ಅಂದು ಚಂಪಾ ವಟ್ಟಿಯವರ ಮಗುವನ್ನು ಕೋತಿಯೊಂದು ಬಹುತೇಕ ಎತ್ತಿಕೊಂಡು ಹೋಗಿಬಿಟ್ಟಿತ್ತು. ಅವರು ತನ್ನ ಊರಾದ ರಾಜಪುರದ ಸಮೀಪದ ಅರಣ್ಯಕ್ಕೆ ಹೋಗಿದ್ದಾಗ ಈ ಘಟನೆ ನಡೆಯಿತು. ಆ ಯುವ ಚೊಚ್ಚಲ ತಾಯಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು, ಮುಂಬರುವ ವಾರದ ಸಂತೆಯಲ್ಲಿ (ಹಾಟ್) ಮಾರುವ ಸಲುವಾಗಿ ಮಹುವಾ ಮತ್ತು ಸಾಲ್ ಮರದ ಬೀಜಗಳನ್ನು ಹೆಕ್ಕುತ್ತಿದ್ದರು.
"ಕೆಲಸ ಮಾಡುವಾಗ ಮಗುವನ್ನು ನೆಲದ ಮೇಲೆ ಮಲಗಿಸಿದ್ದೆ. ಸ್ವಲ್ಪ ಹೊತ್ತಿನ ನಂತರ ತಿರುಗಿ ನೋಡಿದರೆ ಕೋತಿಯೊಂದು ನನ್ನ ಮಗುವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಈ ಘಟನೆ ನಡೆದಾಗಿನಿಂದ ಅವರಿಗೆ ಕಾಡಿಗೆ ಹೋದಾಗಲೆಲ್ಲ ಮಗುವಿನ ಸುರಕ್ಷತೆಯ ಕುರಿತು ಆತಂಕ ಕಾಡುತ್ತಿತ್ತು.
ಆದರೆ ಈಗ ಅವರು ಮಗುವನ್ನು ತನ್ನೊಂದಿಗೆ ಕಾಡಿಗೆ ಕರೆದುಕೊಂಡು ಹೋಗಬೇಕಾಗಿಲ್ಲ. ಚಂಪಾ ಅವರಂತೆಯೇ ಗ್ರಾಮೀಣ ಛತ್ತೀಸ್ಗಢದಲ್ಲಿರುವ ಹಸುಗೂಸುಗಳ ಮತ್ತು ಚಿಕ್ಕ ಮಕ್ಕಳ ತಾಯಂದಿರು ತಮ್ಮ ಮಕ್ಕಳನ್ನು ಹತ್ತಿರದ ಶಿಶುಪಾಲನಾ ಕೇಂದ್ರ ಅಥವಾ ಲೈಕಾ ಘರ್ ಎನ್ನುವಲ್ಲಿ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಅವರು ಹಗಲಿನಲ್ಲಿ ನಿರಾತಂಕದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಇಲ್ಲಿ ಏಳು ತಿಂಗಳಿನಿಂದ ಮೂರು ವರ್ಷದವರೆಗಿನ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ.


















