“ದೀದೀ, ದಯವಿಟ್ಟು ಏನಾದರೂ ಮಾಡಿ. ಇಲ್ಲದಿದ್ದರೆ ಇಷ್ಟರಲ್ಲೇ ಅವರು ನನ್ನನ್ನು ಕೊಂದುಬಿಡುತ್ತಾರೆ.” ಗಿರಿಜಾ ದೇವಿಯನ್ನು ನಾನು ಮೊದಲು ಭೇಟಿಯಾದಾಗ, ಆಕೆಯು ಆಡಿದ ಮೊದಲ ಮಾತುಗಳಿವು. ಬಿಕ್ಕಳಿಸುತ್ತಾ ಆಕೆ ಹೀಗೆಂದರು: ಅವರ ಹೊಡೆತಗಳಿಂದ ಪಾರಾಗಲು, ನಿನ್ನೆ ಮಧ್ಯಾಹ್ನದಿಂದ ನಾನು ಸ್ವತಃ ಈ ಚಿಕ್ಕ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದೇನೆ.
ತೊಳೆಯುವ ಪಾತ್ರೆಗಳನ್ನು ಪೇರಿಸಿದ್ದ ಕಿರಿದಾದ ದಾರಿಯ ಮೂಲಕ ಸಾಗಿದ ನಾನು, ಗಿರಿಜಾ, ತನ್ನ ಅತ್ತೆ-ಮಾವಂದಿರಿಂದ ಬಚಾವಾಗಲು ತಂಗಿದ್ದ ಕೋಣೆಯನ್ನು ತಲುಪಿದೆ. ಕೋಣೆಯ ಹೊರಗೆ ಅಡಿಗೆಮನೆ ಮತ್ತು ಚಿಕ್ಕದೊಂದು ತೆರೆದ ಜಾಗವಿತ್ತು. ಅದು ಆಕೆಯ ಪತಿ ಹಾಗೂ ಮಕ್ಕಳು ಊಟಮಾಡುವ ಜಾಗ.
30ರ ಗಿರಿಜಾ, 34 ವರ್ಷದ ಹೇಮಚಂದ್ರ ಅಹಿರ್ವರ್ ಅವರನ್ನು 15 ವರ್ಷದ ಹಿಂದೆ ವಿವಾಹವಾದರು. ಇವರಿಗೆ 14, 11 ಮತ್ತು 16 ವರ್ಷದ ಮೂವರು ಮಕ್ಕಳಿದ್ದಾರೆ.
ನೌಕರಿಯನ್ನು ತೊರೆಯಬೇಕೆಂಬ ಆಗ್ರಹವನ್ನೂ ಒಳಗೊಂಡಂತೆ, ತನ್ನ ಅತ್ತೆ ಮಾವಂದಿರ ತರವಲ್ಲದ ಆಗ್ರಹಗಳಿಗೆ ಗಿರಿಜಾ, ಎದುರಾಡತೊಡಗಿದಾಗ ಸಮಸ್ಯೆಯು ಪ್ರಾರಂಭವಾಯಿತು. ಉತ್ತರ ಪ್ರದೇಶದ ಮಹೋಬ ಜಿಲ್ಲೆಯ ಕಬ್ರೈ ವಲಯದ ತಮ್ಮ ಸ್ವಂತ ಹಳ್ಳಿಯಾದ ಬಸೋರದಲ್ಲಿ ಅಧಿಕೃತ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ(ಆಶಾ)ಯ ಕೆಲಸವನ್ನು ಕೈಗೊಂಡಾಗಿನಿಂದ ಈ ದುರಾಗ್ರಹಗಳು ಮತ್ತಷ್ಟು ಹೆಚ್ಚಾದವು. ಲಾಕ್ಡೌನ್ನಿಂದಾಗಿ ಈಕೆಯ ಅತ್ತೆ ಮಾವಂದಿರು ಹಳ್ಳಿಗೆ ವಾಪಸ್ಸಾದಾಗಿನಿಂದ ಇದು ಅಸಹನೀಯ ಸ್ಥಿತಿಗೆ ತಲುಪಿದೆ.
“ಅತ್ತೆ ಮಾವಂದಿರು ದೆಹಲಿಯಲ್ಲಿದ್ದ ಕಾರಣ, ಲಾಕ್ಡೌನ್ಗೆ ಮೊದಲು ಪರಿಸ್ಥಿತಿಯು ನಿಯಂತ್ರಣದಲ್ಲಿತ್ತು.” ಎನ್ನುತ್ತಾರೆ ಗಿರಿಜಾ. ಅಲ್ಲಿ ಅವರು ಕಾರ್ಮಿಕರಾಗಿ ಕೆಲಸಮಾಡುತ್ತಿದ್ದರು. “ಆದರೆ ಅವರು ವಾಪಸ್ಸು ಬಂದಾಗಿನಿಂದ ನನಗೆ ಬದುಕುಳಿಯುವುದೇ ಕಷ್ಟವಾಗಿದೆ. ಯಾರಾದರೂ ಗರ್ಭಿಣಿ ಮಹಿಳೆಯನ್ನು ನೋಡಲು ಹೋದಾಗ ಅಥವಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯವಾಗಲೆಲ್ಲಾ ಅವರು ಬೇರೆ ಪುರುಷರನ್ನು ನೋಡಲು ಹೋಗುತ್ತಿದ್ದೇನೆಂದು ಹೇಳುತ್ತಿದ್ದರು. ಆಶಾ ಕಾರ್ಯಕರ್ತೆಯಾದ ಕಾರಣ, ಇದು ನನ್ನ ಕರ್ತವ್ಯ.” ನಾವು ತಾರಸಿಯ ಮೇಲಂತಸ್ತಿಗೆ ಹೋಗುವಾಗ ಅವರ ಆರು ವರ್ಷದ ಮಗ ಯೋಗೇಶ್, ನಮ್ಮನ್ನು ಹಿಂಬಾಲಿಸಿದ.
ಗಿರಿಜಾ ಬಹಳವಾಗಿ ಅಳುತ್ತಿರುತ್ತಾರೆ. ಆಕೆ ಕಣ್ಣು ಹಾಗೂ ತುಟಿಗಳು ಊದಿಕೊಂಡಂತಿವೆ. ಆಕೆ ಮತ್ತು ಹೇಮಚಂದ್ರ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಾರೆ. ಅಡಿಗೆಮನೆ ಮತ್ತು ವಾಸದ ಜಾಗವು ಪ್ರತ್ಯೇಕವಾಗಿದ್ದಾಗ್ಯೂ, ಇವರ ಇಬ್ಬರು ಚಿಕ್ಕಪ್ಪಂದಿರು ಮತ್ತು ಅವರ ಕುಟುಂಬಗಳು ಅದೇ ಮನೆಯಲ್ಲಿ ವಾಸಿಸುತ್ತಿವೆ. ಪ್ರವೇಶದ್ವಾರ ಮತ್ತು ಅಂಗಳವನ್ನು ಎಲ್ಲರೂ ಬಳಸುತ್ತಾರೆ.







