ಉತ್ತಮ ವೇತನವನ್ನು ಅರಸುತ್ತಾ 2015ರಲ್ಲಿ, ಚಿತ್ತರಂಜನ್ ರೇ, ಪಶ್ಚಿಮ ಬಂಗಾಳದ ಗಡಾಂಗ್ ಗ್ರಾಮದಿಂದ ತಮ್ಮ 28ನೇ ವಯಸ್ಸಿನಲ್ಲಿ, ದೂರದ ಕೇರಳಕ್ಕೆ ಹೊರಟರು. ಅವರು ರಾಜ್ಯಾದ್ಯಂತ ಕಲ್ಲುಕುಟಿಗನ ಕೆಲಸದಲ್ಲಿ ನಿರತರಾಗಿದ್ದು, ಸ್ವಲ್ಪ ಹಣವನ್ನು ಉಳಿಸಿ, ಎಂಟು ಬಿಘಾ ಗುತ್ತಿಗೆ ಭೂಮಿಯಲ್ಲಿ ಕೃಷಿಯನ್ನು ಕೈಗೊಳ್ಳಲು ಹಿಂತಿರುಗಿದರು. ಇದಕ್ಕೂ ಮೊದಲು ಕುಟುಂಬದ ಕೃಷಿಭೂಮಿಯಲ್ಲಿ ಕೆಲಸ ಮಾಡಿದ್ದ ಇವರು, ಸ್ವಂತವಾಗಿ ಆಲೂಗಡ್ಡೆ ಕೃಷಿಯಲ್ಲಿ ತೊಡಗುವ ಮೂಲಕ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಬಯಸಿದ್ದರು.
ತಮ್ಮ 50ರ ವಯಸ್ಸಿನ ಆರಂಭದಲ್ಲಿರುವ ಇವರ ಕೃಷಿಕ ಚಿಕ್ಕಪ್ಪ, ಉತ್ತಮ್ ರೇ, "ಭೂಮಿಯನ್ನು ಮೊದಲ ಬಾರಿಗೆ ಕೃಷಿ ಮಾಡುತ್ತಿದ್ದ ಕಾರಣ, ಹೆಚ್ಚಿನ ಕಠಿಣ ಪರಿಶ್ರಮ ಮತ್ತು ಹೆಚ್ಚಿನ ಹೂಡಿಕೆಗಳನ್ನು ಬಯಸುತ್ತಿತ್ತು. ಉತ್ತಮ ಫಸಲಿನೊಂದಿಗೆ ಲಾಭ ಗಳಿಸಬಹುದೆಂದು ಆಶಿಸುತ್ತಾ, ಚಿತ್ತರಂಜನ್, ಸ್ಥಳೀಯ ಲೇವಾದೇವಿಗಾರರಿಂದ ಮತ್ತು ಬ್ಯಾಂಕಿನಿಂದ ಕಾಲಾಂತರದಲ್ಲಿ, "ಅತಿ ಹೆಚ್ಚಿನ ಬಡ್ಡಿದರಗಳಲ್ಲಿ" ಒಟ್ಟು 5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದರು ಎಂದು ತಿಳಿಸಿದರು. ಆದರೆ 2017ರಲ್ಲಿ, ಭಾರೀ ಮಳೆಯ ನಂತರ ಭೂಮಿಯು ನೀರಿನಿಂದ ಆವೃತಗೊಂಡು, ಬೆಳೆಯು ನಾಶವಾಯಿತು. ನಷ್ಟವನ್ನು ಭರಿಸಲಾಗದೆ, 30 ವರ್ಷದ ಚಿತ್ತರಂಜನ್ ಆ ವರ್ಷ ಜುಲೈ 31ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡರು.
"ಅವನ ಹೆತ್ತವರು ಆತನಿಗೆ ಮದುವೆ ಮಾಡಲು ಉತ್ಸುಕರಾಗಿದ್ದರು" ಎಂಬುದಾಗಿ ಜಲ್ಪೈಗುರಿ ಜಿಲ್ಲೆಯ ಧೂಪ್ಗುರಿ ವಲಯದ ಅದೇ ಗ್ರಾಮದ ರೈತ ಚಿಂತಮೋಹನ್ ರಾಯ್ ತಿಳಿಸಿದರು. ಅವರು ಐದು ಬಿಘಾಗಳಲ್ಲಿ (1 ಬಿಘಾ ಎಂದರೆ 0.33 ಎಕರೆ) ಆಲೂಗಡ್ಡೆ, ಭತ್ತ ಮತ್ತು ಸೆಣಬನ್ನು ಬೆಳೆಯುತ್ತಾರೆ. "ಅವರು ಬ್ಯಾಂಕ್ ಸಾಲಕ್ಕೆ ಅರ್ಹರಲ್ಲದ ಕಾರಣ, ಅವರ ತಂದೆ ಅದನ್ನು ಆತನ ಪರವಾಗಿ ತೆಗೆದುಕೊಂಡರು." ಮಗನ ಮೃತ್ಯುವಿನ ನಂತರ, 60 ವರ್ಷದ ತಂದೆ ಸಾಲದಿಂದ ಹೈರಾಣಾಗಿದ್ದು, ಮೃತ ಯುವಕನ ತಾಯಿಯು ರೋಗಪೀಡಿತರಾಗಿದ್ದಾರೆ.
ಚಿಂತಮೋಹನ್ ಅವರು ಸಹ ತಮ್ಮ ಕುಟುಂಬದಲ್ಲಿ ಇತ್ತೀಚೆಗೆ ಆತ್ಮಹತ್ಯೆಯನ್ನು ಕಂಡಿದ್ದಾರೆ. “ನನ್ನ 51 ವರ್ಷದ ಗಂಗಾಧರ್ ಎಂಬ ಹೆಸರಿನ ಸಹೋದರನು ಸರಳ ಸ್ವಭಾವದವನು. ಒತ್ತಡವನ್ನು ಭರಿಸಲಾಗದೆ ಕೀಟನಾಶಕವನ್ನು ಸೇವಿಸಿ 2019ನೇ ಜೂನ್ 23ರಂದು ಆತ್ಮಹತ್ಯೆ ಮಾಡಿಕೊಂಡ” ಎಂದರವರು.
“ಆತನು ತನ್ನ ಸ್ವಂತದ ಐದು ಬಿಘಾ ಜಮೀನಿನಲ್ಲಿ ಆಲೂಗೆಡ್ಡೆಯನ್ನು ಬೆಳೆಯುತ್ತಿದ್ದು, ಬ್ಯಾಂಕುಗಳು, ಲೇವಾದೇವಿಗಾರರು ಹಾಗೂ ಸಹಯೋಗಿ ವ್ಯಾಪಾರಿಗಳಿಂದ ಸಾಲವನ್ನು ಪಡೆದಿದ್ದ. ಕಳೆದ ಕೆಲವು ಋತುಗಳಲ್ಲಿ ಮರುಕಳಿಸುತ್ತಿದ್ದ ನಷ್ಟದಿಂದಾಗಿ, ತನ್ನನ್ನು ನಿಗ್ರಹಿಸಲಾರದ ಪರಿಸ್ಥಿತಿಗೆ ತಲುಪಿದ” ಎನ್ನುತ್ತಾರೆ 54ರ ವಯಸ್ಸಿನ ಚಿಂತಮೋಹನ್.
ಗಂಗಾಧರ್ ಅವರ ಜಮೀನಿನ ದೊಡ್ಡದೊಂದು ಭಾಗವು ಲೇವಾದೇವಿಗಾರರ ಅಡಮಾನದಲ್ಲಿದೆ. ಅವರ ಒಟ್ಟು ಸಾಲ ಸುಮಾರು ಐದು ಲಕ್ಷ ರೂ.ಗಳು. ಇವರ ವಿಧವೆಯು ಗೃಹಿಣಿ. ಮೂರು ಹೆಣ್ಣುಮಕ್ಕಳ ತಾಯಿ. ಹಿರಿಯ ಮಗಳು ಕಾಲೇಜಿನಲ್ಲಿದ್ದಾಳೆ. “ನಾವು ಸಹೋದರರು ಹಾಗೂ ಗಂಗಾಧರ್ನ ಅತ್ತೆ ಮಾವಂದಿರು ಹೇಗಾದರೂ ಮಾಡಿ ಇವರ ಯೋಗಕ್ಷೇಮವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ” ಎನ್ನುತ್ತಾರೆ ಚಿಂತಮೋಹನ್.







