"ಫಿಲ್ಮ್ ಮೇ ಹೋನಾ ಚಾಹಿಯೇ ಲವ್ ಸ್ಟೋರಿ, ಕುಚ್ ಎಮೋಷನಲ್ ಸಾ [ಸಿನೇಮಾದಲ್ಲಿ ಪ್ರೇಮಕಥೆ ಇರಬೇಕು, ಭಾವನಾತ್ಮಕವಾಗಿರಬೇಕು],” ಎಂದು 36 ವರ್ಷ ಪ್ರಾಯದ ಶ್ಯಾಮ್ ಸಿಂಗ್ ಹೇಳುತ್ತಾರೆ. ಮುಂಬೈಯ ಗ್ರಾಂಟ್ ರೋಡ್ ಪ್ರದೇಶದಲ್ಲಿರುವ ಸಿಂಗಲ್ ಸ್ಕ್ರೀನ್ ಸಿನೇಮಾ ಥಿಯೇಟರ್ ಆಲ್ಫ್ರೆಡ್ ಟಾಕೀಸ್ನ ಲಾಬಿಯಲ್ಲಿ ಕುಳಿತಿದ್ದ ಇವರು, "ಫೈಟಿಂಗ್ ಮತ್ತು ಆಕ್ಷನ್ ಸೀನ್ಗಳು ಎಲ್ಲಾ ಇರಬೇಕು ಸರಿ, ಆದರೆ ನನಗೆ ಲವ್ ಸ್ಟೋರಿ ಇಷ್ಟ,” ಎಂದು ನಗುತ್ತಾ ಹೇಳಿದರು.
ಅದು ಡಿಸೆಂಬರ್ ತಿಂಗಳ ಒಂದು ಮಧ್ಯಾಹ್ನ. ಶ್ಯಾಮ್ ಅವರು 3 ಗಂಟೆಗೆ ಸಿನೇಮಾ ಶುರುವಾಗಲು ಕಾಯುತ್ತಿದ್ದರು. ರಾಮ್ ತೇರಿ ಗಂಗಾ ಮೈಲಿ ಎಂಬ ಬ್ಲಾಕ್ ಬಸ್ಟರ್ ಸಿನೇಮಾದ ಕೈಯಿಂದ ರಚಿಸಲಾಗಿರುವ ಬ್ಯಾನರ್ ಕಟ್ಟಡದ ಪ್ರವೇಶದ್ವಾರದಲ್ಲಿ ನೇತಾಡುತ್ತಿತ್ತು. ಸುಮಾರು ನಾಲ್ಕು ದಶಕಗಳ ಹಿಂದೆ 1985 ರಲ್ಲಿ ಬಿಡುಗಡೆಯಾದ ಈ ಬಾಲಿವುಡ್ ಸೂಪರ್ ಹಿಟ್ ಸಿನೇಮಾ ಈಗಲೂ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ.
"ರೋಜಾನಾ 3 ಖೇಲ್" ಎಂದು ಹಿಂದಿ ಮತ್ತು ಉರ್ದುವಿನಲ್ಲಿ ಬರೆದಿದ್ದ ಸೂಚನಾ ಫಲಕವೊಂದು ಆಲ್ಫ್ರೆಡ್ ಟಾಕೀಸ್ ಪ್ರವೇಶದ್ವಾರದಲ್ಲಿ ನೇತಾಡುತ್ತಿತ್ತು. ಅದರಲ್ಲಿ – ಮಧ್ಯಾಹ್ನ ಮೊದಲ ಪ್ರದರ್ಶನ, ಮಧ್ಯಾಹ್ನ 3 ಗಂಟೆಗೆ ಎರಡನೆಯ ಪ್ರದರ್ಶನ ಮತ್ತು ಸಂಜೆ 6 ಗಂಟೆಗೆ ಕೊನೆಯ ಪ್ರದರ್ಶನ - ಎಂದು ದಿನದ ಮೂರು ಪ್ರದರ್ಶನಗಳ ವೇಳಾಪಟ್ಟಿಯನ್ನು ಹಾಕಲಾಗಿತ್ತು.
ಶ್ಯಾಮ್ ಅವರು ಮೂರು ವರ್ಷಗಳ ಹಿಂದೆ ಒಳ್ಳೆಯ ಸಂಬಳದ ಕೆಲಸ ಹುಡುಕಿಕೊಂಡು ನೇಪಾಳದಿಂದ ಮುಂಬೈಗೆ ಬಂದರು. "ಹಮೇ ಮೂವಿ ದೇಖ್ನೆ ಕಾ ಶೌಕ್ ಹೈ [ನನಗೆ ಸಿನೇಮಾ ನೋಡುವುದು ಇಷ್ಟ],” ಎಂದು ಅವರು ಹೇಳುತ್ತಾರೆ.
"ಆಲ್ಫ್ರೆಡ್ ಟಾಕೀಸ್ ನಲ್ಲಿ ಟಿಕೆಟ್ ರೇಟು ಕೂಡ ತುಂಬಾ ಕಡಿಮೆ. ಯಾವಾಗ ಬೇಕಾದರೂ ನಮಗೆ ಬರಬಹುದು. ದುಬಾರಿ ಥಿಯೇಟರ್ಗೆ ಹೋಗಿ ಸಿನೇಮಾ ನೋಡುವಷ್ಟು ಸಂಪಾದನೆ ನನಗಿಲ್ಲ,” ಎಂದು ಅವರು ಹೇಳುತ್ತಾರೆ. ಇಲ್ಲಿ ಒಂದು ಟಿಕೆಟ್ ಬೆಲೆ 35 ರುಪಾಯಿ ಮಾತ್ರ.
ಶ್ಯಾಮ್ ಅವರು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಅವರು ಕಾರ್ಯಕ್ರಮಗಳಿಗೆ ಊಟ ತಯಾರಿಸುವ, ಬಡಿಸುವ ಮತ್ತು ಸ್ವಚ್ಛಗೊಳಿಸುವ ಮೊದಲಾದ ಅಡುಗೆಮನೆ ಕೆಲಸಗಳನ್ನು ಮಾಡುತ್ತಾರೆ. ಗ್ರಾಂಟ್ ರೋಡ್ ಪ್ರದೇಶದ ಹತ್ತಿರ ವಾಸಿಸುವ ಇವರ ತಿಂಗಳ ಸಂಪಾದನೆ ಸುಮಾರು 9,000 ರುಪಾಯಿಗಳು. ಇವರ ಕುಟುಂಬವು ನೇಪಾಳದ ಬುಟ್ವಾಲ್ ನಗರದಲ್ಲಿ ವಾಸಿಸುತ್ತಿದೆ.


















