"ಪ್ರತಿಯೊಬ್ಬ ಅಂಗಾಮಿ ಗಂಡಸಿಗೂ ಖೋಪಿ ಹೆಣೆಯುವುದು ಹೇಗೆನ್ನುವುದು ತಿಳಿದಿರಬೇಕು" ಎನ್ನುವುದು ನಾಗಾಲ್ಯಾಂಡ್ನ ಖೋನೊಮಾ ಗ್ರಾಮದ ಕುಶಲಕರ್ಮಿ ಪೆಲೆಸಾಲಿ ಕುವೋತ್ಸು ಅಭಿಪ್ರಾಯ. ಝೂಸಾ (ಬಿದಿರು) ಮತ್ತು ಥುನ್ಯೇ (ಬೆತ್ತ) ಬಳಸಿ ಹೆಣೆಯಲಾಗುವ ಖೋಫಿ ಎನ್ನುವುದು ಅಂಗಾಮಿ ಬುಡಕಟ್ಟಿನ ಸಾಂಪ್ರದಾಯಿಕ ಬುಟ್ಟಿ. ಇವುಗಳನ್ನು ಉರುವಲು ತರಲು, ಅಕ್ಕಿ ಶೇಖರಿಸಲು, ಕೊಯ್ಲು ಮಾಡಿದ ಬೆಳೆಗಳನ್ನು ಇಡಲು ಮತ್ತು ಧಾರ್ಮಿಕ ವಿಧಿವಿಧಾನಗಳ ವಸ್ತುಗಳನ್ನು ಇರಿಸಲು ಬಳಸಲಾಗುತ್ತದೆ. "ನಮ್ಮ ಸಾಂಪ್ರದಾಯಿಕ ಬದುಕಿನಲ್ಲಿ ಈ ಬುಟ್ಟಿಗೆ ಬಹು ದೊಡ್ಡ ಪಾತ್ರವಿದೆ. ಇದು ನಾವು ಸದಾ ಗೌರವಿಸಬೇಕಾದ ಮತ್ತು ಬೆಲೆ ನೀಡಬೇಕಾದ ವಸ್ತು" ಎಂದು ಅವರು ಹೇಳುತ್ತಾರೆ.
ಒಂದು ಕಾಲದಲ್ಲಿ ಈ ಸಮುದಾಯದ ಬದುಕು ಮತ್ತು ಹೊಟ್ಟೆಪಾಡಿನ ಅವಿಭಾಜ್ಯ ಅಂಗವಾಗಿದ್ದ ಖೋಫಿ ಹೆಣಿಗೆ ಇಂದು ಖೊನೊಮಾದಲ್ಲಿ 15ಕ್ಕಿಂತ ಕಡಿಮೆ ಮನೆಗಳಲ್ಲಿ ಮಾತ್ರವೇ ಉಳಿದಿದೆ. ಬಹುತೇಕ ಈ ಕಸುಬನ್ನು ಇಂದು ಸಮುದಾಯದ ಹಿರಿಯರೇ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ ಪೆಲಿಸಾಲಿಯವರು ಇದಕ್ಕೆ ಅಪವಾದ.
50 ಆಸುಪಾಸಿನ ವಯಸ್ಸಿನ ಕೆಪೆ ಥೋಟೋ ಬಿದಿರಿನ ಎಳೆಗಳನ್ನು ಸವರುತ್ತಿದ್ದರೆ ಅವರ ಕೈಗಳು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಚಲಿಸುವುದನ್ನು ನೋಡಿದರೆ ಅವರ ವರ್ಷಗಳ ಅನುಭವ ಅದರಲ್ಲಿ ಕಾಣುತ್ತಿತ್ತು. ಅವರು ಮಂದ ಬೆಳಕಿದ್ದ ತೆರ್ಹು ಎನ್ನು ರಚನೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರು. ಈ ರಚನೆ ಬಿದಿರಿನ ಗಳು, ಮರ ಮತ್ತು ಬೆತ್ತವನ್ನು ಬಳಸಿ ಕಟ್ಟಿದ ಮತ್ತು ಎಲೆಯನ್ನು ಛಾವಣಿಯಾಗಿ ಹೊಂದಿರುವ ಕೋಣೆಯ ರೀತಿಯದು. ಈ ತೆರ್ಹು ಅವರಿಗೆ ಮಧ್ಯಾಹ್ನ ಸೂರ್ಯನ ಕಡು ಬಿಸಿಲಿನಿಂದ ರಕ್ಷಣೆ ನೀಡುತ್ತಿತ್ತು.
"ನಾನು ಕುಶಲಕರ್ಮಿ ಕುಟುಂಬಕ್ಕೆ ಸೇರಿದವನು. ನನ್ನ ಸಹೋದರ ಸಂಬಂಧಿಗಳಿಗೆ ಹಾಗೂ ಉಳಿದವರಿಗೂ ಖೋಫಿ ಬುಟ್ಟಿ ಹೆಣೆಯುವ ಕಲೆಯನ್ನು ಕಲಿಸಲಾಗಿತ್ತು" ಎಂದು ಕೆಪೆ ಹೇಳಿದರು. ಮಾತನಾಡುತ್ತಲೇ ಅವರು ಬಿದಿರಿನ ಎಳೆಗಳನ್ನು ಹೆಣೆಯುವ ಕೆಲಸದಲ್ಲಿ ಮಗ್ನರಾಗಿದ್ದರು.
ಅಂಗಾಮಿ ಸಮುದಾಯವು ನಾಗಾಲ್ಯಾಂಡ್ನ 17 ಮಾನ್ಯತೆ ಪಡೆದ ಬುಡಕಟ್ಟುಗಳಲ್ಲಿ ಒಂದು. ಖೋನೋಮಾ 1800ರ ದಶಕದಲ್ಲಿ ಬ್ರಿಟಿಷ್ ಆಕ್ರಮಣದ ವಿರುದ್ಧ ನಾಗಾ ಪ್ರತಿರೋಧಕ್ಕೆ ಸಾಕ್ಷಿಯಾದ ಒಂದು ಐತಿಹಾಸಿಕ ಸ್ಥಳ. ಈ ಅಂಗಾಮಿ ಸಮುದಾಯದವರ ಗ್ರಾಮವು ರಾಜ್ಯದ ರಾಜಧಾನಿ ಕೊಹಿಮಾದಿಂದ ಪಶ್ಚಿಮಕ್ಕೆ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ಹತ್ತಿರದ ಕಾಡುಗಳಲ್ಲಿ ಬೇಟೆ ಮತ್ತು ಮರ ಕಡಿಯುವುದನ್ನು ನಿಷೇಧಿಸುವಂತಹ ಸಮುದಾಯ ನೇತೃತ್ವದ ಸಂರಕ್ಷಣಾ ಪದ್ಧತಿಗಳು ಮತ್ತು ಸಾವಯವ ಕೃಷಿ ವಿಧಾನಗಳಿಗೆ ಈ ಗ್ರಾಮವು ಹೆಸರುವಾಸಿ.
ಇಪ್ಪತ್ತು ಚದರ ಕಿಲೋಮೀಟರ್ ವಿಸ್ತೀರ್ಣದ ಗುಡ್ಡಗಾಡು ಪ್ರದೇಶದಲ್ಲಿ ಹರಡಿರುವ ಈ ಊಋಿನಲ್ಲಿ ಕಲ್ಲು ಹಾಸಿನ ರಸ್ತೆಗಳು, ಮೆಟ್ಟಿಲು ಸಾಲಿನ ಭತ್ತದ ಗದ್ದೆಗಳು ಮತ್ತು ಸಾಂಪ್ರದಾಯಿಕ ಮನೆಗಳ ಹೊರಗೆ ಅಚ್ಚುಕಟ್ಟಾಗಿ ಜೋಡಿಸಿಟ್ಟ ಸೌದೆಯ ರಾಶಿ ಸಾಮಾನ್ಯ ದೃಶ್ಯ.
ಕೇವಲ 400ಕ್ಕೂ ಹೆಚ್ಚು ಅಂಗಾಮಿ ಕುಟುಂಬಗಳನ್ನು ಹೊಂದಿರುವ ಈ ಗ್ರಾಮವು (2011ರ ಜನಗಣತಿಯ ಪ್ರಕಾರ 1,943 ಜನಸಂಖ್ಯೆ), ಪ್ರಮುಖವಾಗಿ ಕಲ್ಲಿನ ಮೆಟ್ಟಿಲುಗಳ ಮೇಲೆ ಭತ್ತದ ಕೃಷಿ, ಸ್ಥಳಾಂತರ ಕೃಷಿ ಮತ್ತು ಅರಣ್ಯ ಉತ್ಪನ್ನಗಳ ಮೂಲಕ ತನ್ನ ಬದುಕಿನ ಬಂಡಿಯನ್ನು ದೂಡುತ್ತಿದೆ. ಸುತ್ತಮುತ್ತಲಿನ ಕಾಡುಗಳನ್ನು ಸಮುದಾಯವೇ ಸಂರಕ್ಷಿಸುತ್ತಿದ್ದು, ವಿಶೇಷವಾಗಿ ಖೋನೋಮಾ ಪ್ರಕೃತಿ ಸಂರಕ್ಷಣೆ ಮತ್ತು ಟ್ರಾಗೋಪಾನ್ ಅಭಯಾರಣ್ಯದ ಮೂಲಕ ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.


















