"ನಮ್ಮ ಸಮುದಾಯದ ಯಾರಾದರೂ ಬಿದಿರಿನಿಂದ ಪರಾರಾ [ವಸ್ತುಗಳನ್ನು ಒಣಗಿಸಲು ಬಳಸುವ ತಟ್ಟೆ] ಅಥವಾ ಸೂಪಾ [ಮೊರ] ತಯಾರಿಸಿದರೆ, ಅವರು ಇನ್ನೊಂದು ಗುಂಪಿಗೆ ಧಾನ್ಯ ಮತ್ತು ಹಣದ ರೂಪದಲ್ಲಿ ದಂಡ ಪಾವತಿಸಬೇಕಿತ್ತು." ಮಂಗಲಿ ಬಾಯಿಯವರು ಇಲ್ಲಿ ಬೈಗಾ ಆದಿವಾಸಿ ಸಮುದಾಯದ ಉಪಗುಂಪುಗಳಾದ ಬಿಂಜ್ವಾರ್, ನಹಾರ್, ನರೋಟಿಯಾ, ಭರೋಟಿಯಾ, ರಾಯ್ ಮೈನಾ ಮತ್ತು ಕಠ್ ಮೈನಾ ಪಾಲಿಸುವ ಜೀವನೋಪಾಯ ಸಂಬಂಧಿ ಸಂಹಿತೆಯ ಕುರಿತು ವಿವರಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಬೈಗಾ ಸಮುದಾಯವನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ವರ್ಗದಡಿ ಪಟ್ಟಿ ಮಾಡಲಾಗಿದೆ. "ನಮ್ಮಲ್ಲಿ ಒಂದೊಂದು ಸಮುದಾಯ ಒಂದೊಂದು ವಸ್ತುಗಳನ್ನು ತಯಾರಿಸುತ್ತದೆ" ಎನ್ನುತ್ತಾರೆ ಮಂಗಲಿ ಬಾಯಿ.
ಮಂಗಲಿ ಬಾಯಿ ಕೂಡಾ ಬಿಂಜ್ವಾರ್ ಬೈಗಾ ಆದಿವಾಸಿ ಸಮುದಾಯಕ್ಕೆ ಸೇರಿದವರು. ಬಾಲಾಘಾಟ್ ಜಿಲ್ಲೆಯ ನಾಟಾ ಗ್ರಾಮದಲ್ಲಿ 10 ರಿಂದ 12 ಆದಿವಾಸಿ ಕುಟುಂಬಗಳು ನೆಲಯಾಗಿರುವ ಪಾಂಡಾ ಟೋಲಾ ಅವರ ಊರು. ನಾವು ಅವರನ್ನು ಬೇಟಿಯಾಗಿದ್ದು ಒಂದು ಶುಕ್ರವಾರದ ಬೆಳಗಿನ ಹೊತ್ತು. ಅಂದು ಮಂಗಲಿ ಬಾಯಿ ತನ್ನ ಸಮುದಾಯದ ಇತರರೊಂದಿಗೆ ಸಮೀಪದ ಮಾಲ್ದರ್ ಗ್ರಾಮದ ಪಕ್ಕದಲ್ಲಿರುವ ಕಾಡಿನಿಂದ ಬಿದಿರು ತರಲು ಹೊರಟಿದ್ದರು. ಅವರು ನಾನು ಬರುವುದನ್ನು ಕಾಯುತ್ತಿದ್ದ ಕಾರಣ ಅಂದು ಹೊರಡುವುದು ಸ್ವಲ್ಪ ತಡವಾಗಿತ್ತು. ಸಾಮಾನ್ಯವಾಗಿ ಅವರು ಬೆಳಗಿನ ನಾಲ್ಕು ಗಂಟೆಗೆಲ್ಲ ಹೊರಡುತ್ತಾರೆ. ಆ ದಿನ ನಾವು ಹೊರಡುವಾಗ ಇನ್ನೇನು ಸೂರ್ಯ ಹುಟ್ಟುವ ಸಮಯವಾಗಿತ್ತು.
ದಾರಿ ಮಧ್ಯದಲ್ಲಿ ಅವರು ತಾವು ತಂದಿದ್ದುಊಟದ ಬುತ್ತಿಯನ್ನು ನದಿ ತೀರದ ಮಣ್ಣಿನಡಿ ಅಡಗಿಸಿಟ್ಟರು. ಅಲ್ಲಿಂದ ಮುಂದಕ್ಕೆ ಅವರ ಕೈಯಲ್ಲಿ ಒಂದು ನೀರಿನ ಬಾಟಲಿ ಮತ್ತು ಕೊಡಲಿ ಇತ್ತು. "ತೆಗೆದುಕೊಂಡು ಹೋಗುವ ಭಾರ ಕಡಿಮೆ ಮಾಡುವುದಕ್ಕಾಗಿ ಹೀಗೆ ಮಾಡುತ್ತೇವೆ" ಎಂದು ಮಂಗಲಿ ಬಾಯಿ ವಿವರಿಸಿದರು. ಮಧ್ಯಾಹ್ನಕ್ಕೂ ಸ್ವಲ್ಪ ಮೊದಲು ಅವರು ಮತ್ತೆ ತಮ್ಮ ಪಾಂಡು ಟೋಲಾದ ದಾರಿಯಾಗಿ ಸುಮಾರು 8ರಿಂದ 10 ಕಿಮೀ ನಡೆಯುತ್ತಾರೆ.ಈ ನಡಿಗೆಯಲ್ಲಿ ಅವರು ಸುಮಾರು 25 ಕೇಜಿ ತೂಗುವ ಮೂರ್ನಾಲ್ಕು ಬಿದಿರಿನ ಗಳುವನ್ನು ಹೊತ್ತು ಸಾಗುತ್ತಾರೆ.






































