ಅಲ್ಲಿನ ಗಾಳಿಯಲ್ಲಿ ಅಡುಗೆ ಒಲೆಯ ಬೆಂಕಿಯಿಂದ ಬರುವ ಹೊಗೆ ಹಾಗೂ ಜೋಳವನ್ನು ಹುರಿಯುತ್ತಿರುವುದರ ಪರಿಮಳವನ್ನು ಹೊತ್ತು ಸಾಗುತ್ತಿತ್ತು. ಹುರ್ಡಾ ಎಂದು ಕರೆಯಲಾಗುವ ಆಗ ತಾನೆ ಕೊಯ್ಲು ಮಾಡಿದ ಜೋಳದ ತಿನಿಸು ಈ ಪ್ರದೇಶದಲ್ಲಿ ಖ್ಯಾತಿಯನ್ನು ಹೊಂದಿದ್ದು, ಇಲ್ಲಿನ ರೈತರ ಮರಾಠವಾಡಾದ ಹಳ್ಳಿ ಮತ್ತು ಪಟ್ಟಣಗಳಲ್ಲಿ ಈ ತಿನಿಸಿನ ಅಂಗಡಿಯನ್ನು ಹಾಕುತ್ತಾರೆ.
“ಜನರು ಈ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ ಎಂದು ಜಲ್ನಾ ಜಿಲ್ಲೆಯ ಲೊಂಧ್ಯಾಚಿವಾಡಿಯ ಜೋಳದ ಬೆಳೆಗಾರ ಸೂರ್ಯಕಾಂತ್ ಮೈಂದ್ ಹೇಳುತ್ತಾರೆ. ಅವರು ಜಲ್ನಾ ಜಿಲ್ಲೆಯಲ್ಲಿನ ತಮ್ಮ ಐದು ಎಕರೆ ಭೂಮಿಯಲ್ಲಿ ಬೆದ್ರಿ ಮತ್ತು ಮಾಲ್ದಂಡಿ ಜೋಳದ ತಳಿಗಳನ್ನು ಬೆಳೆಯುತ್ತಾರೆ. ಕುಟುಂಬವು ಸಾಕಷ್ಟು ಮೃದುವಾಗಿರುವಾಗಲೇ ಅರ್ಧದಷ್ಟು ಜೋಳವನ್ನು ಕೊಯ್ಲು ಮಾಡುತ್ತದೆ. ಉಳಿದ ಬೆಳೆಯನ್ನು ಪೂರ್ತಿ ಬೆಳೆದ ನಂತರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಕೊಯ್ಲು ಮಾಡಲಾಗುತ್ತದೆ.
ಎಚ್ಚರಿಕೆಯಿಂದ ಕೊಯ್ಲು ಮಾಡಿದ ಎಳೆ ಜೋಳವನ್ನು (ಹುರ್ಡಾ) ತೆಗೆದುಕೊಂಡು ಮೈಂದ್ ಜಲ್ನಾ ನಗರದತ್ತ ಪ್ರಯಾಣಿಸುತ್ತಾರೆ. ತಾನು 40 ಕೇಜಿಯಷ್ಟು ಜೋಳವನ್ನು ತಲಾ 150 ರೂಪಾಯಿ ಬೆಲೆಗೆ ಮಾರುವುದಾಗಿ ಈ 55 ವರ್ಷದ ರೈತ ಹೇಳುತ್ತಾರೆ.
ಅಂಗಡಿಯಲ್ಲಿ ಹುರ್ಡಾ ತಯಾರಿಸುವುದು ನಿಧಾನವಾದ ಮತ್ತು ಗಮನ ಬೇಡುವ ಪ್ರಕ್ರಿಯೆಯಾಗಿದ್ದು ಇದರಲ್ಲಿ ಮಹಿಳೆಯರು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಹಿಂದಿನ ಫಸಲಿನ ಕಡ್ಡಿಗಳನ್ನು ಗುಂಡಿಯಲ್ಲಿ ಸುಟ್ಟು ಅದರ ಬೆಂಕಿಯಲ್ಲಿ ಎಳೆಯ ಜೋಳವನ್ನು ಸುಡಲಾಗುತ್ತದೆ. ಕಟ್ಟುಗಳನ್ನು ತಿರುಗಿಸಲು ಮತ್ತು ಅವುಗಳನ್ನು ಎಲ್ಲ ಕಡೆಯಿಂದಲೂ ಸುಡಲು ಉದ್ದದ ಕೋಲುಗಳನ್ನು ಬಳಸಲಾಗುತ್ತದೆ. ಇದರಲ್ಲಿ ಸಮಯ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. “ಬೇಗ ತೆಗೆದರೆ ಹಸಿಯಾಗಿರುತ್ತದೆ, ತಡವಾಗಿ ತೆಗೆದರೆ ಸುಟ್ಟು ಹೋಗಿರುತ್ತದೆ” ಎಂದು ಛತ್ರಪತಿ ಸಂಭಾಜಿನಗರ (ಈ ಹಿಂದೆ ಔರಂಗಾಬಾದ್) ಜಿಲ್ಲೆಯ 45 ವರ್ಷದರೈತ ಭೀಮಾ ನಾನಾ ದಖಾನೆ ವಿವರಿಸುತ್ತಾರೆ.
ಸುಟ್ಟ ನಂತರ ಮಹಿಳೆಯರು ಕಾಳುಗಳನ್ನು ತಮ್ಮ ಅಂಗೈ ಬಳಸಿ ಉಜ್ಜುತ್ತಾರೆ. ಇದಾದ ನಂತರ ಅಡುಗೆ ಆರಂಭಗೊಳ್ಳುತ್ತದೆ. “ಬೆಳಗ್ಗೆಯಿಂದ ಸಂಜೆಯ ತನಕ ನಾನು ಉಳಿದ ಮಹಿಳೆಯರೊಂದಿಗೆ ಅಡುಗೆಮನೆಯಲ್ಲಿರುತ್ತೇನೆ. ಹೊಲದಿಂದ ನೇರವಾಗಿ ಬರುವ ಧಾನ್ಯವನ್ನು ಬಡಿಸುವುದು ಹೆಮ್ಮೆಯೆನ್ನಿಸುತ್ತದೆ” ಎಂದುಸವಿತಾ ದಖಾನೆ ಹೇಳುತ್ತಾರೆ.














