50 ವರ್ಷದ ಸುಭಾಷ್ ಬಿಕ್ಕಡ್ ಸಂಭಾಜಿನಗರ ಮೂಲದ ಸಾರಿಗೆ ಸಂಸ್ಥೆಯೊಂದರಲ್ಲಿ ಲಾರಿ ಡ್ರೈವರ್ ಆಗಿ ದುಡಿಯುತ್ತಿದ್ದರು. ಎರಡು ದಶಕಗಳ ಕಾಲ ಆ ಸಂಸ್ಥೆಗಾಗಿ ಜೀವ ತೇಯ್ದಿದ್ದ ಅವರು 2019ರಲ್ಲಿ ತಮ್ಮ ಬದುಕನ್ನು ಏರುದಾರಿಗೆ ಮುನ್ನಡೆಸಲು ನಿರ್ಧರಿಸಿದರು.
“ಇಬ್ಬರು ಸ್ಬೇಹಿತರು ಹಾಗೂ ನಾನು ಸೇರಿ ನಮ್ಮದೇ ಆದ ಟ್ರಾನ್ಸ್ಪೋರ್ಟ್ ಕಂಪನಿಯೊಂದನ್ನು ಸ್ಥಾಪಿಸಿದೆವು. ಶುರುವಿನಲ್ಲಿ ಮೂರು ಲಾರಿಗಳು ಮತ್ತು ಕಂಟೇನರ್ಗಳನ್ನು ಖರೀದಿಸಿದ್ದೆವು. ನಾವೆಲ್ಲರೂ ಒಂದೇ ಊರಿನವರಾಗಿದ್ದೆವು ಮತ್ತು ಲಾರಿ ಓಡಿಸುವುದರಲ್ಲಿ ನಮಗೆ ಅಪಾರ ಅನುಭವವಿತ್ತು. ಪುಣೆ ಮೂಲದ ಗೆಳೆಯರೊಬ್ಬರು ಸಾಲಕ್ಕೆ ಜಾಮೀನು ನೀಡಿದರು.”
ಈ ರೀತಿಯಾಗಿ ಬಿಕ್ಕಡ್ ಮತ್ತು ಗೆಳೆಯರ ಸಾರಿಗೆ ವ್ಯವಹಾರದ ಗಾಡಿ ರಸ್ತೆಗಿಳಿಯಿತು. ಇಲ್ಲಿ ಇವರಷ್ಟೇ ಅಲ್ಲ, ಸರ್ಣಿ ಸಾಂಗ್ವಿ 80 ಯುವಕರು ಇದೇ ಸಾರಿಗೆ ವ್ಯವಹಾರದಲ್ಲಿದ್ದಾರೆ. ಅಂದರೆ 1,460 ಜನಸಂಖ್ಯೆಯ ಈ ಊರಿನ ನಾಲ್ಕು ಮನೆಗಳಲ್ಲಿ ಒಂದು ಸಾರಿಗೆ ವ್ಯವಹಾರದಲ್ಲಿದೆ. ಬರಪೀಡಿತ ಜಿಲ್ಲೆಯಾದ ಬೀಡ್ನ ಕೈಜ್ ತಹಸಿಲ್ನಲ್ಲಿರುವ ಸರ್ಣಿ ಸಾಂಗ್ವಿ ಅವಳಿ ಊರುಗಳು.
2025ರ ವೇಳೆಗೆ ಸರ್ಣಿ ಸಾಂಗ್ವಿ ಲಾರಿಗಳು ಮತ್ತು ಕಂಟೇನರ್ ಲಾರಿಗಳ (ಶಿಪ್ಪಿಂಗ್ ಅಥವಾ ಕಾರ್ಗೋ ಕಂಟೇನರ್ಸ್ ಎಂದೂ ಹೇಳಲಾಗುತ್ತದೆ) ದೊಡ್ಡ ಕೇಂದ್ರವಾಗಿ ಮಾರ್ಪಟ್ಟಿತು. ಈ ಊರಿನ 80 ಗಂಡಸರು ಒಟ್ಟು 40 ಲಾರಿ ಮತ್ತು ಲೋಡಿಂಗ್ ಕಂಟೇನರುಗಳನ್ನು ಇಟ್ಟುಕೊಂಡಿದ್ದಾರೆ. ದೇಶದ ಒಂದಷ್ಟು ದೊಡ್ಡ ದೊಡ್ಡ ಟ್ರಾನ್ಸ್ಪೋರ್ಟ್ ಕಂಪನಿಗಳು ಇವರಿಗೆ ಹೊರಗುತ್ತಿಗೆ ಕೊಡಲು ಶುರುಮಾಡಿದವರು. ಅಂದಿನಿಂದ ಇಲ್ಲಿನ ಸಾರಿಗೆ ಉದ್ಯಮದ ಬೆಳವಣಿಗೆಗೆ ಮತ್ತಷ್ಟು ವೇಗ ದೊರಕಿತು. ಊರಿನ ಒಬ್ಬರಿಗೊಬ್ಬರು ಸಾಲದ ಜಾಮೀನು ನೀಡುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಲು ಪರಸ್ಪರ ಸಹಕಾರ ನೀಡಿದರು. ಈ ಕುರಿತು ಪಾರಿಯೊಂದಿಗೆ ಮಾತನಾಡಿದ ಊರಿನ ಸರಪಂಚರಾದ ಸುನಿಲ್ ಕೇದಾರ್, "ದೀಪಾವಳಿ ದಿನ ಊರಿನ ಅಷ್ಟೂ ಲಾರಿಗಳನ್ನು ಹೊಲದಲ್ಲಿ ನಿಲ್ಲಿಸಿ ಪೂಜೆ ಮಾಡುವ ಮೂಲಕ ಹಬ್ಬವನ್ನು ಸಂಭ್ರಮಿಸಿದೆವು" ಎಂದರು.
ಕಂಟೇನರ್ ಲಾರಿಗಳು ಊರಿನ ಪಾಲಿಗೆ ಹೊಸ ದೇವರಾಗಿ ಹೊರಹೊಮ್ಮಿದ್ದವು.
ಆದರೆ ಇಂದು, ಆ ಲಾರಿಗಳಲ್ಲಿ ಬಹಳಷ್ಟು ಒಂದೋ ತಮ್ಮ ಲೋಡ್ ಇಳಿಸಲು ಹೋಗಿದ್ದ ಜಾಗದಲ್ಲಿ ನಿಂತಿವೆ, ಅಥವಾ ದಾರಿ ಮದ್ಯೆ ನಿಂತಿವೆ. ಊರಿನಲ್ಲಿ ನಮಗೆ ಕಾಣಲು ಸಿಕ್ಕಿದ್ದು ಕೆಲವೇ ಕೆಲವು ಲಾರಿಗಳು. ಅಮೇರಿಕಾ-ಇಸ್ರೇಲ್ ಸೇರಿ ಇರಾನ್ ಮೇಲೆ ಹೂಡಿದ್ದ ಯುದ್ಧವು ಸರ್ಣಿ ಸಾಂಗ್ವಿ ಗ್ರಾಮದ ಸಮೃದ್ಧಿಯ ಚಕ್ರವನ್ನು ಪಂಚರ್ ಮಾಡುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದಕ್ಕೂ ಮೊದಲೇ ಹೆಚ್ಚುತ್ತಲೇ ಇರುವ ಅನೇಕ ರಸ್ತೆ ತೆರಿಗೆಗಳು ಉದ್ಯಮಕ್ಕೆ ತಕ್ಕಮಟ್ಟಿನ ಹೊಡೆತವನ್ನು ಕೊಟ್ಟಿದ್ದವು.







