ಗಣಂಗೂರಿನ ರೈತರಾದ ಸ್ವಾಮಿಯವರು ಹೇಳುತ್ತಾರೆ, "ರಾಜಕಾರಣಿಗಳು ತಮ್ಮ ಭರವಸೆಗಳನ್ನು ಟಿವಿಯಲ್ಲಿ ಮಾತ್ರ ನೀಡುತ್ತಾರೆ". ಗಣಂಗೂರು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸುಮಾರು 1,500 ಜನಸಂಖ್ಯೆ ಹೊಂದಿರುವ ಊರಾಗಿದೆ.
ಮೇ 12 ರಂದು ಕರ್ನಾಟಕದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನಾ ದಿನ, ಪ್ರಣಾಳಿಕೆಗಳಲ್ಲಿ, ಗ್ರೌಂಡ್ʼನಲ್ಲಿ ಮತ್ತು ದೂರದರ್ಶನ ಚಾನೆಲ್ಗಳಲ್ಲಿ ಕಹಿ ರಾಜಕೀಯ ಚರ್ಚೆಗಳು ನಡೆದಿವೆ. ಜನತಾದಳ ಸೆಕ್ಯುಲರ್ ಪಕ್ಷವು (ಜೆಡಿಎಸ್) ತನ್ನ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಪ್ರತಿಯೊಬ್ಬ ರೈತರ ಸಾಲವನ್ನು ಮನ್ನಾ ಮಾಡುವುದಾಗಿ, ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಸಾಲವನ್ನು ಮನ್ನಾ ಮಾಡುವುದಾಗಿ ಹೇಳುತ್ತದೆ. ಈವರೆಗಿನ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ಗಳಿಂದ ರೈತರು ಪಡೆದಿರುವ 1 ಲಕ್ಷ ರೂ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರವಸೆ ನೀಡಿದೆ. ಕಾಂಗ್ರೆಸ್ ಪಕ್ಷವು ಸಾಲ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿಲ್ಲ, ಆದರೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ (2018 ರಿಂದ 2023) ನೀರಾವರಿಗಾಗಿ 1.25 ಲಕ್ಷ ಕೋಟಿ ರೂಪಾಯಿಗಳು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಾದ್ಯಂತ ನೀರಾವರಿ ಯೋಜನೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಾಗಿ ಹೇಳಿವೆ.
ಗಣಂಗೂರಿನ ರೈತರು ರಾಜಕಾರಣಿಗಳ ಸುಳ್ಳು ಪೊಳ್ಳು ಆಶ್ವಾಸನೆಗಳಿಂದ ಬೇಸತ್ತು ಹೋಗಿದ್ದಾರೆ. "ಟಿವಿಯಲ್ಲಿ ಭರವಸೆಗಳನ್ನು ನೀಡುವ ಬದಲಿಗೆ, ರಾಜಕಾರಣಿಗಳು ಕಾವೇರಿ ಸಮಸ್ಯೆಯನ್ನು ತಕ್ಷಣ ನಿಂತು ಪರಿಹರಿಸಬೇಕು. ಆಗ ನಾವು ನಮ್ಮ ಹೊಲಗಳಲ್ಲಿ ಒಳ್ಳೆಯ ಬೆಳೆ ಬೆಳೆಯಬಹುದು ಮತ್ತು ಯಾವುದೇ ಚಿಂತೆ ಇಲ್ಲದೆ ಊಟ ಮಾಡಬಹುದು ಜೀವನ ನಡೆಸಬಹುದು" ಎಂದು ಸ್ವಾಮಿ ಹೇಳುತ್ತಾರೆ (ಈ ಗ್ರಾಮದ ರೈತರು ತಮ್ಮ ಹೆಸರಿನ ಮೊದಲ ಪದವನ್ನು ಮಾತ್ರ ಬಳಸಬೇಕೆಂದು ಬಯಸಿದ್ದರು).






