ಅಪೂರ್ಣಗೊಂಡಿರುವ ಕೆಸರಿನ ದಾರಿಗಳು ಕಿ.ಮೀ.ಗಳವರೆಗೆ ವ್ಯಾಪಿಸಿವೆ. ಇವುಗಳನ್ನು ದಾಟಿ, ಸೌರಾದಲ್ಲಿನ ಆಸ್ಪತ್ರೆಯೆಡೆಗಿನ ಪ್ರಯಾಣವು ಪುನರಾವರ್ತಿತ ಹೋರಾಟವೇ ಸರಿ. ತಮ್ಮ ಮಗ ಮೊಹ್ಸಿನ್ನ ವೈದ್ಯಕೀಯ ಸಮಾಲೋಚನೆಗಾಗಿ ಮುಬಿನ ಮತ್ತು ಅರ್ಷಿದ್ ಹುಸೇನ್ ಅಖೂನ್, ಕನಿಷ್ಠ ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ಭೇಟಿ ನೀಡಬೇಕು. ರಖ್-ಎ-ಅರ್ಥ್ ಪುನರ್ವಸತಿ ಕಾಲೋನಿಯಲ್ಲಿ ಕೆಲವೊಮ್ಮೆ ಕೊಳಚೆ ನೀರು ಮತ್ತು ಕರಗುತ್ತಿರುವ ಹಿಮದಿಂದ ತುಂಬಿ ಹರಿಯುತ್ತಿರುವ ಬೀದಿಗಳನ್ನು ದಾಟಿ ಅರ್ಷಿದ್, ಸುಮಾರು ಒಂಬತ್ತು ವರ್ಷದ ಬಾಲಕನನ್ನು ತಮ್ಮ ತೋಳುಗಳಲ್ಲಿ ಹೊತ್ತೊಯ್ಯುತ್ತಾರೆ.
ಸಾಮಾನ್ಯವಾಗಿ, 2-3 ಕಿ.ಮೀ. ನಡೆದ ನಂತರ ಅವರಿಗೆ ಆಟೊರಿಕ್ಷಾ ದೊರೆಯುತ್ತದೆ. 500 ರೂ.ಗಳನ್ನು ಪಾವತಿಸಿದಲ್ಲಿ, ಅದು ಅವರನ್ನು ಸುಮಾರು 10 ಕಿ. ಮೀ ದೂರದಲ್ಲಿನ ಶ್ರೀನಗರದ ಉತ್ತರ ಭಾಗದಲ್ಲಿರುವ ಸೌರ ಪ್ರದೇಶದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯುತ್ತದೆ. ಕೆಲವೊಮ್ಮೆ ಈ ಕುಟುಂಬವು ಇಡೀ ದಾರಿಯನ್ನು ಕಾಲ್ನಡಿಗೆಯಲ್ಲಿ ಸವೆಸಬೇಕಾಗುತ್ತದೆ. ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಆಸ್ಪತ್ರೆಯನ್ನು ತಲುಪಲು ಅವರು ಹೀಗೆ ಮಾಡಬೇಕಾಯಿತು. ಇದಕ್ಕೆ ಇಡೀ ದಿನ ತೆಗೆದುಕೊಳ್ಳುತ್ತದೆ ಎಂದರು ಮುಬಿನ.
ಮುಬಿನ ಮತ್ತು ಅರ್ಷದ್ ಅವರ ಪ್ರಪಂಚವು ಬದಲಾಗಿ ಸುಮಾರು 9 ವರ್ಷಗಳು ಸಂದಿವೆ. 2012ರಲ್ಲಿ, ಮೊಹ್ಸಿನ್, ಅತ್ಯಂತ ಹೆಚ್ಚಿನ ಮಟ್ಟದ ಬಿಲ್ರುಬಿನ್ನೊಂದಿಗೆ ಜ್ವರ ಮತ್ತು ಕಾಮಾಲೆಗೆ ಒಳಗಾದಾಗ ಆತನು ಹುಟ್ಟಿ ಕೆಲವೇ ದಿನಗಳಾಗಿದ್ದವು. ನಂತರದಲ್ಲಿ ವೈದ್ಯರ ಭೇಟಿಗಳ ಸರಣಿ ಮುಂದುವರಿಯಿತು. ಆತನು ಎರಡು ತಿಂಗಳ ಕಾಲ ಶ್ರೀನಗರದಲ್ಲಿನ ಮಕ್ಕಳ ಜಿ.ಬಿ. ಪಂತ್ ಸರ್ಕಾರಿ ಆಸ್ಪತ್ರೆಯಲ್ಲಿದ್ದನು. ಕೊನೆಗೆ, ಆತನ ಪರಿಸ್ಥಿತಿ ʼಅಸಹಜವಾಗಿದೆʼ ಎಂದು ಅವರಿಗೆ ತಿಳಿಸಲಾಯಿತು.
“ಆತನ ಪರಿಸ್ಥಿತಿಯು ಸುಧಾರಿಸದ ಕಾರಣ, ನಾವು ಖಾಸಗಿ ವೈದ್ಯರ ಬಳಿ ಕರೆದೊಯ್ದೆವು. ಅವರು, ಮೆದುಳು ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಆತನಿಗೆ ಕುಳಿತುಕೊಳ್ಳಲು ಹಾಗೂ ನಡೆದಾಡಲು ಎಂದಿಗೂ ಸಾಧ್ಯವಾಗದು” ಎಂದು ತಿಳಿಸಿದರು ಎಂಬುದಾಗಿ 30ರ ವಯಸ್ಸಿನ ಮುಬಿನ ನೆನಪಿಸಿಕೊಳ್ಳುತ್ತಾರೆ.
ಕೊನೆಗೆ, ಮೊಹ್ಸಿನ್ಗೆ ಸೆರೆಬ್ರಲ್ ಪಾಲ್ಸಿ ಇರುವುದು ಪತ್ತೆಯಾಯಿತು. ಈ ರೋಗನಿರ್ಣಯವಾದಾಗಿನಿಂದಲೂ, ಮುಬಿನ ತನ್ನ ಬಹುತೇಕ ಸಮಯವನ್ನು ಮಗನ ಪಾಲನೆ ಹಾಗೂ ಆತನ ಆರೋಗ್ಯದ ಕಾಳಜಿಯಲ್ಲಿ ಕಳೆದಿದ್ದಾರೆ. “ನಾನು ಆತನ ಮೂತ್ರವನ್ನು ಸ್ವಚ್ಛಗೊಳಿಸಬೇಕು, ಹಾಸಿಗೆಯನ್ನು ತೊಳೆಯಬೇಕಲ್ಲದೆ, ಅವನನ್ನು ಕುಳಿತುಕೊಳ್ಳುವಂತೆ ಮಾಡಬೇಕು. ದಿನವಿಡೀ ಅವನು ನನ್ನ ಮಡಿಲಿನಲ್ಲಿರುತ್ತಾನೆ” ಎಂದರವರು.










