"ನಮ್ಮ ಮನೆಗಳನ್ನು ಕೆಡವಲು ಆನೆಗಳನ್ನು ಕರೆತರಬೇಕಾಯಿತು" ಎಂದು ಭರತಜೋಯ್ ರಿಯಾಂಗ್ ಹೇಳುತ್ತಾರೆ.
"ಆ ಆನೆಗಳಿಂದಲೂ ಅವುಗಳನ್ನು [ಮನೆಗಳನ್ನು] ಪುಡಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಅವರು ನಮ್ಮ 'ಟಾಂಗ್'ಗಳನ್ನು ಸುಡಬೇಕಾಯಿತು" ಎಂದು 75 ವರ್ಷದ ಈ ರಿಯಾಂಗ್ ಆದಿವಾಸಿ ಹೇಳುತ್ತಾರೆ. ಅವರು ಅಸ್ಸಾಂನ ಶ್ರೀಭೂಮಿ ಜಿಲ್ಲೆಯ (ಹಿಂದೆ ಕರಿಮ್ಗಂಜ್) ತಮ್ಮ ಮನೆಯಿಂದ ಅರಣ್ಯ ಅಧಿಕಾರಿಗಳು ತಮ್ಮನ್ನು, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ ಮತ್ತು ಸ್ಥಳಾಂತರಿಸಿದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಇದು 1980ರ ದಶಕದ ಆರಂಭದಲ್ಲಿ ನಡೆದ ಘಟನೆ. ಅವರು ಉಲ್ಲೇಖಿಸುತ್ತಿರುವ ಮನೆಗಳನ್ನು ಸ್ಥಳೀಯವಾಗಿ 'ಟಾಂಗ್ ಘರ್' ಅಥವಾ 'ಗೈರಿಂಗ್ ನೊಕ್' ಎಂದು ಕರೆಯಲಾಗುತ್ತದೆ. ಇದು ಭರತಜೋಯ್ ಸೇರಿದಂತೆ ತ್ರಿಪುರಾದ ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಸಾಮಾನ್ಯವಾದ ಸಾಂಪ್ರದಾಯಿಕ ವಾಸಸ್ಥಾನ.
"ನಾವು ಬೆಟ್ಟದ ಜನರು ಎಂದಿಗೂ ಮಣ್ಣು ಅಥವಾ ಇಟ್ಟಿಗೆಯಿಂದ ಕಟ್ಟಿದ ಮನೆಗಳಲ್ಲಿ ವಾಸಿಸುತ್ತಿರಲಿಲ್ಲ. ನಾವು ಯಾವಾಗಲೂ 'ಟಾಂಗ್'ಗಳನ್ನೇ ಇಷ್ಟಪಡುತ್ತಿದ್ದೆವು" ಎಂದು ಅವರು ಉತ್ತರ ತ್ರಿಪುರ ಜಿಲ್ಲೆಯಲ್ಲಿರುವ ತಮ್ಮ 'ಪಾರಾ' (ವಸತಿ ಪ್ರದೇಶ)ದಲ್ಲಿನ ತಮ್ಮದೇ ಮನೆಯತ್ತ ಕೈ ತೋರಿಸಿ ಹೇಳುತ್ತಾರೆ. ಅವರ ಮನೆಯು ನೆಲದಿಂದ ಒಂದು ಅಡಿ ಎತ್ತರದಲ್ಲಿ ಬಿದಿರಿನ ಕಂಬಗಳ ಮೇಲೆ ನಿಂತಿರುವ ಬಿದಿರಿನ ರಚನೆ. ಸಾಂಪ್ರದಾಯಿಕವಾಗಿ, ಇಂತಹ ಮನೆಗಳಿಗೆ ಹುಲ್ಲಿನ ಮಾಡು ಇರುತ್ತಿತ್ತು, ಆದರೆ ಭರತಜೋಯ್ ಅವರ ಮನೆಯ ಮೇಲ್ಛಾವಣಿ ಮಾತ್ರ ಟಿನ್ನಿಂದ ಮಾಡಲ್ಪಟ್ಟಿದೆ. ನಾವು ಅವರೊಂದಿಗೆ ಮಾತನಾಡುತ್ತಿರುವ ಜೈತಾಂಗ್ ಗ್ರಾಮದ ಪ್ರಶಾಂತವಾದ ತೊಂಗ್ಚೆರಾ 'ಪಾರಾ'ಕ್ಕೆ ಬಾಗ್ಬಸಾದಿಂದ ಬರುವ ಉದ್ದನೆಯ ಮತ್ತು ಅಪಾಯಕಾರಿ ಕಲ್ಲು ಹಾಸಿನ ರಸ್ತೆಯ ಪಕ್ಕದಲ್ಲಿ ಈ ಮನೆಯಿದೆ.
ಈ ವಸತಿ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ, ನಿಮಗೆ ಎದುರಾಗುವ ಮೊದಲ ಮನೆಗಳಲ್ಲಿ ಭರತಜೋಯ್ ಅವರ ಮನೆಯೂ ಒಂದಾಗಿದೆ. ದಟ್ಟ ಹಸಿರಿನಿಂದ ಆವೃತವಾದ ಎತ್ತರದ ಪರ್ವತಗಳು ಮತ್ತು ಶಾಂತ ಜಲಮೂಲಗಳ ನಡುವೆ ನೆಲೆಗೊಂಡಿರುವ ಈ ಪ್ರದೇಶವು ತ್ರಿಪುರಾ ರಾಜ್ಯದ ಧರ್ಮ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಇದು ರಿಯಾಂಗ್ (ರೈಂಗ್ ಎಂದೂ ಕರೆಯಲಾಗುತ್ತದೆ) ಬುಡಕಟ್ಟು ಜನಾಂಗದ 150 ಕುಟುಂಬಗಳಿರುವ ಶಾಂತ ಪ್ರತ್ಯೇಕ ವಸತಿ. ಈ ಬುಡಕಟ್ಟು ಸಮುದಾಯವನ್ನು ತ್ರಿಪುರಾದ ಏಕೈಕ 'ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು' (ಪಿವಿಟಿಜಿ) ಎಂದು ಎಂದು ಗುರುತಿಸಲಾಗಿದೆ.


















