ಹತ್ತಿರದ ಸರ್ಕಾರಿ ಇಟ್ಟಿಗೆ ಗೂಡುಗಳನ್ನು ಇನ್ನೂ ತೆರೆದಿಲ್ಲ, ಹಾಗಾಗಿ ನಾವು ಪ್ರತೀ ಕೆಜಿಗೆ 20-25 ರುಪಾಯಿ ಕೊಟ್ಟು ಖಾಸಗಿ ಇಟ್ಟಿಗೆ ಗೂಡುಗಳನ್ನು ಬಳಸುತ್ತೇವೆ. ಸರ್ಕಾರಿ ಗೂಡುಗಳಲ್ಲಿ 17-18 ರುಪಾಯಿಗಳಾಗುತ್ತದೆ. ನಾವೆಲ್ಲಾ ಒಟ್ಟಾಗಿ ಅಧಿಕಾರಿಗಳ ಜೊತೆಗೆ ಮಾತನಾಡಿದರೆ ಈ ವಿಷಯದಲ್ಲಿ ಏನಾದರೊಂದು ಬದಲಾವಣೆಯಾಗಬಹುದು, ಆದರೆ ಇಲ್ಲಿನ ಜನರು ಸಹಕರಿಸುತ್ತಿಲ್ಲ. ತಂಜಾವೂರಿನಲ್ಲಿ ಪರಿಸ್ಥಿತಿ ಇದಕ್ಕಿಂತ ಚೆನ್ನಾಗಿದೆ, ಅಲ್ಲಿ ಒಗ್ಗಟ್ಟೂ ಇದೆ, ಸರ್ಕಾರದ ಬೆಂಬಲವೂ ಇದೆ.
ನಾವು ಬಳಸುವ ಬಿಳಿ ಬೆಂಟೋನೈಟ್, ಬೆಂಕಿ ನಿರೋಧಕ ಮಣ್ಣು ಬೇರೆ ರಾಜ್ಯಗಳಿಂದ ಬರುತ್ತವೆ. ಒಂದು ಟನ್ ಒಳ್ಳೆಯ ಮಣ್ಣಿನ ಬೆಲೆ 15,000 ರೂಪಾಯಿಗಳು, ಆದರೆ ನಮ್ಮ ಗೊಂಬೆಗಳು ತಲಾ 30 ರೂಪಾಯಿಗಳಿಗೆ ಮಾರಾಟವಾಗುತ್ತವೆ. ನಾವು ಈ ಖರ್ಚನ್ನು ಹೇಗೆ ನಿಭಾಯಿಸುವುದು? ಬಣ್ಣಗಳ ಬೆಲೆ ಕೂಡ 100 ಗ್ರಾಂಗೆ 200–300 ರುಪಾಯಿ ಇದೆ.
ಐದು ವರ್ಷಗಳ ಹಿಂದೆ ನಾವೊಂದು ಸಂಘವನ್ನು ಕಟ್ಟಿದೆವು. ಆದಕ್ಕೆ ಸರಿಯಾದ ಬೆಂಬಲ ಇನ್ನೂ ಸಿಕ್ಕಿಲ್ಲ. ಸರ್ಕಾರ ಕಚ್ಚಾ ವಸ್ತುಗಳಿಗೆ ಸಬ್ಸಿಡಿ ಕೊಟ್ಟರೆ ಅಥವಾ ಕಡಿಮೆ ಬೆಲೆಗೆ ಯಂತ್ರೋಪಕರಣಗಳನ್ನು ನೀಡಿದರೆ, ಈ ಕರಕುಶಲತೆಯನ್ನು ಉಳಿಯಬಹುದು. ಸದ್ಯ ದೊಡ್ಡ ದೊಡ್ಡ ಕೈಗಾರಿಕೆಗಳು ಮಾತ್ರ ಲಾಭ ಗಳಿಸುತ್ತವೆ; ಸಣ್ಣ ಕಾರ್ಮಿಕರು ಈ ಚಕ್ರದಲ್ಲೇ ಸಿಲುಕಿದ್ದಾರೆ.
ಆದರೆ ಇಷ್ಟೆಲ್ಲಾ ವರ್ಷಗಳಾದರೂ, ಜನರು ಇನ್ನೂ, “ನೀನು ಸಾಧಿಸಿದ್ದೇನು?” ಎಂದು ಕೇಳುತ್ತಾರೆ. ಅದನ್ನು ಕೇಳಿ ತುಂಬಾ ನೋವಾಗುತ್ತದೆ.
ನಾವು ಇದನ್ನೆಲ್ಲಾ ಆರಂಭಿಸುವಾಗ, ಆಂಧ್ರ ಮತ್ತು ಗುಜರಾತ್ನಿಂದ ವ್ಯಾಪಾರಿಗಳು ನಮ್ಮ ಗೊಂಬೆಗಳನ್ನು ಖರೀದಿಸಲು ಬರುತ್ತಿದ್ದರು. ಈಗ, ಆಯುಧ ಪೂಜೆ ಮತ್ತು ನವರಾತ್ರಿ ಕೋಲು ಹಬ್ಬಗಳ ಸಮಯದಲ್ಲಿ ಮಾತ್ರ ಮಾರಾಟವಾಗುತ್ತವೆ. ವರ್ಷದ ಉಳಿದ ಸಮಯ ಏನೂ ವ್ಯಾಪಾರ ಇರುವುದಿಲ್ಲ. ಅಗಲ್ ವಿಲಕ್ಕುಗಳು, ಅಂದರೆ ಮಣ್ಣಿನ ಹಣತೆಗಳು ಮಾತ್ರ ಯಾವಾಗಲೂ ಮಾರಾಟವಾಗುತ್ತವೆ. ನಾವು ಒಂದು ಹಣತೆಯನ್ನು ಒಂದು ರುಪಾಯಿಗೆ ಮಾರುತ್ತೇವೆ. ಹೆಚ್ಚಾಗಿ ಅವುಗಳನ್ನು ದೇವಾಲಯಗಳು ಮತ್ತು ಹಬ್ಬಗಳಿಗೆ ಉತ್ತರ ಭಾರತಕ್ಕೆ ರಫ್ತು ಮಾಡಲಾಗುತ್ತದೆ.
ನಾವು ತಯಾರಿಸಿದ ವಸ್ತುಗಳನ್ನು ಸಂಗ್ರಹಿಸಿಡಲು ನಮ್ಮಲ್ಲಿ ವ್ಯವಸ್ಥೆಯಿಲ್ಲದ ಕಾರಣ ಗೋದಾಮುಗಳಿಗೆ ತೆಗೆದುಕೊಂಡು ಹೋಗುತ್ತೇವೆ. ಅದರಲ್ಲೂ ದಲ್ಲಾಳಿಗಳು ಮಾತ್ರ ಲಾಭ ಪಡೆಯುತ್ತಾರೆ, ಆದರೆ ನಾವು ಕಷ್ಟಪಟ್ಟು ಹೇಗೋ ನಿಭಾಯಿಸುತ್ತೇವೆ. ನಮ್ಮಲ್ಲಿ ಬಂಡವಾಳವಿದ್ದರೆ, ಹಬ್ಬದ ಸೀಸನ್ ಬರುವ ವರೆಗೆ ದಾಸ್ತಾನು ಇಟ್ಟುಕೊಂಡು ನೇರವಾಗಿ ಮಾರಾಟ ಮಾಡಬಹುದಿತ್ತು.
ಇಲ್ಲಿ ನೂರು ಮೀಟರ್ ಒಳಗೆ ಕನಿಷ್ಠ 10 ವರ್ಕ್ಶಾಪ್ಗಳಿವೆ. ಹೆಚ್ಚಿನವರು ಗೊಂಬೆಗಳನ್ನು ತಯಾರಿಸಿದರೆ, ಉಳಿದವರು ಹಣತೆಗಳನ್ನು ತಯಾರಿಸುತ್ತಾರೆ. ಬಹುತೇಕ ಕುಶಲಕರ್ಮಿಗಳು ಅಗಲ್ ಕೆಲಸವನ್ನು ಮಾಡಲು ಆರಂಭಿಸಿದ್ದಾರೆ- ಇದು ಗೊಂಬೆ ತಯಾರಿಕೆಗಿಂತ ಭಿನ್ನವಾಗಿ ಸ್ಥಿರ ಮತ್ತು ಸುರಕ್ಷಿತ ಕೆಲಸವಾಗಿದೆ. ಆದರೆ ಗೊಂಬೆಗಳ ತಯಾರಿಕೆಯಲ್ಲಿ ಆಗುವ ಒಂದೇ ಒಂದು ತಪ್ಪು ಕೂಡ ಇಡೀ ಉತ್ಪನ್ನವನ್ನೇ ಸಂಪೂರ್ಣವಾಗಿ ನಷ್ಟಮಾಡುತ್ತದೆ. ನಾವು ಕೂಡ ಮುಂದಿನ ವರ್ಷ ಅಗಲ್ ವಿಲಕ್ಕು ತಯಾರಿಕೆ ಆರಂಭಿಸಲು ಯೋಚಿಸುತ್ತಿದ್ದೇವೆ.
ಸುಮತಿಯ ಕಥೆ
ನನ್ನ ಹೆಸರು ಸುಮತಿ. ಕಳೆದ 15 ವರ್ಷಗಳಿಂದ ಈ ಸಣ್ಣ ಸಿರಾಮಿಕ್ ಗೊಂಬೆ ಕಂಪನಿಯನ್ನು ನಡೆಸಿಕೊಂಡು ಬರುತ್ತಿದ್ದೇನೆ. ಕೆಲವೊಮ್ಮೆ ಗೊಂಬೆಗಳು ಮಾರಾಟವಾಗುತ್ತವೆ, ಕೆಲವೊಮ್ಮೆ ಇಲ್ಲ. ಮಳೆಗಾಲದಲ್ಲಿ ವ್ಯಾಪಾರವೇ ಆಗುವುದಿಲ್ಲ, ಕೆಲಸ ನಿಂತುಹೋಗುತ್ತದೆ. ಈ ಉದ್ಯೋಗದಲ್ಲಿ ಮುಂದುವರಿಯಬೇಕೇ, ಬೇಡವೇ ಎಂದು ಆಗಾಗ ನಾನು ಯೋಚಿಸುತ್ತೇನೆ.\
ನನ್ನ ಮದುವೆಯಾಗಿದ್ದು ಮುಂಬೈನಲ್ಲಿ, ಸ್ವಲ್ಪ ಕಾಲ ಸೂರತ್ನಲ್ಲಿ ಇದ್ದೆವು. ನನ್ನ ಗಂಡ ಒಬ್ಬ ದೊಡ್ಡ ಕುಡುಕ. ನಾನು ಅವನನ್ನು ಬಿಟ್ಟು, 2005 ರಲ್ಲಿ ನನ್ನ ಮನೆಗೆ ಬಂದೆ. ಸಿರಾಮಿಕ್ಗಳನ್ನು ಮಾಡುವುದನ್ನು ಕಲಿತೆ, ತುಂಬಾ ಬೇಗ ಒಂದು ಸಣ್ಣ ವರ್ಕ್ಶಾಪ್ ಶುರುಮಾಡಿದೆ. ಈ ಕೆಲಸ ಮಾಡಿಯೇ ನಾನು ನನ್ನ ಮಗನನ್ನು ಸಾಕಿದೆ - ಅವನೀಗ ಕಾಲೇಜು ಓದುತ್ತಿದ್ದಾನೆ.