"ಪ್ರತಿ ವರ್ಷ ಬೇಸಿಗೆಯಲ್ಲಿ, ನಾವು ಒಂದು ತಿಂಗಳ ಮಟ್ಟಿಗೆ ಇಲ್ಲಿಗೆ ಬರುತ್ತೇವೆ, ಇಲ್ಲಿ ಒಂದಷ್ಟು ಹಣವನ್ನು ಸಂಪಾದಿಸಬಹುದು" ಎಂದ ಶಾಂತಿ, ತಮ್ಮ ವರ್ಣರಂಜಿತ ದುಪಟ್ಟಾವನ್ನು ಹಣೆಯ ಹತ್ತಿರ ಎಳೆದುಕೊಂಡರು. ಅಲ್ಲೇ ಪಕ್ಕದಲ್ಲಿ ಅವರ ಒಂಬತ್ತು ವರ್ಷದ ಮೊಮ್ಮಗ ಅಮರಜೀತ್ ರಾವಣಹಠ್ಠಾ ವಾದ್ಯವನ್ನು ನುಡಿಸುತ್ತಿದ್ದ. ಅವನ ಬಳಿ ನುಡಿಸುವುದನ್ನು ಮುಂದುವರೆಸುವಂತೆ ಅವರು ಹೇಳಿದರು.
ಶಾಂತಿ ಮತ್ತು ಅಮರ್ಜೀತ್ (ಕವರ್ ಫೋಟೋದ ಮೇಲ್ಭಾಗದಲ್ಲಿರುವವರು) ಬೆಟ್ಟದ ಶಿಖರಕ್ಕೆ ಹೋಗುವ ದಾರಿಯಲ್ಲಿ ನಮಗೆ ಎದುರಾದರು; ಅವರಿಬ್ಬರೂ ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿ ಸ್ವಲ್ಪವೇ ಮೇಲೆ ಬರುವ ಮೆಕ್ಲಿಯೋಡ್ಗಂಜ್ ಬಳಿಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ನಡ್ಡಿ ಗ್ರಾಮದಲ್ಲಿ, ರಸ್ತೆಯ ಪಕ್ಕದ ಒಂದು ಎತ್ತರದ ಜಾಗದಲ್ಲಿ ಕುಳಿತಿದ್ದರು.
ಶಾಂತಿ ಅವರು ಕ್ಷಮೆಯಾಚಿಸುವ ಧಾಟಿಯಲ್ಲಿ ನಮಗೆ ಹೀಗೆ ಹೇಳಿದರು: “ಹುಡುಗನ (ಅಮರ್ಜೀತ್) ತಾತ ರಾವಣಹಠ್ಠ ನುಡಿಸುವುದರಲ್ಲಿ ಬಹಳ ನಿಪುಣರು, ಆದರೆ ಇಂದು ಅವರಿಗೆ ಹುಷಾರಿಲ್ಲದ ಕಾರಣ ಬರಲು ಸಾಧ್ಯವಾಗಲಿಲ್ಲ. ನಾವು ತಲೆತಲಾಂತರದಿಂದ ಈ ವಾದ್ಯವನ್ನು ನುಡಿಸುತ್ತಾ ಹಾಡುಗಳನ್ನು ಹಾಡುತ್ತಿದ್ದೇವೆ. ಆದರೆ ನನ್ನ ಮೊಮ್ಮಗನಿಗೆ ಇದನ್ನು ನುಡಿಸುವುದು ಇಷ್ಟವಿಲ್ಲ. ಈ ದಿನಗಳಲ್ಲಿ, ಮಕ್ಕಳು ಓದಬೇಕು ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ಅವನು ನಮ್ಮ ಊರಿನ ಶಾಲೆಗೆ ಹೋಗುತ್ತಿದ್ದಾನೆ.”
"ನೀನು ಎಷ್ಟನೇ ತರಗತಿ ಓದುತ್ತಿದ್ದೀಯಾ?" ಎಂದು ನಾನು ಅಮರ್ಜೀತ್ನನ್ನು ಕೇಳಿದೆ. ಅವನು ನಗುಮೊಗದಿಂದ, "ಚೌಥಿ ಮೇ [ನಾಲ್ಕನೇ ತರಗತಿಯಲ್ಲಿ]" ಎಂದು ಉತ್ತರಿಸಿದ.
ರಾವಣಹಠ್ಠ—ಅಕ್ಷರಶಃ ಇದರರ್ಥ ‘ರಾವಣನ ಹಸ್ತ’—ಇದು ಎರಡು ತಂತಿಗಳನ್ನು ಹೊಂದಿರುವ ಒಂದು ವಾದ್ಯ. ಇದರ ಒಂದು ತುದಿಯಲ್ಲಿ ತೆಂಗಿನ ಚಿಪ್ಪು ಮತ್ತು ಆಡಿನ ಚರ್ಮದಿಂದ ಮಾಡಿದ ಬಟ್ಟಲಿನಂತಹ ರಚನೆಯಿರುತ್ತದೆ. ಇದನ್ನು ನುಡಿಸುವವರು ಅರ್ಧ ತೆಂಗಿನ ಚಿಪ್ಪಿನ ಆ ತುದಿಯನ್ನು ತಮ್ಮ ಹೊಟ್ಟೆಯ ಭಾಗಕ್ಕೆ ಆನಿಸಿಕೊಂಡು, ಉದ್ದನೆಯ ಬಿದಿರಿನ ಕೋಲನ್ನು ಹೊರಮುಖವಾಗಿ ಹಿಡಿಯುತ್ತಾರೆ. ಇದರ ಉದ್ದಕ್ಕೂ ಒಂದು ಲೋಹದ ತಂತಿ ಮತ್ತು ಪ್ರಾಣಿಯ ಕೂದಲಿನಿಂದ ಮಾಡಿದ ಮತ್ತೊಂದು ತಂತಿ ಇರುತ್ತದೆ. ಇವುಗಳ ಮೇಲೆ ಬಿಲ್ಲನ್ನು ತಾಕಿಸುವ ಮೂಲಕ ಸಂಗೀತವನ್ನು ಹೊರಹೊಮ್ಮಿಸಲಾಗುತ್ತದೆ.



