“ಪೂರ್ತಿ ಮನಸ್ಸು ಕೊಟ್ಟು ಓದಿ. ಆಗ ನೀವು ನಿಮ್ಮ ಸಮುದಾಯದ ಇತರ ಮಕ್ಕಳಿಗೆ ಸ್ಫೂರ್ತಿಯಾಗಬಹುದು.”
ಬಹುಶಃ ಆಗ ನಾನು 9ನೇ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಜೀತೆಂದ್ರ ಶರ್ಮಾ ಸರ್ ಮೇಲಿನ ಮಾತುಗಳನ್ನು ಇಡೀ ಕ್ಲಾಸಿನೆದುರು ಹೇಳಿದ್ದರು. ಅವರ ಮಾತುಗಳನ್ನು ಕೇಳಿ ನಾನು ಅಂದು ಬಹಳ ಭಾವುಕನಾಗಿದ್ದೆ. ಆ ಕ್ಷಣಕ್ಕೆ ನನಗೆ ಮಾತೇ ಹೊರಡಲಿಲ್ಲ. ಅದೇ ಮೊದಲ ಬಾರಿಗೆ ಒಬ್ಬರು ಮುಸಹರ್ ಹುಡುಗನಾದ ನನ್ನ ಮೇಲೆ ನಂಬಿಕೆಯಿರಿಸಿ ಮಾತನಾಡಿದ್ದರು. ಅಂದು ಮನೆಗೆ ಹೋಗುವಾಗಲೂ ಅವರ ಮಾತುಗಳು ನನ್ನ ಕಿವಿಯಲ್ಲಿ ರಿಂಗಣಿಸುತ್ತಿದ್ದವು.
ನನ್ನ ಶಿಕ್ಷಣ ಎನ್ನುವುದು ನನಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ನನಗೆ ಅಂದು ಮೊದಲ ಬಾರಿಗೆ ಎನ್ನಿಸಿತು. ನಾನು ಚೆನ್ನಾಗಿ ಓದುವ ಮೂಲಕ ನನ್ನ ಸುತ್ತಲಿನ ಇತರರಿಗೂ ಓದಲು ಧೈರ್ಯ ಕೊಡಬಹುದು ಎನ್ನಿಸಿತು. ಅಂದಿನಿಂದ ನಾನು ಇನ್ನೂ ಹೆಚ್ಚು ಶ್ರಮ ಹಾಕಿ ಓದಲು ಆರಂಭಿಸಿದೆ. ಪ್ರತಿ ಬಾರಿ ನನ್ನ ದಾರಿಯಲ್ಲಿ ಏನಾದರೂ ಕಠಿಣ ಪರಿಸ್ಥಿತಿ ಎದುರಾದಾಗ ಶರ್ಮಾ ಸರ್ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡು ಅದರಿಂದ ಹೊರಬರಲು ಪೂರ್ಣ ಪ್ರಯತ್ನವನ್ನು ಮಾಡುತ್ತಿದ್ದೆ. ಒಬ್ಬ ಶಿಕ್ಷಕರ ಮಾತು ಒಬ್ಬ ವಿದ್ಯಾರ್ಥಿಯನ್ನು ಎಷ್ಟರಮಟ್ಟಿಗೆ ಹುರಿದುಂಬಿಸಬಲ್ಲದು ನೋಡಿ! ಶರ್ಮಾ ಸರ್ಗೆ ಕೇವಲ ಗಣಿತ ಕಲಿಸುವುದಷ್ಟೇ ಅಲ್ಲ, ತರಗತಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದು ಸಹ ಗೊತ್ತಿತ್ತು ಎನ್ನುವುದು ನನಗೆ ಅರ್ಥವಾಯಿತು.
ಒಳ್ಳೆಯ ಶಿಕ್ಷಕರೊಬ್ಬರು ಕೇವಲ ಪುಸ್ತಕ ಓದುವುದನ್ನಷ್ಟೇ ಹೇಳಿಕೊಡುವುದಿಲ್ಲ, ಅವರು ನಿಮಗೆ ನಿಮ್ಮ ಕನಸುಗಳನ್ನು ಬೆನ್ನತ್ತುವುದನ್ನು ಹೇಳಿಕೊಡುತ್ತಾರೆ.
ನಾನು ಆಶಿಷ್ ನಂದ್. 25 ವರ್ಷದ ನಾನು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಮಝವಾ ಎನ್ನುವ ಊರಿನವನು. ನಾವು ಮಸಹರ್ ಜನ. ನನ್ನ ಸಮುದಾಯದ ಕುರಿತು ಸಾಕಷ್ಟು ಸಂಗತಿಗಳನ್ನು ಜನರು ಕೇಳುತ್ತಿರುತ್ತಾರೆ. ಆದರೆ ಅವರು ನಮ್ಮನ್ನು ಅರ್ಥ ಮಾಡಿಕೊಂಡಿದ್ದು ಅಷ್ಟರಲ್ಲೇ ಇದೆ. ಮುಸಹರ್ ಎನ್ನುವ ಪದ ಕೇಳಿದ ತಕ್ಷಣ ಅವರ ಮನಸ್ಸಿನಲ್ಲಿ ಮೂಡುವ ಚಿತ್ರವೆಂದರೆ ಬಡತನ, ಮೈಮುರಿದು ಮಾಡುವ ದೈಹಿಕ ಶ್ರಮ ಮತ್ತು ವಂಚಿತ ಬದುಕಿನ ಚಿತ್ರಣಗಳು. ಇದರಲ್ಲಿ ಒಂದಷ್ಟು ಸತ್ಯವೂ ಇದೆಯೆನ್ನುವುದನ್ನು ನಾಊ ಒಪ್ಪುತ್ತೇನೆ. ತಲೆಮಾರುಗಳಿಂದಲೂ ನಾವು ಸಮಾಜದ ಅತ್ಯಂತ ಕಟ್ಟಕಡೆಯ ಅಂಚಿನಲ್ಲಿರುವ ಸಮುದಾಯವಾಗಿಯೇ ನಾವು ಬದುಕಿಕೊಂಡು ಬಂದಿದ್ದೇವೆ. ಉತ್ತರ ಪ್ರದೇಶದಲ್ಲಿ ನಮ್ಮನ್ನು ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ. ನಮ್ಮ ಹಿರಿಯರ ಭೂಮಿಯಾಗಲಿ ಅಥವಾ ಸ್ಥಿರ ಉದ್ಯೋಗವಾಗಲಿ ಇದ್ದಿರಲಿಲ್ಲ. ನಾವು ದಲಿತರು, ಶಿಕ್ಷಣವೆನ್ನುವುದು ಎಂದೂ ನಮ್ಮ ಪಾಲಿಗೆ ಹಕ್ಕಾಗಿ ಒದಗಿಬಂದಿರಲಿಲ್ಲ. ನಮ್ಮ ಊರಿನಲ್ಲಿನ ಕೆಲವು ಬಡ ಬ್ರಾಹ್ಮಣರ ಬಳಿ ಇದ್ದಂತೆ ನಮ್ಮೊಂದಿಗೆ ವಿದ್ಯೆ ಇದ್ದಿರಲಿಲ್ಲ.










