ಜನವರಿ 25ರಂದು ಪ್ರತಿಭಟನಾ ಮೆರವಣಿಗೆ ಸೇರಿಕೊಂಡ ನಾಮದೇವ್ ಭಾಂಗ್ರೆ ಅವರ ಮನಸ್ಸಿನ ತುಂಬಾ ಅನಿಶ್ಚಿತತೆ ಹಾಗೂ ಕಹಿ ಭಾವನೆ ತುಂಬಿಕೊಂಡಿತ್ತು. ಇದಾಗಿ ಮೂರು ದಿನಗಳ ನಂತರ, ಮುಖ್ಯವಾಗಿ ನಾಸಿಕ್ ಮತ್ತು ಅಹಲ್ಯಾನಗರದಿಂದ (ಹಿಂದಿನ ಅಹ್ಮದ್ನಗರ) ಬಂದಿದ್ದ ಹತ್ತಾರು ಸಾವಿರ ಇತರ ಆದಿವಾಸಿ ರೈತರೊಂದಿಗೆ, ಅವರು ಭರವಸೆಯೊಂದಿಗೆ ಮನೆಗೆ ಮರಳಿದರು.
ಅಹಲ್ಯಾನಗರ ಜಿಲ್ಲೆಯ ಖಡ್ಕಿ ಬುದ್ರುಕ್ ಗ್ರಾಮದ ಮಹದೇವ್ ಕೋಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಭಾಂಗ್ರೆ ಅವರ ಕುಟುಂಬವು, ಅಕೋಲೆ ತಾಲೂಕಿನಲ್ಲಿ ತಲೆಮಾರುಗಳಿಂದ ಆರು ಎಕರೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿದೆ. ಆದರೆ, ಮಹಾರಾಷ್ಟ್ರದ ಹತ್ತಾರು ಸಾವಿರ ಆದಿವಾಸಿಗಳಂತೆ ಇವರಿಗೂ ಈ ಭೂಮಿಯ ಮಾಡುತ್ತಿರುವ ಮಾಲೀಕತ್ವ ದೊರಕಿಲ್ಲ.
"ನನ್ನ ಅಜ್ಜನ ಕಾಲದಿಂದಲೂ ನಾವು ಭತ್ತ ಮತ್ತು ರಾಗಿ ಬೆಳೆಯುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ. "ಆದರೆ ನಮಗೆ ಇಂದಿಗೂ ಭದ್ರತೆಯೆನ್ನುವುದು ಸಿಕ್ಕಿಲ್ಲ. ನಮ್ಮನ್ನು ಯಾವಾಗ ಬೇಕಾದರೂ ಇಲ್ಲಿಂದ ಒಕ್ಕಲೆಬ್ಬಿಸಬಹುದು."
ಈ ತೀವ್ರ ಅಭದ್ರತೆಯನ್ನು ನಿವಾರಿಸಲು, 2006ರಲ್ಲಿ ಭಾರತ ಸರ್ಕಾರವು ಐತಿಹಾಸಿಕ ಅರಣ್ಯ ಹಕ್ಕು ಕಾಯ್ದೆಯನ್ನು (ಎಫ್ಆರ್ಎ) ಜಾರಿಗೆ ತಂದಿತು. ಹಲವು ವರ್ಷಗಳ ಹೋರಾಟದ ನಂತರ ಇದು ಕಾಯ್ದೆಯಾಯಿತು. ತಲೆಮಾರುಗಳಿಂದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ, ಅರಣ್ಯ ಭೂಮಿ ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಗ್ರಾಮ ಸಭೆಗಳು ಹಕ್ಕು ಸ್ಥಾಪನೆಯ ಪ್ರಕ್ರಿಯೆಯನ್ನು ಆರಂಭಿಸುತ್ತವೆ ಮತ್ತು ಉಪವಿಭಾಗೀಯ ಹಾಗೂ ಜಿಲ್ಲಾ ಸಮಿತಿಗಳು ಇದನ್ನು ಪರಿಶೀಲಿಸುತ್ತವೆ. ಹಕ್ಕುಗಳು ಇತ್ಯರ್ಥವಾಗುವವರೆಗೆ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದಂತೆ ಈ ಕಾಯ್ದೆ ರಕ್ಷಿಸುತ್ತದೆ.
ಆದರೆ, ತಳಮಟ್ಟದಲ್ಲಿ ಈ ಕಾನೂನಿನ ಅನುಷ್ಠಾನ ಸಂಶಯಾಸ್ಪದವಾಗಿಯೇ ಉಳಿದಿದೆ.






