“ಕವಡಿ, ಕವಡಿ, ಕವಡಿ, ಕಬಡ್ಡಿ, ಕಬಡ್ಡಿ, ಕಬಡ್ಡಿ….”
ವೃತ್ತಾಕಾರದ ಮಣ್ಣಿನ ಅಂಕಣದೊಳಗೆ ಜೋರಾಗಿ ಕೂಗುತ್ತಾ ರೈಡರ್ಗಳು ಮತ್ತು ಎದುರಾಳಿ ಆಟಗಾರರು ಕಾದಾಡುತ್ತಿದ್ದರು. ದೆಹಲಿಯ ಹೊರವಲಯದಲ್ಲಿರುವ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿರುವ ಇದೇ ಸ್ಥಳದಲ್ಲಿ 2020-2021 ರಲ್ಲಿ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ಮತ್ತು ಕೃಷಿ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಸೇರಿದ್ದರು. ಪ್ರತಿಭಟನೆಯ ಭಾಷಣಗಳು ಮತ್ತು ಘೋಷಣೆಗಳೊಂದಿಗೆ ಕಬಡ್ಡಿಯ ವೀಕ್ಷಕ ವಿವರಣೆಯೂ ಬರೆತು ಒಂದು ಲಯವನ್ನು ಸೃಷ್ಟಿಸಿತ್ತು.
2021 ರ ಸಪ್ಟೆಂಬರ್ನಲ್ಲಿ ನಡೆದ ಒಂದು ವಾರದ ಪಂದ್ಯಾಟದ ಕೊನೆಯಲ್ಲಿ ಹೊಸ ಆಟಗಾರರೊಬ್ಬರು ಮಿಂಚಿ ಮುನ್ನಲೆಗೆ ಬಂದರು. ಅವರು ಹರ್ಯಾಣದ ರೋಹ್ಟಕ್ನ ಶಿಲು ಬಲ್ಹಾರ. ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಯುವಕರ ಬದುಕಿದೆ ದೃಢವಾದ ಆರ್ಥಿಕ ನೆಲೆಯನ್ನು ಕಟ್ಟಿಕೊಡುತ್ತಿರುವ ಪಂಜಾಬಿನ ಕಬಡ್ಡಿ ತಾರೆಗಳ ಲೀಗಿನೊಂದಿಗೆ ಇವರೂ ಸೇರಿಕೊಂಡರು.
ಪಂಜಾಬಿನ ಹುಡುಗರು ತಮ್ಮ ಊರುಗಳಲ್ಲಿ ಮೊದಲು ಆಡುವ ಆಟ ವೃತ್ತ ಶೈಲಿಯ ಕಬಡ್ಡಿ. ಈ ಆಟದ ಆಕರ್ಷಣೆ ಇರುವುದು ಇದರ ಸರಳತೆಯಲ್ಲಿ. ಇದನ್ನು ಆಡಲು ಯಾವುದೇ ಸಾಧನಗಳ ಅಗತ್ಯವಿಲ್ಲ, ಆಡುವಾಗ ಆಟಗಾರರು ಶೂ ಧರಿಸುವ ಅಗತ್ಯವೂ ಇರುವುದಿಲ್ಲ. ಮಣ್ಣಿನಲ್ಲಿ ಆಡುವ ಈ ಆಟದ ನಿಯಮಗಳೂ ಸರಳವಾಗಿವೆ.
ಕಬಡ್ಡಿಗೆ ಅಗತ್ಯವಾಗಿ ಬೇಕಾಗಿರುವ ದೈಹಿಕ ಬಲಾಡ್ಯತೆಯು ದೇಹದಾರ್ಢ್ಯವನ್ನು ಬೆಳೆಸಿಕೊಳ್ಳಲು ಇಷ್ಟಪಡುವ ಯುವಕರನ್ನು ಈ ಆಟದ ಕಡೆಗೆ ಆಕರ್ಷಿಸುತ್ತದೆ. ಪಂಜಾಬಿ ಶೈಲಿಯ ಈ ಆಟವನ್ನು ಜಾತ್ರೆಗಳು, ಸಮುದಾಯದ ಕಾರ್ಯಕ್ರಮಗಳು ಮತ್ತು ಸ್ಥಳೀಯ ಕ್ರೀಡೋತ್ಸವಗಳಲ್ಲಿ ಆಡಲಾಗುತ್ತದೆ.
ಪಂಜಾಬಿನಲ್ಲಿ ಕಬಡ್ಡಿ ಸೀಸನ್ ಕೃಷಿ ಕೆಲಸಗಳ ಜೊತೆ ಜೊತೆಗೆ ಬರುತ್ತದೆ. ಅಕ್ಟೋಬರ್ನಲ್ಲಿ ಬಿತ್ತನೆ ಕಾರ್ಯ ಆರಂಭವಾದಾಗ ಈ ಆಟ ಶುರುವಾಗುತ್ತದೆ, ಎಪ್ರಿಲ್ನಲ್ಲಿ ಬರುವ ಸುಗ್ಗಿಯ ವರೆಗೆ ನಡೆಯುತ್ತದೆ.




















