ತುಕಾರಾಂ ಮಸಾಲ್ ಎರಡು ದೊಡ್ಡ ಪ್ಲಾಸ್ಟಿಕ್ ಕ್ಯಾನುಗಳನ್ನು ತನ್ನ ಬೈಕಿಗೆ ಕಟ್ಟಿಕೊಂಡು ಟ್ರ್ಯಾಕ್ಟರಿಗೆ ಹಾಕಲು ಬೇಕಾಗಿ ಡೀಸೆಲ್ ತರಲು ಹೊರಟಿದ್ದರು? ಆದರೆ ಅವರ್ಯಾಕೆ ಟ್ರ್ಯಾಕ್ಟರನ್ನೇ ಪೇಟೆಗೆ ತೆಗೆದುಕೊಂಡು ಹೋಗುತ್ತಿಲ್ಲ?
“ಅದರಿಂದ ಡೀಸೆಲ್ ಮತ್ತೆ ಹಣ ಎರಡೂ ವೇಸ್ಟ್ ಆಗುತ್ತೆ” ಎನ್ನುತ್ತಾರೆ ಮಾಸಳ್. ಟ್ರ್ಯಾಕ್ಟರ್ ಒಂದು ಲೀಟರ್ ಡೀಸೆಲ್ಲಿಗೆ ಹೆಚ್ಚೆಂದರೆ ಐದು ಕಿಲೋಮೀಟರ್ ಮೈಲೇಜ್ ಕೊಡಬಲ್ಲದು. “ಈಗ ಒಂದು ಲೀಟರ್ ಡೀಸೆಲ್ ಬೆಲೆ ಹೆಚ್ಚೂ ಕಡಿಮೆ 100 ರೂಪಾಯಿ ಆಗಿದೆ.” ಜೊತೆಗೆ ಅವರು ಡೀಸೆಲ್ ಹುಡುಕಿಕೊಂಡು ಹಲವು ಪೆಟ್ರೋಲ್ ಬಂಕ್ ಅಲೆಯಬೇಕು.
ಈಗ ಡೀಸೆಲ್ ಪಡಿತರ ಪದ್ಧತಿ ಆರಂಭವಾಗಿದೆ.
ಮಹಾರಾಷ್ಟ್ರದ ಬರಪೀಡಿತ ಧಾರಾಶಿವ ಜಿಲ್ಲೆಯ ಭೂಮ್ ಪಟ್ಟಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ವಾಕ್ವಾಡ್ ಗ್ರಾಮದ 53 ವರ್ಷದ ರೈತ ಮಾಸಳ್ ಹೇಳುತ್ತಾರೆ, “ಬಂಕಿನಲ್ಲಿ ನಮಗೆ ಬೇಕಿರುವಷ್ಟು ಡೀಸೆಲ್ ಕೊಡುವುದಿಲ್ಲ.” ಈ ಭೂಮ್ ಪ್ರದೇಶದಲ್ಲಿ ಬಹಳ ಕಡಿಮೆ ಪೆಟ್ರೋಲ್ ಬಂಕುಗಳಿವೆ. ಕನಿಷ್ಠ 20-25 ಲೀಟರ್ ಡೀಸೆಲ್ ಕೊಳ್ಳಲು ಐದು ಬಂಕ್ಗಳನ್ನು ಅಲೆಯುತ್ತೇನೆ” ಎಂದು ಅವರು ಹೇಳುತ್ತಾರೆ.
ಕೆಲವು ದಿನ ಡೀಸೆಲ್ ಹುಡುಕಿಕೊಂಡು ಮಸಾಲ್ ಅವರು 70-80 ಕಿಲೋಮೀಟರ್ ಸುತ್ತಾಡುತ್ತಾರೆ. “ಪ್ರತಿ ಎರಡು ಮೂರು ದಿನಕ್ಕೆ ಒಂದಷ್ಟಯ ಡೀಸೆಲ್ ಸಿಕ್ಕರೆ ಅದೇ ಅದೃಷ್ಟ.” ಅದೂ ಅಲ್ಲದೆ ಕೆಲವೊಮ್ಮೆ ಪೆಟ್ರೋಲ್ ಬಂಕುಗಳಲ್ಲಿ ಪ್ಲಾಸ್ಟಿಕ್ ಕ್ಯಾನಿಗೆ ಡೀಸೆಲ್ ಹಾಕುವುದಿಲ್ಲ, ಟ್ರ್ಯಾಕ್ಟರನ್ನೇ ತನ್ನಿ ಎನ್ನುತ್ತಾರೆ.











