ಪುತುಲ್ ದಲೋಯ್ ಅವರ ಪತಿ ಚಂದನ್ ಸತ್ತು ಆರು ತಿಂಗಳು ಕಳೆದಿವೆ. ಹೊಸದೆಹಲಿಯ ವಸಂತ್ ಕುಂಜ್ ಬಳಿಯ ಬೆಂಗಾಲಿ ಮೊಹಲ್ಲಾದಲ್ಲಿರುವ ಅವರ ಸಣ್ಣ ಮನೆಗೆ ತಲುಪಲು, ನೀವು ಹಸು-ಎಮ್ಮೆಗಳಿಂದ ತುಂಬಿದ ರಸ್ತೆಗಳ ಮೂಲಕ ಸಾಗಬೇಕಾಗುತ್ತದೆ. ಇದು ಹಾಲಿನ ವ್ಯಾಪಾರದ ಕೇಂದ್ರ ಮತ್ತು ಇಲ್ಲಿನ ಗಾಳಿಯಲ್ಲಿ ಎಲ್ಲೆಡೆ ಸಗಣಿಯ ವಾಸನೆ ಹರಡಿರುತ್ತದೆ. ಈ ಮೊಹಲ್ಲಾದಲ್ಲಿ ವಾಸಿಸುವ ಬಹುತೇಕ ಜನರು ಬಂಗಾಳಿ ವಲಸಿಗರು.
ಪುತುಲ್ (26) ಮನೆಯ ಗೋಡೆಯೊಂದರ ಮೇಲೆ, ಕಾಳಿ ಅವತಾರದಲ್ಲಿರುವ ದುರ್ಗಾ ದೇವಿಯ ಪೋಸ್ಟರ್ ಒಂದನ್ನು ತೂಗುಹಾಕಲಾಗಿದೆ. ಅದರ ಪಕ್ಕದಲ್ಲೇ ಅವರ ಪತಿಯ ಹಳೆಯ ಫೋಟೋವೊಂದಿದೆ. ಅವರ ಇತ್ತೀಚಿನ ಫೋಟೋವೊಂದನ್ನು ಮೇಜಿನ ಮೇಲೆ ಇರಿಸಲಾಗಿದ್ದು, ಅದರ ಮುಂದೆ ಊದುಬತ್ತಿ ಉರಿಯುತ್ತಿದೆ.
ಚಂದನ್ ದಲೋಯ್ (30 ವರ್ಷ) ಏಳು ವರ್ಷಗಳ ಕಾಲ ವಸಂತ್ ಸ್ಕ್ವೇರ್ ಮಾಲ್ನಲ್ಲಿ ಕೆಲಸ ಮಾಡಿದರು. ಅವರು ಸ್ವಚ್ಛತಾ ಸೇವೆಯನ್ನು ಒದಗಿಸಲು 'ವರ್ಲ್ಡ್ ಕ್ಲಾಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್' ನೇಮಿಸಿಕೊಂಡಿದ್ದ ಹೌಸ್ಕೀಪಿಂಗ್ ತಂಡದ ಭಾಗವಾಗಿದ್ದರು. 2016ರ ನವೆಂಬರ್ 11ರಂದು ಮಾಲ್ ಆವರಣದಲ್ಲಿದ್ದ ಸೆಪ್ಟಿಕ್ ಟ್ಯಾಂಕ್ ಒಂದನ್ನು ಸ್ವಚ್ಛಗೊಳಿಸುವಂತೆ ಚಂದನ್ ಮತ್ತು ಇನ್ನೊಬ್ಬ ಉದ್ಯೋಗಿಗೆ ಸೂಚಿಸಲಾಯಿತು. ಚಂದನ್ ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ ಟ್ಯಾಂಕಿಗೆ ಇಳಿದರು, ಅಲ್ಲಿ ವಿಷಾನಿಲದಿಂದಾಗಿ ಅವರಿಗೆ ಉಸಿರುಗಟ್ಟಿತು. ಅವರ ಸಹಾಯಕ್ಕೆಂದು ಒಳಗಡೆ ಧುಮುಕಿದ ಸಹದ್ಯೋಗಿ ಇಸ್ರೇಲ್ ಕೂಡ ಪ್ರಜ್ಞೆ ತಪ್ಪಿದರು. ಬೀಟ್ ಕಾನ್ಸ್ಟೇಬಲ್ ಒಬ್ಬರು ಹಗ್ಗವನ್ನು ಬಳಸಿ ಅವರನ್ನು ಟ್ಯಾಂಕಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು ಎಂದು ಸುದ್ದಿ ವರದಿಗಳು ತಿಳಿಸಿವೆ. ಅಲ್ಲಿ ತಲುಪಿದಾಗ ಚಂದನ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಇಸ್ರೇಲ್ ಅವರ ಪ್ರಾಣ ಉಳಿಯಿತು.
ಪುತುಲ್ ಹೀಗೆ ಹೇಳುತ್ತಾರೆ, “ನಾನು ಈ ಸುದ್ದಿಯನ್ನು ಕೇಳಿದಾಗ, ಮಾಲ್ ಕಡೆ ಓಡಿದೆ, ಆದರೆ ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. ಚಂದನ್ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ನನಗೆ ತಿಳಿಸಲಾಯಿತು. ಬೆಂಗಾಲಿ ಮೊಹಲ್ಲಾದ ನೂರಾರು ಜನರು ಆಸ್ಪತ್ರೆಯಲ್ಲಿ ಸೇರಿದ್ದರು, ಆದರೆ ನಮ್ಮನ್ನು ಅಲ್ಲಿಂದ ಓಡಿಸಲಾಯಿತು. ಅವರು ನನ್ನ ಪತಿ, ನಾನು ಅವರನ್ನು ನೋಡಬೇಕು ಎಂದು ನಾನು ಅಂಗಲಾಚಿದೆ. ನನ್ನ ಮಗನಿಗೂ ಕೂಡ ಒಳಗೆ ಹೋಗಲು ಅನುಮತಿ ನೀಡಲಿಲ್ಲ. ನಾವು ಅಪರಾಧಿಗಳೇನೋ ಎಂಬಂತೆ ನಮ್ಮನ್ನು ಅಲ್ಲಿಂದ ಹೊರಹಾಕಲಾಯಿತು."








