ಚಂದ್ರಮಾ ತಾನು ಪರಿಮಳಯುಕ್ತ ನಸು ಬಿಳುಪು ಮತ್ತು ಹಳದಿ ಬಣ್ಣದ ಕಥ್ಗೊಲಾಪ್ (ದೇವಕಣಗಿಲೆ) ಹೂವನ್ನು ಒಂದೊಂದಾಗಿ ದಾರಕ್ಕೆ ಪೋಣಿಸಿ ಮಾಲೆಯಾಗಿಸುತ್ತಿದ್ದರು. ಏಪ್ರಿಲ್ ತಿಂಗಳ ಆ ಮಧ್ಯಾಹ್ನದಂದು ಕೈಯಲ್ಲಿದ್ದ ದೇವ ಕಣಗಿಲೆ ಮಾಲೆಯ ಹಳದಿಯನ್ನು ಮತ್ತು ಮಧ್ಯಾಹ್ನದ ಸೂರ್ಯನ ಗಾಢ ಹಳದಿ ಬೆಳಕನ್ನು ಮೀರಿಸುವಂತೆ ಅವರ ಮೂಗಿನಲ್ಲಿದ್ದ ಉಂಗುರದಾಕಾರದ ಚಿನ್ನದ ಮೂರು ಮೂಗುತಿಗಳು ಫಳಫಳೆನೆ ಹೊಳೆಯುತ್ತಿದ್ದವು. ಒಡಿಶಾದ ಕೋರಾಪುಟ್ ಜಿಲ್ಲೆಯ ಪುಟ್ಪಾಂಡಿ ಗ್ರಾಮದ ಹೊರಗಿನ ತೆರೆದ ಸ್ಥಳದಲ್ಲಿ, ಅವರು ಮತ್ತು ಅವರ ಗಡಾಬ ಆದಿವಾಸಿ ಸಮುದಾಯದ ಇತರ ಇಪ್ಪತ್ತು ಮಹಿಳೆಯರು ಸೇರಿ ಹಾರಗಳನ್ನು ಪೋಣಿಸುವುದರಲ್ಲಿ ತೊಡಗಿದ್ದರು. ಅವರೆಲ್ಲರೂ ಎರಡು ಅಥವಾ ಮೂರು ಉಂಗುರದ ರೀತಿಯ ಮೂಗುತಿಯನ್ನು ಧರಿಸಿದ್ದರು.
"ಬಲಭಾಗದ ಈ ಮೂಗುತಿಯನ್ನು ನಾವು ಬೆಸರಿ ಎಂದು ಕರೆಯುತ್ತೇವೆ, ಮಧ್ಯದ್ದು ಡೊಂಡಿ, ಮತ್ತು ಎಡಭಾಗದ್ದು ನತ್ತೋ. ಇವುಗಳನ್ನು ಯಾವ ಕಾಲದಲ್ಲಿ ತೊಡಲು ಆರಂಭಿಸಿದೆ ಎನ್ನುವುದು ನನಗೆ ನೆನಪಿಲ್ಲ. ಬಹುಶಃ, ನಾನು ಇವುಗಳೊಂದಿಗೇ ಹುಟ್ಟಿದ್ದೇನೆ" ಎಂದು 70 ವರ್ಷದ ಚಂದ್ರಮಾ ಗಡಾಬ ನಗುತ್ತಾರೆ. ಅವರು ಧರಿಸಿದ್ದ ಡೊಂಡಿ ಸ್ವಲ್ಪ ಮೇಲಕ್ಕೆ ಏರಿದಂತಿದ್ದು, ಅದರಲ್ಲಿದ್ದ ಗಂಟೆ ಅವರ ಮೇಲ್ದುಟಿಯನ್ನು ಮರೆಮಾಡುವಂತಿದ್ದವು.
"ಹಿಂದೆ ನಮ್ಮ ಗಡಾಬ ಬುಡಕಟ್ಟಿನಲ್ಲಿ, ಹೆಣ್ಣುಮಕ್ಕಳು ತುಂಬಾ ಚಿಕ್ಕವರಾಗಿದ್ದಾಗಲೇ ಮೂರೂ ನತ್ತುಗಳನ್ನು ಹಾಕಿಸುತ್ತಿದ್ದರು. ಆದರೆ ಈಗ ಸ್ವಲ್ಪ ಸಮಯದ ನಂತರ ಮೂಗು ಚುಚ್ಚಲಾಗುತ್ತಾದೆ - ಐದರಿಂದ ಹತ್ತು ವರ್ಷ ವಯಸ್ಸಿನ ನಂತರ. ಮತ್ತು ಕೆಲವೊಮ್ಮೆ ಯುವತಿಯರು ಮೂಗು ನತ್ತು ಧರಿಸಲು ಇಷ್ಟಪಡುವುದಿಲ್ಲ" ಎಂದು ಚಂದ್ರಮಾ ಗಡಾಬ ಹೇಳುತ್ತಾರೆ. ಪ್ರತಿ ವಾಕ್ಯವನ್ನು ಹೇಳುವಾಗ, ಅವರ ಬೆರಳುಗಳು ಚಾಣಾಕ್ಷ ರೀತಿಯಲ್ಲಿ ಆಗ ತಾನೇ ಕಿತ್ತ ಹೂವುಗಳ ಗೊಂಚಲನ್ನು ಹಾರವಾಗಿ ಕಟ್ಟುತ್ತಿದ್ದವು, ಈ ಮಾಲೆಗಳನ್ನು ಸಂಜೆಯ ವೇಳೆಗೆ ಬೇಟೆಯಾಡಿ ವಾಪಸ್ಸಾಗುವ ಪುರುಷರನ್ನು ಸ್ವಾಗತಿಸಲು ಬಳಸಲಾಗುತ್ತದೆ. ಇದು ಚೈತ್ ಪರಬ್ (ಚೈತ್ರ ಪರ್ವ ಎಂದೂ ಕರೆಯಲಾಗುತ್ತದೆ) ಹಬ್ಬದ ಆಚರಣೆಯ ಒಂದು ಭಾಗ.
ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹಲವಾರು ಆದಿವಾಸಿ ಸಮುದಾಯಗಳು ಆಚರಿಸುವ 14 ದಿನಗಳ ಕೃಷಿ ಸಂಭ್ರಮವಾದ ಚೈತ್ ಪರಬ್, ಹಿಂದೂ ಪಂಚಾಂಗದ ಮೊದಲ ತಿಂಗಳಾದ ಚೈತ್ರದ ಆರಂಭವನ್ನು ಸೂಚಿಸುತ್ತದೆ. ಈ ಹಬ್ಬವು, ಏಪ್ರಿಲ್ ಮಧ್ಯಭಾಗದಲ್ಲಿ, ಸಾಂಪ್ರದಾಯಿಕವಾಗಿ ಕೃಷಿ ಕೆಲಸದಿಂದ ವಿಶ್ರಾಂತಿಯ ಸಮಯದಲ್ಲಿ ಬರುತ್ತದೆ. ಈ ವೇಳೆಯಲ್ಲಿ ಇಲ್ಲಿನ ವಾತಾವರಣವು ಬೇಸಗೆಯ ಹಾಡುಗಳು ಮತ್ತು ಆ ಕಾಲದ ಹಣ್ಣುಗಳು ಮತ್ತು ಹೂವುಗಳ ಸಮೃದ್ಧಿಯಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಗಡಾಬ ಸಮುದಾಯದ ಯುವತಿಯರು ಮತ್ತು ಹಿರಿಯ ಮಹಿಳೆಯರು ಹಾಡುತ್ತಾರೆ, ಕುಣಿಯುತ್ತಾರೆ, ಮದ್ಯಪಾನ ಮಾಡುತ್ತಾರೆ, ಗ್ರಾಮದ ದೇವತೆಗಳಿಗೆ ಮಾವಿನಕಾಯಿಗಳನ್ನು ಅರ್ಪಿಸುತ್ತಾರೆ ಮತ್ತು ಬೇಟೆಯ ಸಾಹಸ ಮಾಡಿ ವಾಪಸ್ಸಾಗುವ ಪುರುಷರನ್ನು ಸ್ವಾಗತಿಸಲು ಮಾಲೆಗಳನ್ನು ಕಟ್ಟುತ್ತಾರೆ.








