ಸುಡಲೈ ಕಾಳಿ ಅಥವಾ ಸ್ಮಶಾನ ದೇವತೆಗೆ ಬಲಿ ನೀಡಿದ ಹುಂಜವನ್ನು ಕಚ್ಚಿ ಎಸೆದ ನಂತರ ಅವರು ಮೇಕೆಯ ಶ್ವಾಸಕೋಶವನ್ನು ಹಲ್ಲಿನಲ್ಲಿ ಕಚ್ಚಿಕೊಂಡು ಲಯಬದ್ಧವಾಗಿ ನಡೆಯತೊಡಗಿದರು. ಜೊತೆ ಜೊತೆಗೆ ತನ್ನ ಎಡಗೈಯಲ್ಲಿದ್ದ ಕುಡುಗೋಲನ್ನು ಗಾಳಿಯಲ್ಲಿ ಸುತ್ತುತ್ತಿದ್ದರು. ಕಪ್ಪು ಸೀರೆಯುಟ್ಟಿದ್ದ ಐಶ್ವರ್ಯ ಪರೈ ಮತ್ತು ಪಂಬೈ ಎನ್ನುವ ವಾದ್ಯಗಳ ಸದ್ದಿಗೆ ಗದ್ದಲದಿಂದ ಕೂಡಿದ ಬೀದಿಯಲ್ಲಿ ನರ್ತಿಸುತ್ತಿದ್ದರು. ಇದೆಲ್ಲ ನಡೆಯುತ್ತಿರುವುದು ದೇವಿ ಪುಟ್ರು ಪೂಂಗಾವನತ್ತು ಅಮ್ಮನ್ ದೇವಸ್ಥಾನವಿರುವ ತಿರುವಲಂ ಪಟ್ಟಣದ ಪೂನೈ ನದಿಗೆ ಹೋಗುವ ದಾರಿಯಲ್ಲಿ. ಬಹಳ ದಣಿದಿದ್ದ ಈ ತಿರುನಂಗೈ (ಟ್ರಾನ್ಸ್ ಮಹಿಳೆರಿಗೆ ಬಳಸಲಾಗುವ ತಮಿಳು ಪದ) ಮೆರವಣಿಗೆಯನ್ನು ಮುನ್ನಡೆಸುತ್ತಿದ್ದರು, ಮೆರವಣಿಗೆ ಒಣಗಿದ್ದ ನದಿ ಪಾತ್ರವನ್ನು ತಲುಪುತ್ತಿದ್ದಂತೆ ಐಶ್ವರ್ಯ ಅಲ್ಲಿಯೇ ಕುಸಿದು ಬಿದ್ದರು. 37 ವರ್ಷದ ಐಶ್ವರ್ಯ ನಾಟಕ ಕಂಪನಿಯೊಂದನ್ನು ನಡೆಸುತ್ತಿದ್ದಾರೆಯಾದರೂ ಇದು ಅವರು ನಾಟಕ ʼಪ್ರದರ್ಶನದʼ ಭಾಗವಾಗಿರಲಿಲ್ಲ. ಅವರ ರಂಗ ನಾಟಕದ ಪ್ರದರ್ಶನವನ್ನು ದಿನದ ಕೊನಗೆ ನಿಗದಿಪಡಿಸಲಾಗಿದ್ದು, ಅದಕ್ಕಿನ್ನೂ ಸಮಯವಿದೆ.
ಅವರು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಈ ಗ್ರಾಮದಲ್ಲಿ ದಲಿತ ಸಮುದಾಯಗಳು ಆಚರಿಸುವ ವಾರ್ಷಿಕ ಮಯಾನ ಕೊಳ್ಳೈ (ಸ್ಮಶಾನ ಕೊಳ್ಳೆ) ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ಈ ಹಬ್ಬವನ್ನು ತಮಿಳು ಪಂಚಾಂಗದ ಮಾಸಿ (ಮಾರ್ಚ್) ತಿಂಗಳ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಐಶ್ವರ್ಯ ಚಕ್ಕಿಲಿಯಾರ್ ಸಮುದಾಯಕ್ಕೆ ಸೇರಿದವರು. ಈ ಜಾತಿಯನ್ನು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ. ಅವರು ಕಳೆದ ಎರಡು ದಶಕಗಳಿಂದ ದೇವಸ್ಥಾನದ ಜಾತ್ರೆಯ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
“ಅಷ್ಟು ಉನ್ಮಾದದಲ್ಲಿ ನರ್ತಿಸಿದ್ದು ನಾನಲ್ಲ. ನನ್ನ ಮೇಲೆ ಅಮ್ಮ ಬಂದಿದ್ದಳು. ನನಗೆ ಆ ಸಮಯದಲ್ಲಿ ಏನಾಯಿತು ಎನ್ನುವುದು ನೆನಪಿರುವುದಿಲ್ಲ” ಎನ್ನುತ್ತಾರೆ ಐಶ್ವರ್ಯ. ಅಮ್ಮನ್ ಎನ್ನುವುದು ಅವರು ಆರಾಧಿಸುವ ಜಾನಪದ ದೇವತೆಯಾಗಿದ್ದು, ಇದನ್ನು ಕಾಳಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಜಾತ್ರೆಯ ಆಚರಣೆಗಳೆಲ್ಲ ಮುಗಿದ ನಂತರ ರಾತ್ರಿ 10ರ ಸುಮಾರಿಗೆ ಅಂತಿಮ ಪ್ರದರ್ಶನ ಆರಂಭಗೊಳ್ಳುತ್ತದೆ.
ಅಂದಿನ ರಾತ್ರಿಯ ಅವರ ಲವಲವಿಕೆ ಬೇರೆಯದೇ ರೀತಿಯಲ್ಲಿತ್ತು. 10*12 ಅಡಿ ಅಳತೆಯ ಎತ್ತರದ ಸ್ಟೇಜ್ ಮೇಲೆ ನಿಂತಿದ್ದ ಅವರು ಬ್ಯಾನರನ್ನು ಎಲ್ಲಿ ಇರಿಸಬೇಕು, 500 ವ್ಯಾಟ್ ಶಕ್ತಿಯ ದೀಪಗಳನ್ನು ಇರಿಸಲು ಸರಿಯಾದ ಜಾಗ ಹುಡುಕುತ್ತಿದ್ದ ಅವರಲ್ಲಿ ಶಕ್ತಿ ಹೊಸದಾಗಿ ತುಂಬಿದಂತಿತ್ತು. “ಅವೆರಡನ್ನು ವೇದಿಕೆಗೆ ಎದುರಾಗಿ ಕಟ್ಟಿ, ಸ್ವಲ್ಪ ಓರೆಯಾಗಿ ಕಟ್ಟಿ” ಎಂದು ಅಲ್ಲಿದ್ದವರಿಗೆ ಅವರು ನಿರ್ದೇಶನ ನೀಡುತ್ತಿದ್ದರು. ಅವರು ರಂಗ ವ್ಯವಸ್ಥಾಪಕಿ, ವಸ್ತ್ರ ವಿನ್ಯಾಸಕಿ, ಬೆಳಕಿನ ವಿನ್ಯಾಸಕಿ ಮತ್ತು ನಾಟಕ ತಂಡದ ಮುಖ್ಯಸ್ಥೆ ಎಲ್ಲವೂ ಹೌದು. ಒಟ್ಟಾರೆಯಾಗಿ ಅಶೋಕ ನಾಟಕ ಮಂಡಳಿ ಎನ್ನುವ ಸಂಸ್ಥೆಯ ಒನ್ ವುಮನ್ ಆರ್ಮಿ ಎನ್ನಬಹುದು ಐಶ್ವರ್ಯ ಅವರನ್ನು. ತಂಡದ ಹೆಸರನ್ನು ವೇದಿಕೆಯ ಮೇಲೆ ಕಟ್ಟಲಾಗಿರುವ ಬಟ್ಟೆಯ ಬ್ಯಾನರ್ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು.



