ಆಕಿಫ್ ಎಸ್ ಕೆ ಪ್ರತಿ ದಿನ ಬೆಳಗ್ಗೆ ಹೇಸ್ಟಿಂಗ್ ಸೇತುವೆ ಬಳಿಯಿರುವ ತನ್ನ ತಾತ್ಕಾಲಿಕ ಜುಪ್ರಿಯಿಂದ (ಗುಡಿಸಲು) ಹೊರಟು ಕೋಲ್ಕತ್ತಾದ ಜನಪ್ರಿಯ ಪ್ರವಾಸಿ ಆಕರ್ಷಣೆಯಾದ ವಿಕ್ಟೋರಿಯಾ ಸ್ಮಾರಕವನ್ನು ತಲುಪುತ್ತಾರೆ. ದಾರಿಯಲ್ಲಿ ಅವರು ತಮ್ಮೊಂದಿಗೆ ರಾಣಿ ಮತ್ತು ಬಿಜ್ಲಿಯರನ್ನೂ ಕರೆದುಕೊಳ್ಳುತ್ತಾರೆ.
ಇವೆರಡು ಅವರಿಂದಲೇ ಹೆಸರಿಸಲ್ಪಟ್ಟಿರುವ ಕುದುರೆಗಳು ಅವರ ಹಂಗಾಮಿ ದುಡಿಮೆಗೆ ಸಹಾಯ ಮಾಡುತ್ತವೆ. “ಅಮಿ ಗಾರಿ ಚಲಾಯಿ [ನಾನು ಗಾಡಿ ಓಡಿಸುತ್ತೇನೆ]" ಎಂದು ಆಕಿಫ್ ಹೇಳುತ್ತಾರೆ. ಅವರು ಹೇಸ್ಟಿಂಗ್ಸ್ ಬಳಿಯಿರುವ ಲಾಯವೊಂದರಲ್ಲಿ ತಮ್ಮ ಕುದುರೆಗಳನ್ನು ಬಿಡುತ್ತಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಕೆಲಸಕ್ಕೆ ತೆರಳುವಾಗ ಅವುಗಳನ್ನು ಹೊಡೆದುಕೊಂಡು ಹೋಗುತ್ತಾರೆ. ರಾಣಿ ವಿಕ್ಟೋರಿಯಾ – ಸೆಂಟ್ರಲ್ ಕೋಲ್ಕತ್ತಾದ ಅಮೃತಶಿಲೆಯ ಕಟ್ಟಡ ಮತ್ತು ತೆರೆದ ಮೈದಾನದ ಸುತ್ತಲಿನ ಪ್ರದೇಶದ ಸ್ಥಳೀಯ ಹೆಸರು – ಬಳಿ ಅವರು ತಮ್ಮ ಗಾಡಿ ಓಡಿಸುತ್ತಾರೆ. ಬ್ರಿಟಿಷ್ ರಾಜವಂಶವು, ರಾಣಿ ವಿಕ್ಟೋರಿಯಾ ಅವರ ಸ್ಮಾರಕವನ್ನು 1921ರಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಿತು.
ಆಕಿಫ್ ದಿನವೂ ಬಾಡಿಗೆ ಪಡೆಯುವ ಗಾಡಿಯು ವಿಕ್ಟೋರಿಯಾ ಮೆಮೋರಿಯಲ್ ಪಕ್ಕದಲ್ಲಿ ಕ್ವೀನ್ಸ್ ವೇ ಎಂದು ಕರೆಯಲ್ಪಡುವ ಬೀದಿಯಲ್ಲಿ ನಿಲ್ಲಿಸಲಾಗಿರುತ್ತದೆ. ಅಲ್ಲಿ ನಿಲ್ಲಿಸಲಾಗಿದ್ದ 10 ಗಾಡಿಗಳತ್ತ ಕೈ ತೋರಿಸುತ್ತಾ, “ನನ್ನದು ಚಿನ್ನದ ಬಣ್ಣದ ಗಾಡಿ” ಎಂದು ತನ್ನ ಗಾಡಿಯನ್ನು ತೋರಿಸಿದರು. ಇಲ್ಲಿನ ಬಹುತೇಕ ಗಾಡಿಗಳು ಒಂದೇ ಬಗೆಯ ಬಣ್ಣದ ಸಂಯೋಜನೆಯನ್ನು ಹೊಂದಿರುತ್ತವೆ. ಜೊತೆಗೆ ವಿಸ್ತಾರವಾದ ಹೂವಿನ ಮಾದರಿಗಳು ಮತ್ತು ಪಕ್ಷಿಗಳ ರೀತಿಯ ಚಿತ್ರಗಳನ್ನು ಸಹ ಇವು ಹೊಂದಿರುತ್ತವೆ. ಇವುಗಳ ವಿಶೇಷವೆಂದರೆ ಮೊದಲ ನೋಟಕ್ಕೆ ಇವು ರಾಜರ ರಥಗಳಂತೆ ಕಾಣುತ್ತವೆ. ಬ್ರಿಟಿಷ್ ರಾಜ್ ಕಾಲದ ಅನುಭವವನ್ನು ಕೊಡಲೆಂದೇ ಈ ಗಾಡಿಗಳನ್ನು ಸ್ವಚ್ಛಗೊಳಿಸಲು ಮತ್ತು ಅದಕ್ಕೆ ಹೊಳಪು ನೀಡಲು ದಿನಕ್ಕೆ ಎರಡು ಗಂಟೆಗಳನ್ನು ವ್ಯಯಿಸುತ್ತಾರೆ.
ನಾವು ಅಲ್ಲಿಗೆ ಹೋಗುವ ಹೊತ್ತಿಗೆ ಆಗಲೇ ರಸ್ತೆಯುದ್ದಕ್ಕೂ ಹಾಗೂ ವಿಕ್ಟೋರಿಯಾ ಸ್ಮಾರಕದ ಬಾಗಿಲುಗಳಲ್ಲಿ ಜನರು ಜಮಾಯಿಸತೊಡಗಿದ್ದರು. “ಹಿಂದಿನ ದಿನಗಳಲ್ಲಿ ಇಲ್ಲಿ ರಾಜರು ವಾಸಿಸುತ್ತಿದ್ದರು. ಅವರು ಈ ಕುದುರೆ ಗಾಡಿಗಳಲ್ಲಿ ಸವಾರಿ ಮಾಡುತ್ತಿದ್ದರು. ಈ ಇಲ್ಲಿಗೆ ಭೇಟಿ ಕೊಡುವ ಜನರು ಆ ದಿನಗಳ ಅನುಭವವನ್ನು ತಾವೂ ಪಡೆಯಬಯಸುತ್ತಾರೆ” ಎಂದು 2017ರಲ್ಲಿ ಗಾಡಿ ಓಡಿಸಲು ಆರಂಭಿಸಿದ ಆಕಿಫ್ ಹೇಳುತ್ತಾರೆ. "ವಿಕ್ಟೋರಿಯಾ [ಸ್ಮಾರಕ] ಇರುವವರೆಗೂ, ಕುದುರೆ ಗಾಡಿಗಳೂ ಇಲ್ಲಿ ಇರುತ್ತವೆ” ಎಂದು ಅವರು ಹೇಳುತ್ತಾರೆ. ಈ ಕುದುರೆ ಗಾಡಿಗಳೊಂದಿಗೆ ಅವುಗಳನ್ನು ಓಡಿಸುವವರೂ ಇರಲಿದ್ದಾರೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಪ್ರದೇಶದಲ್ಲಿ ಪ್ರಸ್ತುತ ಸುಮಾರು 50 ಜಟಕಾ ಗಾಡಿಗಳು ಕಾರ್ಯನಿರ್ವಹಿಸುತ್ತಿವೆ.
ಚಳಿಗಾಲ ಬರುತ್ತಿದ್ದ ಹಾಗೆ ಕೋಲ್ಕತ್ತಾದ ಜನರು ಹಗಲಿನ ಬಿಸಿಲಿಗೆ ಬೆಚ್ಚಗಾಗಲೆಂದು ಹೊರಗೆ ಸುತ್ತಾಡಲು ಬರತೊಡಗುತ್ತಾರೆ. ಆಕಿಫ್ ಈ ದಿನಗಳಲ್ಲೇ, ಅದರಲ್ಲೂ ಸಂಜೆಯ ಹೊತ್ತು ಹೆಚ್ಚು ಚಟುವಟಿಕೆಯಲ್ಲಿರುತ್ತಾರೆ. ಇಂತಹದ್ದೊಂದು ಹವಮಾನ ಇಲ್ಲಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ತನಕ ಇರುತ್ತದೆ. ನಂತರ ಇಲ್ಲಿ ವಿಪರೀತ ಸೆಕೆಯಿರುತ್ತದೆ. ಆ ಸಮಯದಲ್ಲಿ ಕೆಲವರು ತೆರೆದ ಗಾಡಿಯಲ್ಲಿ ಸವಾರಿ ಮಾಡಲು ಬರುತ್ತಾರೆ ಎಂದು ಅವರು ಹೇಳುತ್ತಾರೆ.











