ನಿಖಿರಪ್ಪ ಗಡಿಯಪ್ಪ ಅವರು ಮೇ ತಿಂಗಳ ಕೊನೆಯಲ್ಲಿ ರಾಮನಾಗರ ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಗೆ ಹಾವೇರಿ ತಾಲ್ಲೂಕಿನಿಂದ ರಾತ್ರಿಯಿಡೀ ಪ್ರಯಾಣಿಸಿದ ಅವರು ತಮ್ಮ ರೇಷ್ಮೆ ಗೂಡುಗಳಿಗೆ ಯೋಗ್ಯ ಬೆಲೆ ಪಡೆಯುವ ಭರವಸೆಯಲ್ಲಿದ್ದರು. ಆದರೆ 11 ಗಂಟೆಗಳ ತಡೆರಹಿತ 370 ಕಿಲೋಮೀಟರ್ ಪ್ರಯಾಣದ ಸಮಯದಲ್ಲಿ - ಲಾಕ್ಡೌನ್ ಕಾರಣ ದಾರಿಯುದ್ದಕ್ಕೂ ಆಹಾರ ಮಳಿಗೆಗಳು ಮುಚ್ಚಲ್ಪಟ್ಟವು - ಆಗ ಅವರಿಗೆ ತನ್ನ ಗೂಡುಗಳನ್ನು ಕಡಿಮೆ ಬೆಲೆಗೆ ಕೇಳಿದರೆ ಏನು ಮಾಡುವುದೆನ್ನುವ ಭಯ ಕಾಡತೊಡಗಿತು.
ಹಾವೇರಿಜಿಲ್ಲೆಯಲ್ಲಿರುವ ಅವರ ಊರಾದ ಹಂದಿಗನೂರಿಗೆ ಮರಳುವಾಗ ಅವರು ಭರವಸೆ ಮುಳುಗಿ ಹೋಗಿತ್ತು – ಅವರ ಭಯ ನಿಜವಾಗಿತ್ತು. ಅವರು ತನ್ನ 250 ಕೇಜಿಗಳ ಎಲ್ಲ ಬೈವೋಲ್ಟೇನ್ ರೇಷ್ಮೆ ಗೂಡುಗಳನ್ನು ಕೇವಲ 67,500 ರೂಪಾಯಿಗಳಿಗೆ – ಅಥವಾ ಕಿಲೋ ಒಂದಕ್ಕೆ ರೂಪಾಯಿ 270ರಂತೆ ಮಾರಿದ್ದರು.
ಮಾರ್ಚ್ಗೂ ಮೊದಲು ಬೈವೋಲ್ಟೇನ್ ಗೂಡುಗಳಿಗೆ ಸರಿಸುಮಾರು 550 ರೂಪಾಯಿ ಪ್ರತಿ ಕೇಜಿಗೆ ಸಿಗುತ್ತಿತ್ತು. ಮತ್ತು ಕ್ರಾಸ್ ಬ್ರೀಡ್ ಗೂಡುಗಳು ಮದುವೆ ಸಮಯದ ಡಿಮ್ಯಾಂಡ್ ಇರುವಾಗ ಅಂದಾಜು ರೂಪಾಯಿ 480ರಂತೆ ಪ್ರತಿ ಕಿಲೋಗೆ ಮಾರಾಟವಾಗುತ್ತಿತ್ತು. ಬೇಡಿಕೆ ಕಡಿಮೆಯಿರುವ ಸಮಯದಲ್ಲಿ ಬೈವೋಲ್ಟೇನ್ ರೇಷ್ಮೆ ಗೂಡಿನ ಬೆಲೆ ಪ್ರತಿ ಕೇಜಿಗೆ ರೂಪಾಯಿ 450-500 ಇರುತ್ತದೆ. ಮತ್ತು ಕ್ರಾಸ್ಬ್ರೀಡ್ ಬೆಲೆ ಪ್ರತಿ ಕೇಜಿಗೆ ರೂಪಾಯಿ 380-420. (ಬೈವೋಲ್ಟೇನ್ ಶುದ್ಧ ಬಿಳಿ ತಳಿಯಾಗಿದ್ದು: ಕ್ರಾಸ್ ಬ್ರೀಡ್ ತಳಿಯ ಗೂಡು ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದನ್ನು ಕೆಳದರ್ಜೆಯ ಹುಳು ಮತ್ತು ಬೈವೋಲ್ಟೇನ್ ಎರಡರ ಸಂಯೋಜನೆಯಲ್ಲಿ ಬೆಳೆಯಲಾಗುತ್ತದೆ.)
“ನಾನು ರೇಷ್ಮೆ ಗೂಡು ಉತ್ಪಾದಿಸಲು ನನ್ನ ಪೂರ್ವಜರ ಭೂಮಿಯಲ್ಲಿ [2014 ರಲ್ಲಿ] ಹಿಪ್ಪುನೇರಳೆ ಬೆಳೆಯಲು ಪ್ರಾರಂಭಿಸಿದೆ. ಈಗ, ಅವುಗಳನ್ನು ಕನಿಷ್ಟ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದೇನೆ. ನನ್ನ ಸಾಲಗಳನ್ನು ಹೇಗೆ ತೀರಿಸುವುದೆಂದು ತಿಳಿಯುತ್ತಿಲ್ಲ” ಎಂದು 42 ವರ್ಷದ ಗಡಿಯಪ್ಪ ಹೇಳುತ್ತಾರೆ.
2014ರವರೆಗೆ, ಗಡಿಯಪ್ಪ ಅವರು ಕರ್ನಾಟಕದ ಹಾವೇರಿ ಜಿಲ್ಲೆಯ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ದಿನನಿತ್ಯ ರೂ. 150-170 ಕೂಲಿ ಸಂಪಾದಿಸುತ್ತಿದ್ದರು. ತಮಗಿರುವ ಮೂರು ಎಕರೆ ಭೂಮಿಯಲ್ಲಿ, ಅವರ 10 ಸದಸ್ಯರ ಕುಟುಂಬವು ತಮ್ಮ ಸ್ವಂತ ಬಳಕೆಗಾಗಿ ಮತ್ತು ಉಳಿದಿದ್ದನ್ನು ಮಾರಲು ಮುಖ್ಯವಾಗಿ ಜೋಳ ಮತ್ತು ನೆಲಗಡಲೆ ಬೆಳೆಯುತ್ತಿತ್ತು. 2016ರಲ್ಲಿ, ಗಡಿಯಪ್ಪ ಅವರು ಜೋಳ ಮತ್ತು ನೆಲಗಡಲೆ ಬೆಳೆ ಬೆಳೆಯಲು ಇನ್ನೂ ಐದು ಎಕರೆಗಳನ್ನು ಗುತ್ತಿಗೆಗೆ ತೆಗೆದುಕೊಂಡರು, ಜೊತೆಗ ಉಳಿದ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆದರು - ಈ ನಿರ್ಧಾರವು ಇನ್ನೊಂದಿಷ್ಟು ಸಂಪಾದಿಸಲು ಸಹಾಯ ಮಾಡುತ್ತದೆ ಎಂದು ಅವರು ಆಶಿಸಿದ್ದರು.
ಗಡಿಯಪ್ಪ ಮತ್ತು ಇತರ ರೈತರು ಪ್ರತಿ 35-45 ದಿನಗಳಿಗೊಮ್ಮೆ ಅಥವಾ ವರ್ಷಕ್ಕೆ ಸುಮಾರು 10 ಬಾರಿ ರೇಷ್ಮೆ ಗೂಡುಗಳನ್ನು ಮಾರಾಟ ಮಾಡುತ್ತಾರೆ. ಚಾಕಿ (ಸಣ್ಣ ರೇಷ್ಮೆ ಹುಳುಗಳು) ಗೂಡುಗಳನ್ನು ರೂಪಿಸಲು ಸುಮಾರು 23 ದಿನಗಳನ್ನು ತೆಗೆದುಕೊಳ್ಳುತ್ತವೆ. ಈ ಸಾಲಿನಲ್ಲಿ, ಗಡಿಯಪ್ಪ ಅವರು ಮೇ ಮೊದಲ ವಾರದಲ್ಲಿ ಹುಳುಗಳನ್ನು ಸಾಕಲು ಪ್ರಾರಂಭಿಸಿದ್ದರು. ಅವರು ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಗೂಡುಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಅವು ಆರ್ದ್ರ ವಾತಾವರಣದಿಂದ ಸೋಂಕಿಗೆ ಒಳಗಾಗದಂತೆ ಅಥವಾ ಅದು ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿತ್ತು. ನಂತರ ಮೇ ಕೊನೆಯಲ್ಲಿ, ಅವರು ರೇಷ್ಮೆ ಗೂಡುಗಳನ್ನು ರಾಮನಗರದ ಮಾರುಕಟ್ಟೆಗೆ ಕೊಂಡೊಯ್ದರು - ಅಲ್ಲಿ ಅವರು ನಷ್ಟವನ್ನು ಅನುಭವಿಸಬೇಕಾಯಿತು.







