"ಪ್ರತಿದಿನ ನೀರು ತರಲು ನಮ್ಮ ಹಳ್ಳಿಯ ಹೊರಭಾಗದಲ್ಲಿರುವ ಬಾವಿಗೆ ಒಂದೂವರೆ ಕಿಲೋಮೀಟರ್ ನಡೆದುಕೊಂಡು ಹೋಗುತ್ತೇನೆ. ಈ ಕೆಲಸವನ್ನು ದಿನಕ್ಕೆ ನಾಲ್ಕು ಬಾರಿ ಮಾಡುತ್ತೇನೆ. ನಮ್ಮ ಹಳ್ಳಿಯಲ್ಲಿ ನೀರಿಲ್ಲ. ಬೇಸಿಗೆಯಲ್ಲಿ ಇನ್ನಷ್ಟು ಕಷ್ಟವಾಗಲಿದೆ. ಬಾವಿಯಲ್ಲಿನ ನೀರು ಈಗಾಗಲೇ ಕಡಿಮೆಯಾಗುತ್ತಿದೆ..." ಎಂದು ಕಳೆದ ವರ್ಷದಂತೆಯೇ ಈ ವಾರ ನಾಸಿಕ್-ಮುಂಬೈ ರೈತರ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಭೀಮಾಬಾಯಿ ದಂಬಳೆ ದುಃಖದಿಂದ ಹೇಳಿದರು.
"ಕಳೆದ ವರ್ಷ ಮಳೆ ಕೊರತೆಯಿಂದಾಗಿ ನಾನು ಬೆಳೆದ ಭತ್ತದ ಬೆಳೆಯನ್ನು ಕಳೆದುಕೊಂಡೆ. ಪ್ರತಿ ವರ್ಷ ನಮ್ಮ ಐದು ಎಕರೆ ಭೂಮಿಯಲ್ಲಿ 8-10 ಕ್ವಿಂಟಾಲ್ ಭತ್ತ ಸಿಗುತ್ತಿತ್ತು. ಆದರೆ ಈ ಹಂಗಾಮಿನಲ್ಲಿ ಎರಡು ಕ್ವಿಂಟಾಲ್ ಕೂಡ ಸಿಗಲಿಲ್ಲ. ಭೂಮಿ ನಮ್ಮ ಹೆಸರಿನಲ್ಲಿ ಇಲ್ಲದ ಕಾರಣ ನಮಗಾದ ಕೃಷಿ ನಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ. ಅದು ಅರಣ್ಯ ಇಲಾಖೆಗೆ ಸೇರಿದ್ದು" ಎಂದು ನಾಸಿಕ್ ಜಿಲ್ಲೆಯ ಪೇಂಟ್ ತಾಲ್ಲೂಕಿನ ನಿರ್ಗುಡೆ ಕಾರಂಜಲಿ ಗ್ರಾಮದಲ್ಲಿ ವಾಸಿಸುವ 62 ವರ್ಷದ ಭೀಮಾಬಾಯಿ ಹೇಳಿದರು.
ಭತ್ತದ ಕೊಯ್ಲಿನ ನಂತರ, ಭೀಮಾಬಾಯಿ ರಾಗಿ, ಉದ್ದು ಮತ್ತು ತೊಗರಿ ಬೆಳೆಯುತ್ತಿದ್ದರು. ಈ ಕೃಷಿ ಋತುವಿನಲ್ಲಿ ಅದೆಲ್ಲವೂ ನಿಂತುಹೋಗಿದೆ. ಆದ್ದರಿಂದ ಭೀಮಾಬಾಯಿ ಪ್ರತಿದಿನ 30-40 ಕಿಲೋಮೀಟರ್ ದೂರದಲ್ಲಿರುವ ದಿಯೋಲಾಲಿ ಮತ್ತು ಸೋಂಗಿರಿಯಂತಹ ಹಳ್ಳಿಗಳಿಗೆ ದ್ರಾಕ್ಷಿ, ಟೊಮೆಟೊ ಮತ್ತು ಈರುಳ್ಳಿ ಕೀಳವ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾರೆ. "ನಾನು ದಿನಕ್ಕೆ 150 ರೂಪಾಯಿ ಸಂಪಾದಿಸುತ್ತೇನೆ ಮತ್ತು ಆಟೋಗಳಲ್ಲಿ ಪ್ರಯಾಣಕ್ಕಾಗಿ 40 ರೂ. ಖರ್ಚು ಮಾಡುತ್ತೇನೆ. ಪ್ರತಿದಿನ ಸಂಪಾದಿಸುತ್ತೇನೆ, ಪ್ರತಿದಿನ ಖರ್ಚು ಮಾಡುತ್ತೇನೆ" ಎಂದು ನಿಟ್ಟುಸಿರು ಬಿಟ್ಟರು.




