ಮಹಿಳೆಯರು ಮತ್ತು ಪುರುಷರ ಹಚ್ಚೆಗಳು ಭಿನ್ನ ರೀತಿಯಲ್ಲಿ ಇರುತ್ತಿದ್ದವು. ಮಹಿಳೆಯರು ತಮ್ಮ ಜೀವನದ ವಿವಿಧ ಹಂತಗಳಲ್ಲಿ - ಅಂದರೆ ಪ್ರಾಯಕ್ಕೆ ಬಂದಾಗ ಅಥವಾ ಮದುವೆಯಾದ ಸಂದರ್ಭದಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಅವರ ಕೆಲವು ಹಚ್ಚೆಗಳು ಕುಟುಂಬದ ಪುರುಷ ಸದಸ್ಯರ ಸಾಧನೆಗಳ ನೆನಪನ್ನೂ ಪ್ರತಿಬಿಂಬಿಸುತ್ತಿದ್ದವು.
ಕೊನ್ಯಾಕ್ ಮಹಿಳೆಯೊಬ್ಬಳ ಬದುಕು ಅನೇಕ ಬದಲಾವಣೆಗಳ ಮೂಲಕ ಸಾಗುಗುತ್ತದೆ. ತಂದೆಯ ವಂಶದಲ್ಲಿ ಜನಿಸಿದ ಅವಳು, ಮದುವೆಯಾಗಿ ಇನ್ನೊಂದು ವಂಶಕ್ಕೆ ಸೇರುತ್ತಾಳೆ. ಆದರೂ, ಮದುವೆಗೆ ಮೊದಲು ಅವಳು ಹಾಕಿಸಿಕೊಂಡ ಹಚ್ಚೆಯು ಅವಳ ಬದುಕಿನುದ್ದಕ್ಕೂ ಮತ್ತು ಮರಣದ ನಂತರವೂ ಅವಳೊಂದಿಗೆ ಉಳಿಯುವ ಏಕೈಕ ಸಂಗತಿ. ಇದು ಎಂದಿಗೂ ಬದಲಾಗದ ಗುರುತು; ಅವಳು ಯಾರು ಮತ್ತು ಎಲ್ಲಿಂದ ಬಂದವಳು ಎಂದು ಜಗತ್ತಿಗೆ ತಿಳಿಸುವ ಗುರುತಿದು" ಎನ್ನುತ್ತಾರೆ ಅಮೋ ಕೊನ್ಯಾಕ್.
ಮೊನ್ ಎನ್ನುವ ಊರಿನ ನಿವಾಸಿಯಾಗಿರುವ ಅವರು ತಮ್ಮ ಅಜ್ಜ-ಅಜ್ಜಿಯರ ಮೇಲೆ ಹಚ್ಚೆಗಳನ್ನು ನೋಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ಬಾಲ್ಯದಲ್ಲಿ ನಾನು ಹಚ್ಚೆ ಹಾಕುವ ಕಲೆಯ ಬಗ್ಗೆ, ಅದನ್ನು ಹೇಗೆ ಹಾಕಲಾಗುತ್ತಿತ್ತು, ಅದನ್ನು ಹಾಕಿಸಿಕೊಳ್ಳುವಾಗ ಎಷ್ಟು ನೋವಾಗುತ್ತಿತ್ತು ಮತ್ತು ಹಚ್ಚೆ ಹಾಕಿಸಿಕೊಂಡ ನಂತರ ಜನರು ಆ ಬಗ್ಗೆ ಎಷ್ಟು ಹೆಮ್ಮೆಪಡುತ್ತಿದ್ದರು ಎನ್ನುವ ಬಗ್ಗೆ ಕತೆಗಳನ್ನು ಕೇಳಿದ್ದಾಗಿ ಅವರು ಹೇಳುತ್ತಾರೆ. ಈ ಕಥೆಗಳು ಜನಪದ ಕಥೆಗಳಂತೆ ನಮಗೆ ಹರಿದುಬಂದವು, ಈ ಕತೆಗಳನ್ನು ಯಾವಾಗಲೂ ವಿಸ್ಮಯ ಮತ್ತು ಗೌರವದಿಂದ ಹೇಳಲಾಗುತ್ತಿತ್ತು. ನನ್ನ ಪಾಲಿಗೆ ಈ ಹಚ್ಚೆಗಳು ಕೇವಲ ಚರ್ಮದ ಮೇಲಿನ ಗುರುತುಗಳಲ್ಲ. ಅವು ನೆನಪಿನ ನಕ್ಷೆಯಂತೆ ಕಾಣುತ್ತಿದ್ದವು. ಅವು ಆ ವ್ಯಕ್ತಿಯ ವ್ಯಕ್ತಿತ್ವದ ಸಾರಾಂಶದ ಹಾಗೆ ಕಾಣುತ್ತಿದ್ದವು" ಎಂದು 32 ವರ್ಷದ ಈ ಸಂಶೋಧಕ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.
ಕೊನ್ಯಾಕ್ ಜನರು ಸಾಂಪ್ರದಾಯಿಕವಾಗಿ ನರಬೇಟೆಗಾರರಾಗಿದ್ದರು. ಯುದ್ಧ ಗೆದ್ದ ನಂತರ ಪುರುಷರ ವಿಜಯದ ಸಂಕೇತವಾಗಿ ಅವರ ಚರ್ಮದ ಮೇಲೆ ಹಚ್ಚೆಗಳನ್ನು ಕೆತ್ತಲಾಗುತ್ತಿತ್ತು. ಈ ಸಂಗತಿಯ ಮೇಲೆಯೇ ಹೆಚ್ಚಿನ ಗಮನ ಹರಿಸಲಾಗಿರುವ ಕಾರಣ ಕೊನ್ಯಾಕ್ ಹಚ್ಚೆಗಳ ಕುರಿತಾದ ಸಂಶೋಧನೆ ಮತ್ತು ಕಥೆಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಹೊರಗಿಡಲಾಗಿದೆ ಎಂದು ಅಮೋ ಹೇಳುತ್ತಾರೆ. ತಮ್ಮ ಅಜ್ಜಿ ಹೇಳುತ್ತಿದ್ದ ಹಚ್ಚೆಯ ಕಥೆಗಳನ್ನು ನೆನಪಿಸಿಕೊಳ್ಳುವ ಅವರು, "ಆ ಪ್ರಕ್ರಿಯೆ ಎಷ್ಟು ನೋವಿನಿಂದ ಕೂಡಿತ್ತು, ಚರ್ಮವು ಹೇಗೆ ರಕ್ತಸಿಕ್ತವಾಗಿ ಊದಿಕೊಳ್ಳುತ್ತಿತ್ತು ಮತ್ತು ಅದರ ಹೊರತಾಗಿಯೂ ಹಚ್ಚೆ ಹಾಕಿಸಿಕೊಂಡ ನಂತರ ತಾನು ಎಷ್ಟು ಸುಂದರವಾಗಿ ಕಾಣುತ್ತಿದ್ದೆ ಮತ್ತು ಆ ಕುರಿತು ಎಷ್ಟು ಹೆಮ್ಮೆ ಹೊಂದಿರುತ್ತಿದ್ದೆ ಎನ್ನುವುದನ್ನು ಅವರು ನನಗೆ ಪದೇ ಪದೇ ಹೇಳುತ್ತಿದ್ದರು" ಎಂದು ವಿವರಿಸುತ್ತಾರೆ.
ಅದೇ ಊರಿನಿಂದ ಸ್ವಲ್ಪವೇ ದೂರದಲ್ಲಿ ಪ್ರಸ್ತುತ ಎಪ್ಪತ್ತರ ಆಸುಪಾಸಿನಲ್ಲಿರುವ ನ್ಗೋನ್ಫೆ ಇದ್ದಾರೆ, ಇವರು ಈ ಕಲೆಯನ್ನು ತಮ್ಮ ಅಕ್ಕ ಮತ್ತು ಸೋದರಸಂಬಂಧಿಗಳಿಂದ ಕಲಿತೆರೆ, ಅವರು ತಮ್ಮ ತಾಯಂದಿರಿಂದ ಇದನ್ನು ಕಲಿತಿದ್ದರು. ಆದರೆ, ನ್ಗೋನ್ಫೆ ಪಾಲಿಗೆ ಈ ಹಚ್ಚೆ ಕಲೆಯನ್ನು ಅಭ್ಯಾಸ ಮಾಡುವ ಅವಕಾಶ ಸಿಗಲೇ ಇಲ್ಲ. ಏಕೆಂದರೆ ಅದು ಕೇವಲ ರಾಣಿಗೆ - ಅಂದರೆ ಮೊದಲ ಪತ್ನಿಗೆ -ಮಾತ್ರ ಇರುವ ವಿಶೇಷ ಹಕ್ಕು. ನ್ಗೋನ್ಫೆ ಅವರು ರಾಣಿಗೆ ಹಚ್ಚೆ ಹಾಕುವ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು - ಮುಳ್ಳುಗಳನ್ನು ಸಂಗ್ರಹಿಸುವುದು, ಹಚ್ಚೆ ಕಲಾವಿದರಿಗೆ ಅಡುಗೆ ಮಾಡುವುದು ಮತ್ತು ಹಚ್ಚೆ ಹಾಕಿಸಿಕೊಳ್ಳುವ ವ್ಯಕ್ತಿಯು ನೋವಿನಿಂದ ಅತಿಯಾಗಿ ಅಲುಗಾಡದಂತೆ ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಕೆಲಸವಾಗಿತ್ತು. ನ್ಗೋನ್ಫೆ ಮಾತನಾಡುತ್ತಾ ನೋವಿನ ಅಭಿವ್ಯಕ್ತಿಯನ್ನು ಅನುಕರಿಸುತ್ತಾ ಮುಖ ಕಿವುಚಿದರು. ನಂತರ ಆ ಪುರಾತನ ನೆನಪನ್ನು ನೆನಪಿಸಿಕೊಂಡು ಜೋರಾಗಿ ನಕ್ಕರು.
ಪರಿ ನ್ಗೋನ್ಫೆ ಬೇಟಿಗೆಂದು ತೆರಳಿದ್ದ ಸಂದರ್ಭದಲ್ಲಿ, ಅವರು ಅಂಘ್ ಮನೆಯ ಆವರಣದಲ್ಲಿನ ಗುಡಿಸಲಿನಲ್ಲಿ ಕುಳಿತಿದ್ದರು. ಅಲ್ಲಿ ಅಂತಹ ಅನೇಕ ಗುಡಿಸಲುಗಳಿದ್ದವು. ನ್ಗೋನ್ಫೆ ಬಹಳ ಸಣ್ಣ ದನಿಯಲ್ಲಿ ಮಾತನಾಡುತ್ತಿದ್ದರು, ಅವರ ದನಿ ಎಷ್ಟು ಮೆಲ್ಲಗಿತ್ತೆಂದರೆ ಹಬ್ಬದ ಮೈದಾನದಿಂದ ಬರುತ್ತಿದ್ದ ಜೋರಾದ ಹರ್ಷೋದ್ಗಾರಗಳ ನಡುವೆ ಅವರ ದನಿ ಕೇಳಿಸುತ್ತಲೇ ಇರಲಿಲ್ಲ. ನಾವು ಅವರ ಬಳಿ ಫೋಟೋಗಾಗಿ ವಿನಂತಿಸಿದಾಗ ಸಂತೋಷದಿಂದ ಎದ್ದು ಹೋಗಿ, ಹೆಚ್ಚು ಔಪಚಾರಿಕವಾದ ಸಾಂಪ್ರದಾಯಿಕ ಉಡುಪು ಮತ್ತು ಆಭರಣಗಳನ್ನು ಧರಿಸಿಕೊಂಡು ಬಂದರು.