ನನ್ನ ಮನೆ ಇಂದಿರಾ ಕಾಲೋನಿ ಎಂಬ ಆದಿವಾಸಿ ಗ್ರಾಮದಲ್ಲಿದೆ. ವಿವಿಧ ಆದಿವಾಸಿ ಸಮುದಾಯಗಳ 25 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ನಮ್ಮ ಗ್ರಾಮದಲ್ಲಿ ನೀರಿನ ಟ್ಯಾಂಕ್ ಮತ್ತು ಶೌಚಾಲಯವಿದೆ, ಮತ್ತು ಕುಡಿಯುವ ನೀರಿಗಾಗಿ ಒಂದು ಬಾವಿಯಿದೆ.
ಹಳ್ಳಿಯ ಕೆಲವು ಜನರು ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದಾರೆ, ಮತ್ತು ಅವರು ಅದರಲ್ಲಿ ಭತ್ತ, ಬದನೆಕಾಯಿ, ಮೆಕ್ಕೆಜೋಳ, ಜುಲಾನಾ, ಬೆಂಡೆಕಾಯಿ, ಹಾಗಲಕಾಯಿ, ಕುಂಬಳಕಾಯಿ ಮತ್ತು ವಿವಿಧ ದ್ವಿದಳ ಧಾನ್ಯಗಳಾದ ಕೋಲಾಥಾ [ಹುರುಳಿ], ಕಂದುಲಾ [ತೊಗರಿ ಬೇಳೆ], ಹೆಸರುಬೇಳೆ ಇತ್ಯಾದಿಗಳನ್ನು ಬೆಳೆಯುತ್ತಾರೆ. ಹೆಚ್ಚಿನವರು ಭತ್ತವನ್ನು ಬೆಳೆಯುತ್ತಾರೆ ಏಕೆಂದರೆ ಅದು ನಮ್ಮ ಮುಖ್ಯ ಆಹಾರ. ಭತ್ತದ ಬೇಸಾಯವು ಮಳೆಗಾಲದಲ್ಲಿ ನಡೆಯುತ್ತದೆ.
ಸುಗ್ಗಿಯ ಸಮಯದಲ್ಲಿ ನಮ್ಮ ಬಳಕೆಗಾಗಿ ನಾವು ಸ್ವಲ್ಪ ಭತ್ತವನ್ನು ಇಟ್ಟುಕೊಂಡು ಉಳಿದ ಪ್ರಮಾಣವನ್ನು ಮಾರಾಟ ಮಾಡುತ್ತೇವೆ. ಮಾರಾಟದ ನಂತರ ನಾವು ಗಳಿಸುವ ಹಣವು ರಸಗೊಬ್ಬರಗಳು ಮತ್ತು ಇತರ ಒಳಸುರಿಗಳ ವೆಚ್ಚವನ್ನು ಅವಲಂಬಿಸಿರುತ್ತದೆ.
ನಮ್ಮ ಹಳ್ಳಿಯ ಕೆಲವು ಮನೆಗಳು ಹುಲ್ಲಿನ ಮನೆಗಳು. ಈ ಮನೆಗಳು ಬಿಸಿಲು, ಮಳೆ ಮತ್ತು ಚಳಿಯಿಂದ ನಮ್ಮನ್ನು ರಕ್ಷಿಸುತ್ತವೆ. ಪ್ರತಿ ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಮಾಡಿನ ಹುಲ್ಲನ್ನು ಬದಲಾಯಿಸಬೇಕಾಗುತ್ತದೆ. ನಮ್ಮ ಮನೆಗಳನ್ನು ಮರುವಿನ್ಯಾಸಗೊಳಿಸಲು ನಾವು ಆಗುಲಿ ಹುಲ್ಲು, ಸಾಲುವಾ, ಬಿದಿರು, ಲಾಹಿ ಮತ್ತು ಕಾಡಿನ ಮರವನ್ನು ಬಳಸುತ್ತೇವೆ.








