ತಮ್ಮ ಕುಟುಂಬದ ಪುರುಷರನ್ನು ಹುಡುಕುತ್ತ ಬಂದ ಹತ್ತಿರದ ಹಳ್ಳಿಯೊಂದರ ಮಹಿಳೆಯರಿಗೆ ತಮ್ಮ ನೆಚ್ಚಿನ ಸರದಾರ, ಉಮೈದುರೈ ಯುದ್ಧಭೂಮಿಯಲ್ಲಿ ಕಾಣಸಿಕ್ಕರು. ಆತ, ತೀವ್ರವಾಗಿ ಗಾಯಗೊಂಡು ರಕ್ತಸ್ರಾವಾಗುತ್ತಿದ್ದಾಗ್ಯೂ, ಇನ್ನೂ ಜೀವಂತವಾಗಿದ್ದರು. ಮುತುವರ್ಜಿಯಿಂದ ಅವರನ್ನು ಎತ್ತಿದ ಮಹಿಳೆಯರು, ಮೂರು ಮೈಲಿ ದೂರದ ತಮ್ಮ ಹಳ್ಳಿಗೆ ವಾಪಸ್ಸು ಕರೆದೊಯ್ದರು.
ಸೈನಿಕರು ಶೀಘ್ರದಲ್ಲೇ ಉಮೈದುರೈಯನ್ನು ಹುಡುಕುತ್ತ ಅಲ್ಲಿಗೆ ಬಂದರು. ಬಿಳಿಯ ಬಟ್ಟೆಯೊಂದರಿಂದ ಉಮೈದುರೈ ಅವರನ್ನು ಮುಚ್ಚಿದ ಮಹಿಳೆಯರು, ಭೋರೆಂದು ರೋದಿಸುತ್ತಾ, ಸಿಡುಬಿನಿಂದಾಗಿ ಉಮೈದುರೈ ಸಾವಿಗೀಡಾದರೆಂದು ಸೈನಿಕರಿಗೆ ತಿಳಿಸಿದರು. ತಮ್ಮ ಜೀವಕ್ಕೆ ಹೆದರಿದ ಸೈನಿಕರು ಅಲ್ಲಿಂದ ಓಟಕಿತ್ತರು. ಹೀಗೆ, ಉಮೈದುರೈ ಜೊತೆಗೆ ಅನೇಕ ಪುರುಷರ ಜೀವಗಳನ್ನು ಉಳಿಸಲಾಯಿತು.
ಈ ಕಥೆಯು ಅಸಾಧಾರಣವಷ್ಟೇ ಅಲ್ಲ, ಸತ್ಯವೂ ಹೌದು. ಇದು ಘಟಿಸಿದ್ದು, 200 ವರ್ಷಗಳ ಹಿಂದೆ, ತಮಿಳುನಾಡಿನಲ್ಲಿ. 19ನೇ ಶತಮಾನದ ಆರಂಭದಲ್ಲಿ ಯುದ್ಧವನ್ನು ಕುರಿತ ಬ್ರಿಟಿಷರ ವೃತ್ತಾಂತಗಳಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಈಗ ಪ್ರಸಿದ್ಧ ಲೇಖಕರೆನಿಸಿದ ಚೋ ಧರ್ಮನ್, ತಮ್ಮ ಸುಂದರವಾದ ತಮಿಳಿನಲ್ಲಿ ಈ ಕಥೆಯನ್ನು ಅರುಹುತ್ತ, ಕೋವಿಡ್-19 ಬಗ್ಗೆ ಇಂದಿನ ಗ್ರಹಿಕೆಗಳು, ಭಯ, ಆತಂಕಗಳ ಹಿನ್ನೆಲೆಯಲ್ಲಿ ಅದನ್ನು ವಿಶ್ಲೇಷಿಸಿದ್ದಾರೆ. ಶತಮಾನಗಳಿಂದಲೂ ಹಳ್ಳಿಗಳು ವೈರಸ್, ಪ್ಲೇಗ್ ಮತ್ತು ಸಾಂಕ್ರಾಮಿಕ ರೋಗಗಳೊಂದಿಗೆ ಹೇಗೆ ತೊಡಗಿಕೊಂಡಿವೆ ಎಂಬುದರ ಕುರಿತಂತೆ ಅಮೂಲ್ಯವಾದ ಮೌಖಿಕ ಪೂರ್ವೇತಿಹಾಸವನ್ನು ನಮಗೆ ಒದಗಿಸಿದ್ದಾರೆ.
“ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಅವರ ಸಹೋದರ, ಇವರು, ದಕ್ಷಿಣ ತಮಿಳುನಾಡಿನ ಪಂಚಲಂಕುರಿಚಿಯ ಮುಖ್ಯಸ್ಥರೂ ಹೌದು. ವಾಕ್- ಶ್ರವಣ ದೋಷವಿದ್ದ ಉಮೈದುರೈ ಅವರನ್ನು ಸ್ಥಳೀಯವಾಗಿ ಊಮಿ ಎಂತಲೂ, ಬ್ರಿಟಿಷರಿಂದ ಡಂಬಿ ಎಂಬುದಾಗಿಯೂ ಕರೆಯಲಾಗುತ್ತಿತ್ತು. ಜನರಿಗೆ ಇವರ ಮೇಲಿನ ಪ್ರೀತಿ ಅತಿಶಯವಾಗಿತ್ತು. ಈ ಪ್ರಸಿದ್ಧ ಸರದಾರನನ್ನು ಮುಗಿಸುವ ಹುನ್ನಾರದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯು ಇವರ ಹುಡುಕಾಟದಲ್ಲಿತ್ತು. ಕರ್ನಲ್ ಜೇಮ್ಸ್ ವೆಲ್ಷ್ ಅವರ ಮಿಲಿಟರಿ ರೆಮಿನಿಸೆನ್ಸ್ ಎಂಬ ಪುಸ್ತಕದಲ್ಲಿ ಈ ಎಲ್ಲದರ ಬಗ್ಗೆಯೂ ನೀವು ಓದಬಹುದಾಗಿದೆ” ಎಂಬುದಾಗಿ ಧರ್ಮನ್ ತಿಳಿಯಪಡಿಸಿದರು.
ಪಂಚಲಂಕುರಿಚಿಯ ಐತಿಹಾಸಿಕ ಯುದ್ಧವು 1799ರಲ್ಲಿ ತಮಿಳುನಾಡಿನ ತೂಥುಕುಡಿಯಲ್ಲಿನ ಕೋವಿಲಪಟ್ಟಿಯಲ್ಲಿರುವ ಧರ್ಮನ್ ಅವರ ಮನೆಯಿಂದ 50 ಕಿ.ಮೀ. ದೂರದಲ್ಲಿ ನಡೆಯಿತು. ಬ್ರಿಟಿಷ್ ಕರ್ನಲ್ ವೆಲ್ಷ್ ಅವರು ತಮ್ಮ ಜೀವನ ವೃತ್ತಾಂತದಲ್ಲಿ ಉಮೈದುರೈ ಅವರನ್ನು ರಕ್ಷಿಸಿದ ಮಹಿಳೆಯರನ್ನು, ಕಡು ದಾರಿದ್ರ್ಯದ ಹುಟ್ಟು ಪೆದ್ದರೆಂದು ಕರೆದಿರುವುದಕ್ಕೆ ವ್ಯತಿರಿಕ್ತವಾಗಿ ಧರ್ಮನ್ ಅವರು ಗ್ರಾಮೀಣರ ಸಹಜ ವಿವೇಚನೆ ಹಾಗೂ ಯುದ್ಧಭೂಮಿಯಿಂದ ಉಮೈದುರೈ ಅವರನ್ನು ಮನೆಗೆ ಕರೆದೊಯ್ದ ಮಹಿಳೆಯರ ಧೈರ್ಯವನ್ನು ಬಹಳವಾಗಿ ಪ್ರಶಂಸಿಸುತ್ತಾರೆ. “ಉಮೈದುರೈನನ್ನು ಪೊಲೀಸರು ಹುಡುಕುತ್ತಿದ್ದು, ಸೈನಿಕರು ತಮ್ಮನ್ನು ಹಿಂಬಾಲಿಸಿ, ತಮ್ಮ ಮನೆಗಳು ನಾಶವಾಗಬಹುದೆಂದು ತಿಳಿದಿದ್ದಗ್ಯೂ, ಆ ಧೈರ್ಯಶಾಲಿ ಮಹಿಳೆಯರು ಹೀಗೆ ಮಾಡಿದರಲ್ಲವೇ? ಎಂದರು ಧರ್ಮನ್.








