ದುಲೇಶ್ವರಿ ಸೊರೇನ್ ಅವರ ಪಡಿತರ ಚೀಟಿಯಲ್ಲಿ ಅವರ ಹುಟ್ಟಿದ ದಿನವನ್ನು ಜನವರಿ 1, 1963 ಎಂದು ನಮೂದಿಸಲಾಗಿದೆ. ಆದರೆ, ಅಶಕ್ತರೂ, ವೃದ್ಧರೂ ಆಗಿರುವ ಈ ಸಂತಾಲ್ ಮಹಿಳೆ ಅದಕ್ಕಿಂತಲೂ ಕೆಲವು ದಶಕಗಳಷ್ಟು ಹಿರಿಯರು. "ಅವರಿಗೆ ಸುಮಾರು 100 ವರ್ಷ ವಯಸ್ಸಾಗಿರಬಹುದು" ಎನ್ನುತ್ತಾರೆ ಅವರ ಮರಿಮಗಳು, 16 ವರ್ಷದ ಪ್ರಮೀಳಾ ಕಿಸ್ಕು.
ನಾವು ಪಶ್ಚಿಮ ಬಂಗಾಳದ ಶಾಂತಿನಿಕೇತನದ ಒಂದು ಬಡಾವಣೆಯಾದ ಬಗಾನ್ಪಾರಾದಲ್ಲಿರುವ ಆ ತೊಂಬತ್ತು ವರ್ಷದ ಹಿರಿಯ ಮಹಿಳೆಯ ಮನೆಯ ಹೊರಗೆ ಕುಳಿತಿದ್ದೆವು. ಇಲ್ಲಿನ ಅಂಕುಡೊಂಕಾದ ಗಲ್ಲಿಗಳಲ್ಲಿ, ಬೀದಿ ನಾಯಿಗಳು ಮತ್ತು ಸಾಕಿದ ಕೋಳಿಗಳು ಜಾಗಕ್ಕಾಗಿ ಪರಸ್ಪರ ಪೈಪೋಟಿ ನಡೆಸುತ್ತಿದ್ದವು - ನಾಯಿಗಳು ಸೋಮಾರಿಯಾಗಿ ಬಿದ್ದಿದ್ದರೆ, ಕೋಳಿಗಳು ನೆಲವನ್ನು ಕುಕ್ಕುವಲ್ಲಿ ನಿರತವಾಗಿದ್ದವು.
"ಶಾಂತಿನಿಕೇತನ್...ಅಮರ್ ನಾತಿನಿರ್ ನಾಮ್ [ಶಾಂತಿ ನಿಕೇತನ್ ಅದು ನನ್ನ ಮೊಮ್ಮಗಳ ಹೆಸರು]" ಎನ್ನುತ್ತಿದ್ದಂತೆಯೇ ದುಲೇಶ್ವರಿಯವರ ಧ್ವನಿ ಕ್ಷೀಣವಾಯಿತು. ಕತ್ತರಿಸಿದ ತಮ್ಮ ಬಿಳಿ ಕೂದಲಿನ ಮೇಲೆ ಬೆರಳುಗಳನ್ನು ಆಡಿಸುತ್ತಾ ಒಮ್ಮೆ ಮುಗುಳ್ನಕ್ಕರು.
"ಉಕುನ್ ಹೊಯೆಚಿಲೋ [ತಲೆಯಲ್ಲಿ ಹೇನಾಗಿತ್ತು]. ಈಗೆಲ್ಲ ಅದನ್ನ ಹೆಕ್ಕಿ ತೆಗೆಯುವಷ್ಟು ಸಮಯ ಯಾರಿಗೆದೆ? ಅದಕ್ಕೆ ಇವಳು ನನ್ನ ಕೂದಲನ್ನು ಕತ್ತರಿಸಿದಳು" ಎಂದು ಮುಗುಳ್ನಗುತ್ತಲೇ ದುಲೇಶ್ವರಿ ತನ್ನ ಪಕ್ಕದಲ್ಲೇ ಕುಳಿತಿರುವ ಪ್ರಮೀಳಾ ಕಡೆಗೆ ಬೆರಳು ತೋರಿಸಿದರು. "ಇವಳು (ಪ್ರಮೀಳಾ) ಪ್ರತಿದಿನ ಒಂದು ಲೋಟ ಚಹಾ ಮಾಡಿಕೊಡುತ್ತಾಳೆ ಮತ್ತು ಉಗುರುಗಳನ್ನು ಕತ್ತರಿಸುತ್ತಾಳೆ" ಎಂದು ದುಲೇಶ್ವರಿ ಪ್ರೀತಿ ಬೆರೆತ ದನಿಯಲ್ಲಿ ಹೇಳಿದರು.








