ಅರ್ಜಿನಾ ಬೀಬಿಯವರ ಮನಸ್ಸಿನಲ್ಲಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ತಮ್ಮ ಬಾಪೆರ್ ಬಾರಿಯಲ್ಲಿ (ತವರು ಮನೆ) ತಾಯಿ ಮತ್ತು ಅಜ್ಜಿಯೊಂದಿಗೆ ಕಳೆದ ದಿನಗಳ ಪ್ರೀತಿಯ ನೆನಪುಗಳು ಇನ್ನೂ ಹಚ್ಚಹಸಿರಾಗಿವೆ. “ನನ್ನ ಕಾಂಥ ಕೆಲಸದಲ್ಲಿ ನನ್ನ ಅಜ್ಜಿಯ ಪ್ರಭಾವವನ್ನು ನೀವು ಕಾಣಬಹುದು. ಅಡ್ಡ - ಪದರ ಹೊಲಿಗೆಗಳನ್ನು ಹಾಕಿ, ಅದರ ಮೇಲೆ ಕಸೂತಿ ಮಾಡಿದ ಹೂವುಗಳನ್ನು ತುಂಬುವುದು ಅವರ ಶೈಲಿ,” ಎಂದು ಪಾರಂಪರಿಕವಾಗಿ ತಾವು ಪಡೆದ ಕಸೂತಿ ಕಲೆಯ ಬಗ್ಗೆ ಅರ್ಜಿನಾ ಬೀಬಿ ಹೇಳುತ್ತಾರೆ. “ನನಗೆ ಏನೇನು ಗೊತ್ತಿದೆಯೋ, ಅವೆಲ್ಲವನ್ನೂ ನೋಡಿಯೇ ಕಲಿತದ್ದು. ಅಜ್ಜಿಯ ಶೈಲಿಯಲ್ಲಿಯೇ ನಾನು ಇಂದಿಗೂ ಹೊಲಿಯುತ್ತೇನೆ,” ಎಂದು ಅವರು ಹೇಳುತ್ತಾರೆ.
ಅರ್ಜಿನಾ ಅವರು ಕಳೆದ ಮೂರು ದಶಕಗಳಿಂದ ಕಾಂಥ ಕರಕುಶಲಕರ್ಮಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಈ ಕೌಶಲ್ಯವು ಮನೆಗೆ ಹಣಕಾಸಿನ ನೆರವನ್ನು ನೀಡುತ್ತಿದೆ ಎಂದು ಅವರು ಹೇಳುತ್ತಾರೆ. ಸದ್ಯ ನಲ್ವತ್ತರ ಹರೆಯವನ್ನು ದಾಟುತ್ತಿರುವ ಇವರು, ಸ್ಥಳೀಯ ವ್ಯಾಪಾರಿಗಳು ನೀಡಿದ ಕೆಲಸವನ್ನು ಮಾಡುವ ಆರು ಮಂದಿ ಮಹಿಳೆಯರ ಕಾಂಥ ಕುಶಲಕರ್ಮಿಗಳ ಗುಂಪೊಂದನ್ನು ನಡೆಸುತ್ತಿದ್ದಾರೆ.
ಜುಲೈ ತಿಂಗಳ ಒಂದು ಉರಿ ಬಿಸಿಲಿನ ಮಧ್ಯಾಹ್ನ ಅರ್ಜಿನಾ ಅವರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಸತ್ ನಗರದ ಹೊರವಲಯದಲ್ಲಿರುವ ಅವರು ಕೆಲಸ ಮಾಡುವ ಸ್ಥಳದಲ್ಲಿ ಭೇಟಿಯಾದೆವು. ಇವರ ನೆರೆಮನೆಯವರು ಮತ್ತು ಸಹೋದ್ಯೋಗಿಯಾಗಿರುವ ನೂರನಹರ್ ಬೀಬಿಯವರು ವಾಸಿಸುವ ಕೋಣೆಯಲ್ಲಿಯೇ ಕಾರ್ಖಾನೆಯೊಂದನ್ನು (ವರ್ಕ್ಶಾಪ್) ಮಾಡಿಕೊಂಡಿದ್ದಾರೆ. ಈ ಕಾರ್ಖಾನೆಯ ತುಂಬಾ ದಾರಗಳು, ಕತ್ತರಿ ಮತ್ತು ಟ್ರೇಸಿಂಗ್ ಪೇಪರ್ಗಳ ಬಾಕ್ಸ್ಗಳು ಹರಡಿಕೊಂಡಿದ್ದವು. ಕಾಂಥ ಕರಕುಶಲತೆಯ ವಿಶಿಷ್ಟ ಹೊಲಿಗೆ ಶೈಲಿಯಾದ ರನ್ನಿಂಗ್ ಸ್ಟಿಚ್ ಬಳಸಿಕೊಂಡು ಹೆಂಗಸರು ಬಟ್ಟೆಯ ಮೇಲೆ ಕಸೂತಿಯ ಕೆಲಸ ಮಾಡುತ್ತಿದ್ದರು.
“ನಮ್ಮ ಗಂಡ ಕಾಂಥ ಐಟಂಗಳ ವಿತರಕರಾಗಿ ಕೆಲಸ ಮಾಡುತ್ತಾರೆ. ನಾನು ಕಸೂತಿ ಕೆಲಸ ಮಾಡಿ ಅವರಿಗೆ ನೆರವಾಗುತ್ತೇನೆ,” ಎಂದು 35 ವರ್ಷ ಪ್ರಾಯದ ನೂರನಹರ್ ಹೇಳುತ್ತಾರೆ. ಇವರ ಗಂಡ 43 ವರ್ಷ ಪ್ರಾಯದ ಮಹಮ್ಮದ್ ಜಲಾಲುದ್ದೀನ್ ಮತ್ತು ಅವರ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಕಾಂಥದ ವ್ಯಾಪಾರ ಮಾಡುತ್ತಿದ್ದಾರೆ. “ಅವರು ಒಳ್ಳೆಯ ಕಾಂಥ ಕುಶಲಕರ್ಮಿ, ಕಸೂತಿ ತುಂಬಾ ಚೆನ್ನಾಗಿ ಮಾಡುತ್ತಾರೆ,” ಎಂದು ನೂರನಹರ್ ಅವರು ನಗುತ್ತಾ ತಮ್ಮ ಪತಿಯನ್ನು ಹೊಗಳುತ್ತಾರೆ.
ಆಗ, ಹತ್ತಿರವೇ ಕುಳಿತಿದ್ದ ಅರ್ಜಿನಾ ಅವರು ಜಲಾಲುದ್ದೀನ್ ಅವರನ್ನು ಕಿಚಾಯಿಸುತ್ತಾ, “ಮೆಯೆʼರಾ ಬೇಷಿ ಭಾಲೋ ಬನಾಯೆ, ಕ್ಯೊನೊ ಕಿ ಅಮರ ಮೊನ್ ದಿಯೆ ಶಿಖೆಚಿ, ಆರ್ ಮೊನ್ ದಿಯೆ ಕಂಥಾ ಬನಾಯಿ. ಚೆಲೆʼರಾ ತೋ ಎಯ್ ಶೋಬ್ ಕೆ ಕಾಜ್ ಮೆನೆ ಚೋಲೆ [ಹೆಂಗಸರು ತುಂಬಾ ಚೆನ್ನಾಗಿ ಕಸೂತಿ ಮಾಡುತ್ತಾರೆ, ನಮಗೆ ಈ ಕರಕುಶಲತೆಯೊಂದಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಗಂಡಸರಿಗೆ ಇದೊಂದು ಕೇವಲ ಉದ್ಯೋಗ ಮಾತ್ರ,]” ಎಂದು ಹೇಳುತ್ತಾರೆ.
















