ಮುಖ್ಯ ವೇದಿಕೆಯ ಮುಂಭಾಗದಲ್ಲಿದ್ದ ಜನರ ದೊಡ್ಡ ಸಮೂಹವು ಮೌನವಾಯಿತು. ಮೆಲ್ಲನೆ ತುಡಿಯುತ್ತದ್ದರ ಶಬ್ದವೆಂದರೆ, ಈ ಪ್ರತಿಯೊಬ್ಬ ವ್ಯಕ್ತಿಯ ನೂರಾರು ಕಿಲೋಮೀಟರ್ ದೂರದ ಊರಿನಲ್ಲಿ ಹಾಗೂ ಇಲ್ಲಿ ಒಗ್ಗಟ್ಟಿನಿಂದ ಮಿಡಿಯುತ್ತಿದ್ದ ಲಕ್ಷಾಂತರ ಜನರ ಹೃದಯ ಬಡಿತ. ನೇತಾರರು ಗೌರವಸೂಚಕವಾಗಿ ತಲೆ ತಗ್ಗಿಸಿ ನಿಂತಿದ್ದರು. ಅವರ ಉತ್ಸಾಹವು ಮೇರೆಮೀರಿತ್ತು. ತಮ್ಮ ಶಿರದ ಮೇಲೆ ಮಣ್ಣಿನ ಮಡಕೆಗಳನ್ನು ಹೊತ್ತ ಎಂಟು ಯುವಕರು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ವೇದಿಕೆಯನ್ನು ಹತ್ತುತ್ತಿದ್ದಂತೆಯೇ ಭಾವುಕ ಪರಿಸರದಲ್ಲಿ ಅದನ್ನು ವೀಕ್ಷಿಸುತ್ತಿದ್ದ ಎಲ್ಲರ ಕಣ್ಣುಗಳಲ್ಲಿ ನಿರೀಕ್ಷೆಯು ಮಡುಗಟ್ಟಿತ್ತು.
2021ನೇ ಮಾರ್ಚ್ 23ರಂದು ಭಗತ್ ಸಿಂಗ್, ರಾಜ್ಗುರು ಮತ್ತು ಸುಖ್ದೇವರ ತೊಂಬತ್ತನೇ ಹುತಾತ್ಮರ ದಿನದ ಪ್ರಯುಕ್ತ, ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರ ಜೊತೆಗೂಡಲು, ನೆನಪುಗಳು ಹಾಗೂ ಪವಿತ್ರ ಮಣ್ಣಿನಿಂದ ತುಂಬಿದ ಪ್ರತಿಯೊಂದು ಮಡಕೆಯು ಹಲವಾರು ಮೈಲುಗಳನ್ನು ಪ್ರಯಾಣಿಸಿತ್ತು.
“ಪಂಜಾಬಿನ ಈ ಯುವಕರು ನಮಗೆ ವಿಶೇಷವೆನಿಸಿದ, ನಮ್ಮ ಹೃದಯಗಳಲ್ಲಿ ನೆಲೆ ನಿಂತಿರುವ ಎಂಟು ಐತಿಹಾಸಿಕ ಸ್ಥಳಗಳಿಂದ ಮಣ್ಣನ್ನು ತಂದಿದ್ದು, ಅವರನ್ನು ನಾವು ಸ್ವಾಗತಿಸುತ್ತಿದ್ದೇವೆ” ಎಂಬುದಾಗಿ ವೇದಿಕೆಯಿಂದ ರೈತರ ಮುಖಂಡ ಜಿತೇಂದರ್ ಸಿಂಘ್ ಘೋಷಿಸಿದರು.
ರೈತರ ಜೀವನದಲ್ಲಿ ಸದಾ ಭೌತಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಪಡೆದಿರುವ ಮಣ್ಣು, ಈ ಹುತಾತ್ಮರ ದಿನದಂದು ಹೊಸ ಐತಿಹಾಸಿಕ, ರಾಜಕೀಯ ಹಾಗೂ ಲಾಕ್ಷಣಿಕ ಅರ್ಥವನ್ನು ಪಡೆದುಕೊಂಡಿತು. ಅವರ ಹೃದಯಗಳಿಗೆ ಪವಿತ್ರವೆನಿಸಿದ ಮಣ್ಣನ್ನು ಹುತಾತ್ಮರ ವಿವಿಧ ಗ್ರಾಮಗಳಿಂದ ತರುವ ಈ ಪ್ರಕ್ರಿಯೆಯು ಪ್ರತಿಭಟನಾನಿರತ ರೈತರಿಗೆ ಮರುಚೈತನ್ಯವನ್ನು ನೀಡಿ ಅವರಿಗೆ ಪ್ರೇರಣೆ ನೀಡುವ ಮಾರ್ಗವಾಗಿತ್ತು. ಇದರ ಕಲ್ಪನೆ ಮೂಡಿದ್ದು, ರೈತರ ಸಂಘಗಳು ಮತ್ತು ಕಾರ್ಯಕರ್ತರ ಜಿಲ್ಲಾ ಮಟ್ಟದ ಸಭೆಗಳ ಸಾಮಾನ್ಯ ಜನರಲ್ಲಿ.










