ಈರಪ್ಪ ಬಾವ್ಗೆ ಅವರಿಗೆ ಮಾರ್ಚ್ 2019ರಲ್ಲಿ ಬೆಂಗಳೂರಿನಲ್ಲಿ ಯೋಜನಾ ವ್ಯವಸ್ಥಾಪಕರ ಕೆಲಸವು ದೊರೆತಾಗ, ಒಂದು ವರ್ಷದ ನಂತರ ಲಾಕ್ಡೌನ್ ದೆಸೆಯಿಂದಾಗಿ ಈ ಕೆಲಸವನ್ನು ಕಳೆದುಕೊಳ್ಳುತ್ತೇನೆಂದು ಅವರು ಭಾವಿಸಿರಲಿಲ್ಲ. ಆಗ್ನೇಯ ಕರ್ನಾಟಕದ ಬೀದರ್ ಜಿಲ್ಲೆಯ ತಮ್ಮ ಹಳ್ಳಿ, ಕಮ್ಥಾನಾದಲ್ಲಿನ ಎಮ್ಜಿಎನ್ಆರ್ಇಜಿಎ ಯೋಜನೆಯ ಸ್ಥಳಗಳಲ್ಲಿನ ಕೆಲಸಗಳಲ್ಲಿ ತೊಡಗುತ್ತೇನೆಂದು ಸಹ ಅವರಿಗೆ ಅನಿಸಿರಲಿಲ್ಲ.
“ಒಂದು ತಿಂಗಳವರೆಗೆ ಮನೆಯಲ್ಲಿ ಉದ್ಯೋಗವಿಲ್ಲದೆ ಕುಳಿತ ನಂತರ, ಏಪ್ರಿಲ್ನಲ್ಲಿ, ಜೀವನೋಪಾಯಕ್ಕಾಗಿ ಹಾಗೂ ನನ್ನ ಕುಟುಂಬದ ಉಳಿವಿಗಾಗಿ ಎನ್ಆರ್ಇಜಿಎ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳತೊಡಗಿದೆ. ಲಾಕ್ಡೌನ್ ಘೋಷಣೆಯಾದಾಗ ನಮ್ಮ ಬಳಿ ಯಾವುದೇ ಹಣವಿರಲಿಲ್ಲ. ಜಮೀನುಗಳ ಮಾಲೀಕರು ಕೃಷಿ ಕಾರ್ಮಿಕರನ್ನು ಕೆಲಸಕ್ಕೆ ಕರೆಯುತ್ತಿರಲಿಲ್ಲ. ಹೀಗಾಗಿ, ನನ್ನ ತಾಯಿಗೂ ಕೆಲಸ ದೊರೆಯುವುದು ಕಷ್ಟವಾಯಿತು” ಎಂದು ಅವರು ತಿಳಿಸಿದರು.
ಲಾಕ್ಡೌನ್ನಿಂದಾಗಿ ಅವರು ಕಳೆದುಕೊಂಡ ಉದ್ಯೋಗದ ಹಿಂದೆ ಅಪಾರ ಶ್ರಮವಿತ್ತು. ಸಾಲವು ಸಹ ಹೆಚ್ಚಾಗುತ್ತಿತ್ತು. ಜೀವನೋಪಾಯಕ್ಕೆ ಸಾಲುವಷ್ಟು ಆದಾಯಷ್ಟೇ ಇದ್ದ ತಮ್ಮ ಪರಿಸ್ಥಿತಿಯನ್ನು ಶಿಕ್ಷಣದ ಮೂಲಕ ಉತ್ತಮಪಡಿಸಿಕೊಳ್ಳಲು ಕುಟುಂಬದ ಸದಸ್ಯರು ಸಹ ದೃಢಸಂಕಲ್ಪದಿಂದ ಇವರಿಗೆ ಬೆಂಬಲವನ್ನು ನೀಡಿದ್ದರು.
ಬೀದರ್ನ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮ ಪಡೆದಿದ್ದ ಈರಪ್ಪ, ಅದೇ ಊರಿನ ಖಾಸಗಿ ಕಾಲೇಜಿನಲ್ಲಿ, ಆಗಸ್ಟ್ 2017ರಲ್ಲಿ ಬಿಟೆಕ್ ಪದವಿಯನ್ನು ಪೂರ್ಣಗೊಳಿಸಿದರು. ಪದವಿ ಕೋರ್ಸ್ಗೆ ಸೇರುವ ಮೊದಲು, ಇವರು ಪುಣೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಎಂಟು ತಿಂಗಳ ಕಾಲ ತಾಂತ್ರಿಕ ತರಬೇತುದಾರರಾಗಿ ತಿಂಗಳಿಗೆ 12000 ರೂ.ಗಳನ್ನು ಸಂಪಾದಿಸುತ್ತಿದ್ದರು. “ನಾನು ಉತ್ತಮ ವಿದ್ಯಾರ್ಥಿಯಾಗಿದ್ದ ಕಾರಣ, ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಂಡು ಹೆಚ್ಚಿನ ಹಣವನ್ನು ಗಳಿಸಬಹುದೆಂದು ಆಲೋಚಿಸಿದೆ. ಒಂದಲ್ಲ ಒಂದು ದಿನ ನನ್ನನ್ನೂ ಎಂಜಿನಿಯರ್ ಎಂದು ಕರೆಯಬಹುದೆಂದು ಭಾವಿಸಿದ್ದೆ” ಎಂದರು 27 ವರ್ಷದ ಈರಪ್ಪ.
ಇವರ ಶಿಕ್ಷಣಕ್ಕೆ ಹಣಕಾಸನ್ನು ಒದಗಿಸಲು ಇವರ ಕುಟುಂಬವು ಹಲವಾರು ಸಾಲಗಳನ್ನು ಮಾಡಿತು. “ಬಿಟೆಕ್ನ ಮೂರು ವರ್ಷಗಳಲ್ಲಿ ನನಗೆ ಸುಮಾರು 1.5 ಲಕ್ಷ ರೂ.ಗಳು ಬೇಕಾಯಿತು. ಕೆಲವೊಮ್ಮೆ, ನನ್ನ ಹೆತ್ತವರು ಸ್ಥಳೀಯ ಸ್ವಸಹಾಯ ಗುಂಪುಗಳಿಂದ 20000 ರೂ.ಗಳನ್ನು, ಮತ್ತೊಮ್ಮೆ 30000 ರೂ.ಗಳನ್ನು ಪಡೆದಿದ್ದರು. ಕಾರ್ಮಿಕರಾಗಿದ್ದ 48 ವರ್ಷದ ಇವರ ತಂದೆ, ಡಿಸೆಂಬರ್ 2015ರಲ್ಲಿ ಕಾಮಾಲೆ ರೋಗದಿಂದಾಗಿ ನಿಧನರಾದರು. ಆಗ, ಈರಪ್ಪ ಐದನೇ ಸೆಮಿಸ್ಟರ್ನಲ್ಲಿದ್ದರು. ಚಿಕಿತ್ಸೆಯ ವೆಚ್ಚಕ್ಕೆಂದು ಇವರ ಪರಿವಾರವು ಸ್ವಸಹಾಯ ಗುಂಪುಗಳು ಮತ್ತು ಸಂಬಂಧಿಕರಿಂದ ಸುಮಾರು 1.5 ಲಕ್ಷ ರೂ.ಗಳ ಸಾಲವನ್ನು ಪಡೆಯಿತು. ನಾನು ಪದವಿಯನ್ನು ಪೂರೈಸುವ ಹೊತ್ತಿಗೆ, ನನಗೆ ಅನೇಕ ಜವಾಬ್ದಾರಿಗಳಿದ್ದವು” ಎಂದರು ಈರಪ್ಪ.
ಇವರು, ಪ್ಲಾಸ್ಟಿಕ್ನ ಅಚ್ಚುಗಳ ಯಂತ್ರಗಳನ್ನು ತಯಾರಿಸುವ ಬೆಂಗಳೂರಿನ ಚಿಕ್ಕ ಘಟಕವೊಂದರಲ್ಲಿ ಯೋಜನಾ ವ್ಯವಸ್ಥಾಪಕರಾಗಿ 20000 ರೂ.ಗಳ ವೇತನಕ್ಕೆ ಸೇರಿದಾಗ, ಇವರ ಕುಟುಂಬಕ್ಕೆ ಸಂತೋಷವಾಗಿತ್ತು. ಇದು ನಡೆದದ್ದು, ಮಾರ್ಚ್ 2019ರಲ್ಲಿ. ಪ್ರತಿ ತಿಂಗಳು ನನ್ನ ತಾಯಿಗೆ 8000-10000 ರೂ.ಗಳನ್ನು ಕಳುಹಿಸುತ್ತಿದ್ದೆ. ಆದರೆ, ಲಾಕ್ಡೌನ್ ಹೇರಿದಾಗ, ಇದೆಲ್ಲವೂ ಬದಲಾಯಿತುʼʼ ಎಂದರು ಈರಪ್ಪ.










