ಟಕ್-ಟಕ್-ಟಕ್!
ಕೊಡವಟಿಪುಡಿಯ ಟಾರ್ಪಲಿನ್ನಿಂದ ಮಾಡಿದ ಗುಡಿಸಲಿನಿಂದ ಈ ಲಯಬದ್ಧ ಶಬ್ಧ ಕೇಳಿ ಬರುತ್ತಿದೆ. ಮುಳಂಪಕ ಭದ್ರರಾಜು ಅವರು ಚೆಕ್ಕ ಸುತ್ತಿ ಬಳಸಿ ಮಡಕೆಗೆ ಬಡಿಯುತ್ತಿದ್ದಾರೆ. ಮಡಕೆಗೆ ಪರಿಪೂರ್ಣ ಆಕಾರ ನೀಡಲು ಈ ಮರದ ಸುತ್ತಿಗೆಯನ್ನು ಬಳಸುತ್ತಾರೆ.
“ದಪ್ಪನೆಯ ಈ ಚೆಕ್ಕ ಸುತ್ತಿಯನ್ನು ಮಡಕೆಯ ಕೆಳಭಾಗವನ್ನು ಮುಚ್ಚಲು ಬಳಸುತ್ತೇವೆ .ಹೀಗೆ ಆಗಾಗ ಮಾಡುತ್ತಿದ್ದರೆ ಇದರ ಕೆಳಭಾಗ ಹೆಚ್ಚು ಮೃದುವಾಗುತ್ತದೆ. ಸಣ್ಣ ಚೆಕ್ಕ ಸುತ್ತಿಯನ್ನು ಇಡೀ ಮಡಕೆಯನ್ನು ನಯಗೊಳಿಸುವುದಕ್ಕೆ ಬಳಸುತ್ತೇವೆ,” ಎಂದು 70 ವರ್ಷದ ಭದ್ರರಾಜು ವಿವರಿಸುತ್ತಾರೆ. ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸುತ್ತಿಗೆಗಳನ್ನು ಬದಲಾಯಿಸುತ್ತಾರೆ.
ತೆಳ್ಳಗಿನ ಮತು ಸಣ್ಣಗಾತ್ರದ ಸುತ್ತಿಗೆಯನ್ನು ತಾಳೆ ಮರದ ಕೊಂಬೆಗಳಿಂದ (ಬೊರಾಸಸ್ ಫ್ಲಾಬೆಲಿಫರ್) ಮತ್ತು ದಪ್ಪದ ಸುತ್ತಿಗೆಯನ್ನು ಅರ್ಜುನ ಮರದಿಂದ (ಟರ್ಮಿನಾಲಿಯಾ ಅರ್ಜುನ) ತಯಾರಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ಅವರು ತೆಳ್ಳಗಿನ ಚೆಕ್ಕ ಸುತ್ತಿಗೆಯನ್ನು ಬಳಸುವಾಗ ಬಡಿತದ ಶಬ್ದ ಮೆತ್ತಗಿರುತ್ತದೆ.
20 ಇಂಚು ವ್ಯಾಸದ ದೊಡ್ಡ ಮಡಕೆಯನ್ನು ಮಾಡಲು ಅವರು ಸುಮಾರು 15 ನಿಮಿಷ ತೆಗೆದುಕೊಳ್ಳುತ್ತಾರೆ. ಮಡಕೆಯ ಯಾವುದಾದರೂ ಒಂದು ಬದಿ ಒಡೆದು ಹೋದರೆ, ತಕ್ಷಣ ಜೇಡಿಮಣ್ಣನ್ನು ಅಂಟಿಸಿ, ಬಡಿದು ಸರಿಪಡಿಸುತ್ತಾರೆ.









