ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ 40 ಕುಕಿ-ಝೋ ಬುಡಕಟ್ಟು ಕುಟುಂಬಗಳ ಸಣ್ಣ ಗ್ರಾಮವಾದ ನಗಾಮುನ್ ಗುನ್ಫೈಜಾಂಗ್ ಎನ್ನುವಲ್ಲಿ ಇಬ್ಬರು ಗಂಡಸರು ದಟ್ಟವಾದ ಕಾಡಿನ ದಾರಿಯ ನಡುವೆ ತಮ್ಮ ಹೊಲದೆಡೆಗಿನ ಏರು ದಾರಿಯನ್ನು ಹತ್ತುತ್ತಿದ್ದರು. 2023ರ ಸೆಪ್ಟೆಂಬರ್ ತಿಂಗಳ ಆ ದಿನ ಆಕಾಶದ ತುಂಬಾ ಮೋಡಗಳು ದಟ್ಟೈಸಿದ್ದವು. ಅವರಿಬ್ಬರು ದಟ್ಟ ಪೊದೆಗಳಿಂದ ಕೂಡಿದ ಬೆಟ್ಟದ ದಾರಿಯಲ್ಲಿ ನಡೆಯುತ್ತಿದ್ದರು.
ಕೆಲವೇ ವರ್ಷಗಳ ಹಿಂದೆ ಈ ಗುಡ್ಡಗಳು ಬಿಳಿ, ಊದಾ ಮತ್ತು ಗುಲಾಬಿ ಬಣ್ಣದ ಗಸಗಸೆ (ಪಾಪಾವರ್ ಸೋಮ್ನಿಫೆರಮ್) ಕುಟುಂಬದ ಗಿಡಗಳ ಹೂವಿನಿಂದ ಕೂಡಿರುತ್ತಿದ್ದವು.
“ನಾನು 1990ರ ದಶಕದ ಆರಂಭದಲ್ಲಿ ಗಾಂಜಾ (ಕೆನಾಬಿಸ್ ಸ್ಯಾಟಿವಾ) ಬೆಳೆಯುತ್ತಿದ್ದೆ, ಆದರೆ ಆ ಸಮಯದಲ್ಲಿ, ಅದರಿಂದ ಅಷ್ಟೇನೂ ಆದಾಯ ಬರುತ್ತಿರಲಿಲ್ಲ” ಎಂದು ಈ ದಾರಿಯಲ್ಲಿ ನಡೆಯುತ್ತಿದ್ದ ರೈತರಲ್ಲಿ ಒಬ್ಬರಾದ ಪಾವೊಲಾಲ್ ಹೇಳಿದರು. "2000ರ ದಶಕದ ಆರಂಭದಲ್ಲಿ, ಜನರು ಈ ಬೆಟ್ಟಗಳಲ್ಲಿ ಕಾನಿ [ಗಸಗಸೆ] ಬೆಳೆಯಲು ಪ್ರಾರಂಭಿಸಿದರು. "ಕೆಲವು ವರ್ಷಗಳ ಹಿಂದೆ ಅದನ್ನು ನಿಷೇಧಿಸುವವರೆಗೂ ಅದನ್ನು ನಾನೂ ಬೆಳೆಯುತ್ತಿದ್ದೆ" ಎಂದು ಅವರು ಹೇಳುತ್ತಾರೆ.
ಪಾವೊಲಾಲ್ ಅವರು 2020ನೇ ಇಸವಿಯ ಚಳಿಗಾಲದ ಕುರಿತು ಮಾತನಾಡುತ್ತಿದ್ದರು. ಆ ಸಮಯದಲ್ಲಿ ನಹಾಮುನ್ ಗುನ್ಪಾಯ್ಜಾಂಗ್ ಮುಖ್ಯಸ್ಥ ಎಸ್ ಟಿ ತನ್ಬೋಜ್ ಕಿಗ್ಪೆನ್ ಊರಿನ ಎಲ್ಲ ಗಸಗಸೆ ತೋಟವನ್ನು ನಾಶಪಡಿಸುವಂತೆಯೂ ಮತ್ತು ಇನ್ನು ಮುಂದೆ ಗಸಗಸೆ ಬೆಳೆಯನ್ನು ಬೆಳೆಯಬಾರದೆಂದೂ ಕರೆ ನೀಡಿದರು. ಆದರೆ ಈ ನಿರ್ಧಾರವನ್ನು ಅವರು ಒಂಟಿಯಾಗಿ ತೆಗೆದುಕೊಂಡಿರಲಿಲ್ಲ. ಅವರು ಈ ನಿರ್ಧಾರವನ್ನು ರಾಜ್ಯ ಬಿಜೆಪಿ ಸರ್ಕಾರದ ʼಡ್ರಗ್ಸ್ ವಿರುದ್ಧ ಯುದ್ಧʼ ಅಭಿಯಾನದ ಭಾಗವಾಗಿ ತೆಗೆದುಕೊಂಡಿದ್ದರು.
ಹೆಚ್ಚು ವ್ಯಸನಕಾರಿ ಮಾದಕ ವಸ್ತುವಾದ ಅಫೀಮನ್ನು ತಯಾರಿಸಲು ಬಳಸಲಾಗುವ ಗಸಗಸೆಯನ್ನು ಮುಖ್ಯವಾಗಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಾದ ಚುರಾಚಂದ್ಪುರ , ಉಖ್ರುಲ್, ಕಾಮ್ಜೋಂಗ್, ಸೇನಾಪತಿ, ತಮೆಂಗ್ಲಾಂಗ್, ಚಾಂದೇಲ್, ತೆಂಗ್ನೌಪಾಲ್ ಮತ್ತು ಕಾಂಗ್ಪೋಕ್ಪಿಯಲ್ಲಿ ಬೆಳೆಯಲಾಗುತ್ತದೆ; ಕಾಂಗ್ಪೋಕ್ಪಿ ನಿವಾಸಿಗಳಲ್ಲಿ ಹೆಚ್ಚಿನವರು ಕುಕಿ-ಜೋ ಬುಡಕಟ್ಟು ಜನಾಂಗಕ್ಕೆ ಸೇರಿದವರು.
ಐದು ವರ್ಷಗಳ ಹಿಂದೆ, ನವೆಂಬರ್ 2018ರಲ್ಲಿ, ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರವು ಮಾದಕ ವಸ್ತುಗಳ ವಿರುದ್ಧದ ಯುದ್ಧವನ್ನು ಪ್ರಾರಂಭಿಸಿತು. ಆ ಪ್ರದೇಶಗಳಲ್ಲಿ ಗಸಗಸೆ ಕೃಷಿಯನ್ನು ನಿಲ್ಲಿಸುವಂತೆ ಸಿಂಗ್ ಗುಡ್ಡಗಾಡು ಜಿಲ್ಲೆಗಳ ಗ್ರಾಮ ಮುಖ್ಯಸ್ಥರು ಮತ್ತು ಚರ್ಚುಗಳಿಗೆ ಮನವಿ ಮಾಡಿದರು.









