು. ತಮ್ಮನ್ನು "ಪಿಡ್ಡಿ ಕರ್ಕೆ" ಕರೆದುಕೊಂಡು ಬರುತ್ತಿದ್ದರು ಎಂದು ವಸೀಮ್ ಹೇಳುತ್ತಾರೆ. ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತು ಒಬ್ಬರೇ ಮನೆಗೆ ನಡೆದುಕೊಂಡು ಬರುವಾಗ ಜನರು, “ಪಾಪಾ, ಬೇಜಾರಾಗುತ್ತದೆ, ಹೇಗೆ ನಡೆಯುತ್ತಿದ್ದಾನೆ ನೋಡಿ,” ಎಂದು ಮಾತನಾಡುವುದು ಆಗಾಗ ಇವರ ಕಿವಿಗೆ ಬೀಳುತ್ತಿತ್ತು. ಇಂತಹ ಮಾತುಗಳಿಂದ ಇವರ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು.
ಪೋಲಿಯೋ (ಪೋಲಿಯೊಮೈಲಿಟಿಸ್) ಐದು ವರ್ಷದೊಳಗಿನ ಮಕ್ಕಳಿಗೆ ಬರುವ ಒಂದು ಸಾಂಕ್ರಾಮಿಕ ವೈರಲ್ ಕಾಯಿಲೆ. ಇದು ಮುಖ್ಯವಾಗಿ ಮಲ ಮತ್ತು ಬಾಯಿಯ ಮೂಲಕ ಹರಡುತ್ತದೆ. ನರಮಂಡಲವನ್ನು ಆಕ್ರಮಿಸಿ, ಪಾರ್ಶ್ವವಾಯುವಿಗೆ ಕಾರಣವಾಗಬಹುದು. 1995 ರಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಬಾಯಿಯ ಮೂಲಕ ಲಸಿಕೆ ನೀಡುವ ಅಭಿಯಾನದ ನಂತರ, 2014 ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಲಾಯಿತು.
ವಸೀಮ್ ಅವರು 1991 ರಲ್ಲಿ ಜನಿಸಿದರು. ಜನಿಸಿದ ಕೆಲವೇ ವರ್ಷಗಳಲ್ಲಿ ಮಾರಕ ವೈರಸ್ಗೆ ತುತ್ತಾಗಿ, ತಮ್ಮ ದೇಹದ ಕೆಳಭಾಗ ಮತ್ತು ತೋಳುಗಳ ಅಂಗವೈಕಲ್ಯತೆಗೆ ಒಳಗಾದರು. ಬೇರೆಯವರ ಸಹಾಯವಿಲ್ಲದೆ ನಡೆಯಲು ಮತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಇದು ನಡೆದಾಗ ಅವರಿಗೆ ನಾಲ್ಕೈದು ವರ್ಷ ಪ್ರಾಯ. ಇವರು ಅಂದಿನಿಂದ ಎಲ್ಲಾ ದೈನಂದಿನ ಕೆಲಸಗಳಿಗೆ ತಮ್ಮ ಪ್ರೀತಿಯ ಕುಟುಂಬವನ್ನು ಅವಲಂಬಿಸಿದ್ದಾರೆ. ಸ್ವಲ್ಪ ದೂರ ಹೋಗಲೂ ವಸೀಮ್ ಅವರು ತಮ್ಮ ಕೈಗಳಿಗೆ ಚಪ್ಪಲಿಗಳನ್ನು ಹಾಕಿಕೊಂಡು, ತಮ್ಮ ಕೈಗಳ ಮೇಲೆ ಇಡೀ ದೇಹದ ತೂಕವನ್ನು ಹಾಕಿ ತೆವಲಿಕೊಂಡು ಹೋಗುತ್ತಾರೆ.
"ನನ್ನ ತಂದೆ [ವಹೀದ್ ಖುರೇಷಿ] ನನ್ನನ್ನು ಮತ್ತು ನನ್ನ ಸಹೋದರರನ್ನು ಬೇರೆ ಬೇರೆ ಎಂದು ಯಾವತ್ತೂ ನೋಡಲಿಲ್ಲ,” ಎಂದು ವಸೀಮ್ ಹೇಳುತ್ತಾರೆ. ಇವರಿಗೆ 11 ಮಂದಿ ಒಡಹುಟ್ಟಿದವರಿದ್ದಾರೆ. ಆದರೆ ಪೋಲಿಯೊ ಸೋಂಕಿಗೆ ಒಳಗಾದವರು ಇವರು ಮಾತ್ರ. ಒಮ್ಮೆ ಇವರ ಸಹೋದರರು ನಗೀನಾದಲ್ಲಿ ನಡೆಯುತ್ತಿದ್ದ ರಾಮಲೀಲಾ ನೋಡಲು ಇವರನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಆಗ ತುಂಬಾ ಅಳುತ್ತಿದ್ದ ಇವರನ್ನು ಇವರ ತಂದೆ ತಮ್ಮ ಸ್ಕೂಟರ್ನಲ್ಲಿ ಅಲ್ಲಿಗೆ ಕರೆದುಕೊಂಡು ಹೋದರು.