“ಈ ಗದ್ದೆಯಲ್ಲಿ ನಿಮಗೆ ಭತ್ತ ಸಿಗೋದಿಲ್ಲ, ಪ್ಯಾಡ್ ಸಿಗುತ್ತೆ. ನೀವೇನಾದ್ರೂ ಅಂಡಮಾನ್ನ ನೆಲ ಅಗೆದರೆ ಸಿಗುವುದು ಪ್ಯಾಡ್ ಮಾತ್ರ.” ಸೀಮಾ ನಗೆ ಚಟಾಕಿ ಹಾರಿಸಿದರು. ಅದನ್ನು ಕೇಳಿ ಅಲ್ಲಿದ್ದ ಇತರ ನಾಲ್ಕು ಮಹಿಳೆಯರೂ ನಗತೊಡಗಿದರು.
ವಂಡೂರ್ ಗ್ರಾಮದ ಪ್ರತಿ ಮನೆಯ ಮೂಲೆಯಲ್ಲೂ ಒಂದು ಸ್ಥಳವಿರುತ್ತದೆ. ಮನೆಯ ಮಹಿಳೆಯರೆಲ್ಲರಿಗೂ ಈ ಸ್ಥಳ ಪರಿಚಿತ. ಇದೇ ಸ್ಥಳದಲ್ಲಿ ಮಹಿಳೆಯರು ತಾವು ತಿಂಗಳ ಮುಟ್ಟಿನ ಸಮಯದಲ್ಲಿ ಬಳಸಿದ ಪ್ಯಾಡುಗಳನ್ನು ಹೂಳುತ್ತಾರೆ. ಆದರೂ ಮೊಂಡಲ್ ಹುಡುಗಿಯರು ಆ ಸ್ಥಳವನ್ನು ನನಗೆ ತೋರಿಸಲು ನಾಚಿಕೆ ಮತ್ತು ಹಿಂಜರಿಕೆಯನ್ನು ಎದುರಿಸುತ್ತಿದ್ದರು.
“ಒಂದು ತಿಂಗಳ ತನಕ ಪ್ಯಾಡುಗಳನ್ನು ಸಂಗ್ರಹಿಸಿ ಇಡುತ್ತೇವೆ. ನಂತರ ಅದನ್ನು ಮನೆಯ ಹಿತ್ತಲಿನ ಮೂಲೆಯೊಂದರಲ್ಲಿ ಮಣ್ಣು ಬಗೆದು ಹೂಳುತ್ತೇವೆ. ಇದಕ್ಕಾಗಿ ನಾವು ಮನೆಯ ಹತ್ತಿರವೇ ಒಂದು ಸ್ಥಳವನ್ನು ಗುರುತಿಸಿದ್ದೇವೆ, ಈಗ ಅದೆಲ್ಲ ಕೆಸರಾಗಿ ಹೋಗಿದೆ. ಹೀಗಾಗಿ ಮನೆಯ ಒಂದು ಮೂಲೆಯಲ್ಲಿ ಸಂಗ್ರಹಿಸಿ ನಂತರ ಹೂಳುತ್ತೇವೆ. ಕೆಲವೊಮ್ಮೇ ಒಂದೇ ಹೊಂಡವನ್ನು ಒಂದಷ್ಟು ಕಾಲ ಬಳಸುತ್ತೇವೆ, ಇನ್ನೂ ಕೆಲವೊಮ್ಮೆ ಹೊಸ ಹೊಂಡವನ್ನು ತೋಡುತ್ತೇವೆ” ಎಂದು ಸೀಮಾ ಹೇಳುತ್ತಾರೆ.
ಅಂದು ದಕ್ಷಿಣ ಅಂಡಮಾನ್ ಜಿಲ್ಲೆಯ ಪಶ್ಚಿಮ ಭಾಗದ ಈ ಗ್ರಾಮದ ಒಂದು ಪಕ್ಕಾ ಮನೆಯ ಹೊರಗೆ ಕುಳಿತಿರುವ ಐದು ಮಹಿಳೆಯರು ಋತುಸ್ರಾವ ಮತ್ತು ತ್ಯಾಜ್ಯ ವಿಲೇವಾರಿ ಪದ್ಧತಿಗಳ ಬಗ್ಗೆ ಮಾತುಕತೆಯಲ್ಲಿ ತೊಡಗಿದ್ದರು. "ಇಂತಹ ವಿಷಯಗಳ ಬಗ್ಗೆ ಯಾರು ಮತಾಡ್ತಾರೆ? ನಾವು ಇಂತಹ ವಿಷಯಗಳನ್ನು ಚರ್ಚಿಸಿದವರೇ ಅಲ್ಲ" ಎಂದು ಮೊಂಡಲ್ ಕುಟುಂಬದ 72 ವರ್ಷದ ಹಿರಿಯ ಮಹಿಳೆ ಉರ್ಮಿಳಾ ನಮ್ಮ ನಮ್ಮ ಮಾತುಕತೆಯ ಸಾಧ್ಯತೆಯನ್ನು ತಳ್ಳಿಹಾಕಿದರು. ಹಲವು ತಲೆಮಾರುಗಳ ಹಿಂದೆ ಈ ದ್ವೀಪಕ್ಕೆ ವಲಸೆ ಬಂದ ವಿವಿಧ ಸಮುದಾಯಗಳ ಹಲವು ಬಂಗಾಳಿ ಕುಟುಂಬಗಳಲ್ಲಿ ಇವರ ಕುಟುಂಬವೂ ಒಂದು.
"ಹಾಗೆ ನೋಡಿದರೆ ನನಗೆ ಮುಟ್ಟಿನ ಬಗ್ಗೆ ಹೇಳಿದವರೇ ಇಲ್ಲ" ಎಂದು ಅವರು ಹೇಳುತ್ತಾರೆ. "ಅವರು ಅದನ್ನು ಬಂಗಾಳಿ ಭಾಷೆಯಲ್ಲಿ ಮಾಸಿಕ್ [ಮಾಸಿಕ] ಎಂದು ಕರೆಯುತ್ತಿದ್ದರು. ಅದು ನಡೆದಾಗ ನಮಗೆ ತಿಳಿಯುತ್ತಿತ್ತು. ನನಗೆ ನನ್ನ ಅಕ್ಕನಿಂದ ಗೊತ್ತಾಯಿತು. ಆ ಸಮಯದಲ್ಲಿ ನಾವು ಶಾಲೆಗೆ ಹೋಗುತ್ತಿರಲಿಲ್ಲ ಅಥವಾ ಮನೆಯಿಂದ ಹೊರಗೆ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ, ಮತ್ತು ಮನೆಯಲ್ಲಿ ಅಡುಗೆಮನೆಗೆ ಪ್ರವೇಶಿಸುತ್ತಿರಲಿಲ್ಲ. ಅವು ನಿಯಮಗಳಾಗಿದ್ದವು. ನಾನು ಯಾವುದೇ ನಿಯಮವನ್ನು ಮೀರಿಲ್ಲ, ಹೀಗಾಗಿ ಅದನ್ನು ಮೀರಿದರೆ ಏನಾಗುತ್ತದೆ ಎನ್ನುವುದು ಸಹ ತಿಳಿದಿಲ್ಲ" ಎಂದು ಅವರು ಹೇಳುತ್ತಾರೆ.
ಮೊಂಡಲ್ ಕುಟುಂಬದ ಮನೆಯ ಹೊರಗೆ ಒಟ್ಟುಗೂಡಿದ ಮಹಿಳೆಯರು ಮೂರು ವಿಭಿನ್ನ ತಲೆಮಾರುಗಳಿಗೆ ಸೇರಿದವರು. ಇದರಲ್ಲಿ ಬದುಕಿನ ಎಂಟು ದಶಕಗಳಿಗೆ ಸಾಕ್ಷಿಯಾಗಿರುವ ಉರ್ಮಿಳಾ, ಅವರ ಸೊಸೆ ಸೀಮಾ ಮೊಂಡಲ್, 41, ಜೊತೆಗೆ ಸೀಮಾ ಅವರ ಪುತ್ರಿಯರಾದ ಬಾನಿ, 17 ಮತ್ತು ಶಿಖಾ, 21, ಹಾಗೂ ಅವರ ಸಂಬಂಧಿಕರಾದ ಶಿವಾನಿ ಮೊಂಡಲ್, 33 ಇದ್ದಾರೆ. ಇವರಲ್ಲಿ ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಸಮಾಜ ಹೇರಿರುವ ಸಂಪ್ರದಾಯಗಳನ್ನು ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತಾರೆ.













