ರೈತ ನಾಯಕನೊಬ್ಬ, “ಇಂಕಿಲಾಬ್ ಜಿಂದಾಬಾದ್” ಎಂದು ಘೋಷಣೆ ಕೂಗಿದರು. ರೈತರು, “ಜಿಂದಾಬಾದ್, ಜಿಂದಾಬಾದ್” ಎಂದು ಪ್ರತಿಕ್ರಿಯಿಸಿದರು. ಸುಮಾರು 180 ಕಿಲೋಮೀಟರ್ಗಳ ಈ ಕಠಿಣ ಪಾದಯಾತ್ರೆಯ ಕೊನೆಯಲ್ಲಿ, ದಕ್ಷಿಣ ಮುಂಬೈಯ ಆಜಾದ್ ಮೈದಾನದಲ್ಲಿ (ಮಾರ್ಚ್ 12ರಂದು ರ್ಯಾಲಿ ಮುಕ್ತಾಯಗೊಂಡ ಸ್ಥಳ) ಸುಸ್ತಾಗಿದ್ದ ರೈತರು ಕೂಗಿದ ಘೋಷಣೆಯಲ್ಲಿ, ಮಾರ್ಚ್ 6ರಂದು ನಾಸಿಕ್ ನಗರದಲ್ಲಿ ಯಾತ್ರೆ ಆರಂಭವಾದಾಗ ಇದ್ದಂತಹ ಉತ್ಸಾಹ ಕಾಣುತ್ತಿರಲಿಲ್ಲ. ಆದರೆ, ಅವರ ಸಾಮೂಹಿಕ ಚೈತನ್ಯ ಕುಗ್ಗಿರಲಿಲ್ಲ. ರಾತ್ರಿ ವೇಳೆ ತೆರೆದ ಆಕಾಶದಡಿ ಮಲಗಿ, ಅಲ್ಪಸ್ವಲ್ಪ ಊಟ ಮಾಡಿ, ಕಾಲುಗಳಲ್ಲಿ ಬೊಕ್ಕೆಗಳೆದ್ದಿದ್ದರೂ, ಸುಡುಬಿಸಿಲಿನಲ್ಲಿ ಒಂದು ವಾರಗಳ ಕಾಲ ನಡೆದ ನಂತರವೂ ಅವರು “ಇಂಕಿಲಾಬ್ ಜಿಂದಾಬಾದ್” ಘೋಷಣೆಗೆ ಪೂರ್ಣ ಉಮೇದಿನಿಂದ ಪ್ರತಿಕ್ರಿಯಿಸುತ್ತಿದ್ದರು.
ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ರೈತ ಸಂಘಟನೆಯಾದ 'ಅಖಿಲ ಭಾರತ ಕಿಸಾನ್ ಸಭಾ' ಆಯೋಜಿಸಿದ್ದ ಈ ಐತಿಹಾಸಿಕ ಪಾದಯಾತ್ರೆಯು, ಸುಮಾರು 25,000 ಪ್ರತಿಭಟನಾಕಾರರೊಂದಿಗೆ ನಾಸಿಕ್ ನಗರದ ಸಿಬಿಎಸ್ ವೃತ್ತದಿಂದ (ಚೌಕ್) ಆರಂಭವಾಗಿತ್ತು. ಆಯೋಜಕರಲ್ಲೊಬ್ಬರಾದ ಹಾಗೂ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅಜಿತ್ ನವಲೆ ಅವರ ಅಂದಾಜಿನ ಪ್ರಕಾರ, ಈ ರೈತರ ಸಂಖ್ಯೆ ಮುಂಬೈ ಪ್ರವೇಶಿಸುವ ಹೊತ್ತಿಗೆ 40,000ಕ್ಕೂ ಹೆಚ್ಚಾಗಿತ್ತು.
ಅವರೆಲ್ಲರೂ ದಣಿದಿದ್ದರು, ಆದರೆ ಅವರ ಸಂಕಲ್ಪ ದೃಢವಾಗಿತ್ತು.
ಅವರು ಮುಂದೆ ಸಾಗುತ್ತಿದ್ದಂತೆ, ರಾಜ್ಯದೆಲ್ಲೆಡೆಯ ಇತರ ರೈತರು ಶಹಾಪುರ (ಮುಂಬೈಯಿಂದ 73 ಕಿ.ಮೀ) ಮತ್ತು ಥಾಣೆಯಲ್ಲಿ (ಮುಂಬೈಯಿಂದ 25 ಕಿ.ಮೀ) ಪಾದಯಾತ್ರೆಗೆ ಸೇರ್ಪಡೆಯಾಗುತ್ತಾ ಹೋದರು. (ಓದಿ: ಹೊಲ ಮತ್ತು ಕಾಡುಗಳಿಂದ: ಚಲೋ ಮುಂಬೈ).
ಭಿವಂಡಿ ತಾಲೂಕಿನ ಸೋನಲೆ ಗ್ರಾಮದಲ್ಲಿ (ಆಜಾದ್ ಮೈದಾನದಿಂದ ಸುಮಾರು 55 ಕಿ.ಮೀ. ದೂರ) ಮಾರ್ಚ್ 10ರ ಮಧ್ಯಾಹ್ನ ರೈತರು ಊಟ ಮಾಡಿದ ಸ್ಥಳದಲ್ಲಿ ನಿಂತಿದ್ದ ಟೆಂಪೋ ಒಂದಕ್ಕೆ ಒರಗಿ ವಿಶ್ರಾಂತಿ ಪಡೆಯುತ್ತಿದ್ದ ವಿಲಾಸ್ ಬಾಬರ್ ಹೀಗೆ ಹೇಳಿದರು, "ಸರ್ಕಾರ ನಮ್ಮೊಂದಿಗೆ ನಡೆದುಕೊಂಡ ರೀತಿಗೆ ಹೋಲಿಸಿದರೆ ಈ ಯಾತ್ರೆ ಅಷ್ಟೇನೂ ಅಸಹನೀಯವಲ್ಲ." ಅಲ್ಯೂಮಿನಿಯಂನ ದೊಡ್ಡ ಪಾತ್ರೆಗಳಿಂದ, ನೆಲದ ಮೇಲೆ ಕುಳಿತಿದ್ದ ಸಾವಿರಾರು ಜನರಿಗೆ ದಾಲ್ ಮತ್ತು ಅನ್ನವನ್ನು ಬಡಿಸಲಾಗುತ್ತಿತ್ತು. ರೈತರು ತಾವೇ ಸ್ವತಃ ಊಟ ತಯಾರಿಸಿದ್ದರು - ಪ್ರತಿ ತಾಲೂಕಿನಿಂದ ಬಂದ ರೈತರು ಸಾಮೂಹಿಕವಾಗಿ ದವಸ ಧಾನ್ಯಗಳನ್ನು ಸಂಗ್ರಹಿಸಿದ್ದರು.








