ಮಿನತಿ ಮಾರ್ಡಿ ವಾಸವಿರುವುದು ಸುಂದರ ಪರಿಸರದ ನಡುವೆ – ಅಜೋಯ್ ನದಿ ಅವಳ ಮನೆಯ ಪಕ್ಕದಲ್ಲೇ ಹರಿಯುತ್ತದೆ ಮತ್ತು ಅವಳ ಮನೆಯ ಕಮಲದ ಕೊಳಗಳ ಪಕ್ಕದಲ್ಲೇ ರೈಲು ಶಿಳ್ಳೆ ಹೊಡೆಯುತ್ತಾ ಸಾಗುತ್ತದೆ.
ಆದರೆ ಬೆನ್ನುಮೂಳೆ ಮತ್ತು ಕಾಲುಗಳ ಕ್ಷಯರೋಗದ ಸೋಂಕಿನ ಸಮಸ್ಯೆಯೊಂದಿಗೆ ಜನಿಸಿದ ಈ ಐದು ವರ್ಷದ ಬಾಲಕಿ, ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಮಹುಲಾ ಗ್ರಾಮದ ಸುತ್ತಮುತ್ತ ಓಡಾಡಲು ಅಥವಾ ನಡೆಯಲು ಸಾಧ್ಯವಾಗದೆ ಕೇವಲ ದೂರದಿಂದ ನೋಡಿ ಆನಂದಿಸುತ್ತಿದ್ದಳು.
"ಅವಳ ಬೆನ್ನುಮೂಳೆ ತೀವ್ರವಾಗಿ ವಿರೂಪಗೊಂಡಿತ್ತು," ಎಂದು ಅವಳ ಅಜ್ಜಿ ಜಬಾ ಮಾರ್ಡಿ ನೆನಪಿಸಿಕೊಳ್ಳುತ್ತಾರೆ. "ಅವಳು ತುಂಬಾ ಕಷ್ಟಪಡುತ್ತಿದ್ದಳು, ಅವಳು ಬದುಕುಳಿಯುತ್ತಾಳೆ ಎನ್ನುವ ಆಸೆ ನಮಗೆ ಇರಲಿಲ್ಲ."
ಸಂತಾಲ್ ಜನರು ರಾಜ್ಯದ ಆದಿವಾಸಿ ಜನಸಂಖ್ಯೆಯ ಸುಮಾರು ಅರ್ಧದಷ್ಟು ಭಾಗವನ್ನು ಒಳಗೊಂಡಿದ್ದಾರೆ ಮತ್ತು ಅವರು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಇವರು ತಮ್ಮ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಸ್ಥಳೀಯ ವೈದ್ಯರ ಮೇಲೆ ಅವಲಂಬಿತರಾಗಿದ್ದಾರೆ. ಈ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ (ಪಿಎಚ್ಸಿ) ಆರೋಗ್ಯ ಸೌಲಭ್ಯಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ (ಗ್ರಾಮೀಣ ಆರೋಗ್ಯ ಅಂಕಿಅಂಶ 2021-22).
ಮಗು ಮಿನತಿಗೆ ಗಂಭೀರ ಉಸಿರಾಟದ ಸಮಸ್ಯೆಗಳು ಆರಂಭವಾದಾಗ, ಕುಟುಂಬವು ಅವಳನ್ನು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದಿತು. ಆ ವೈದ್ಯ ಪ್ರಮಾಣೀಕೃತ ವೈದ್ಯಕೀಯ ವೃತ್ತಿಪರನೇ ಎನ್ನುವುದರ ಕುರಿತು ಅವರಿಗೆ ಖಚಿತವಾಗಿ ತಿಳಿದಿರಲಿಲ್ಲ. ಬೀರ್ಭೂಮ್ ಜಿಲ್ಲೆಯ, ಸೀವ್ಡಿ- I ಬ್ಲಾಕ್ನ ಈ ದೂರದ ಭಾಗದಲ್ಲಿ ವಾಸಿಸುವ ಇವರಿಗೆ ಅದೆಲ್ಲ ತಿಳಿಯುವುದು ಅಸಾಧ್ಯದ ಮಾತು. ನಾವು ಅರ್ಹ ವೈದ್ಯಕೀಯ ವೃತ್ತಿಪರರನ್ನು ಎಲ್ಲಿ ಹುಡುಕಬೇಕು ಎಂಬುದು ತಿಳಿಯದ ಸ್ಥಿತಿಯಲ್ಲಿದ್ದೆವು ಎಂದು ಜಬಾ ಹೇಳುತ್ತಾರೆ.


