“ಕರೆಂಟ್ ಮಿಷಿನ್ನುಗಳು ಈ ಸಾಂಪ್ರದಾಯಿಕ ಪದ್ಧತಿಗಳನ್ನು ಕೊಲ್ಲುತ್ತಿವೆ” ಎಂದರು ಪಾತ್ರೆಯೊಂದರಲ್ಲಿದ್ದ ಮೊಸರನ್ನು ಕಡೆಯುತ್ತಿದ್ದ ರಾಯಲಿ ಬಾಯಿ. ಮೊಸರು ಕಡೆಯುವ ಸದ್ದಿನ ನಡುವೆ ಅವರ ದನಿ ಮೆಲ್ಲನೆ ಕೇಳುತ್ತಿತ್ತು. ಈ ಊರಿನಲ್ಲಿ ಮೊಸರು ಕಡೆಯುವ ಕಡಗೋಲನ್ನು ನೇತಾರ ಎಂದು ಕರೆಯುತ್ತಾರೆ. ಕಡಗೋಲನ್ನು ಕಡೆಯಲು ದಪ್ಪನೆಯ ಹತ್ತಿಯ ಹಗ್ಗವನ್ನು ಬಳಸಲಾಗುತ್ತದೆ. ಅವರ ಮನೆಯ ಸುತ್ತಮುತ್ತಲಿನಿಂದ ಹಕ್ಕಿಗಳ ಚಿಲಿಪಿಲಿ ಕೇಳುತ್ತಿತ್ತು.
ಗುಜರಾತ್ ಗಡಿಗೆ ಸಮೀದಲ್ಲಿರುವ ರಾಜಸ್ಥಾನದ ಸಿರೋಹಿ ಜಿಲ್ಲೆಯ ಉಪ್ಲಗಢ್ ಗ್ರಾಮದಲ್ಲಿ ರಾಯಲಿ ಬಾಯಿಯವರ ಮನೆಯಿದೆ. ಅದು ಬೆಳಗಿನ ಜಾವದ 5:30ರ ಹೊತ್ತು. ಇದೊಂದು ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿನ ಕಾಂಕ್ರೀಟ್ ಬೀದಿಗಳು ಊರಿನ ಮೇಲಿನ ಮತ್ತು ಕೆಳ ಭಾಗದತ್ತ ಕರೆದುಕೊಂಡು ಹೋಗುತ್ತವೆ. ಆದರೆ ಈ ಬೀದಿಗಳಲ್ಲಿ ಬೈಕ್ ಓಡಿಸುವುದು ಬಹಳ ಕಷ್ಟದ ಕೆಲಸ. ಈ ಬೀದಿಗಳಲ್ಲಿ ಕೆಲವು ಕೆಳಮಟ್ಟದ ಛಾವಣಿಯ ಮನೆಗಳಾದರೆ, ಕೆಲವು ಸುಸಜ್ಜಿತವಾಗಿದ್ದವು ಮತ್ತು ಇನ್ನೂ ಕೆಲವು ಕಚ್ಚಾ ಮನೆಗಳಾಗಿದ್ದವು. ರಾಯಲಿ ಬಾಯಿಯವರದು ಸುಸಜ್ಜಿತ ಮನೆ. ಈ ಮನೆಯಂತೆಯೇ ಇಲ್ಲಿನ ಹೆಚ್ಚಿನ ಮನೆಗಳೂ ಎರಡು ಕೋಣೆ, ಅಡುಗೆ ಮನೆ ಮತ್ತು ವರಾಂಡವನ್ನು ಹೊಂದಿವೆ. ಆದರೆ ಅವರ ಮನೆಯಿರುವುದು ಊರಿನ ಮುಖ್ಯ ಭಾಗದಲ್ಲಲ್ಲ. ಅವರ ಮನೆಯಿರುವುದು ಇಲ್ಲಿ ಮಾಗ್ರಾ ಎಂದು ಕರೆಯಲ್ಪಡುವ ಬೆಟ್ಟದ ಮೇಲ್ಭಾಗದಲ್ಲಿ. ಮತ್ತು ಇಲ್ಲಿಗೆ ನಾವು ಕಾಲ್ನಡಿಗೆಯಲ್ಲಿ ಮಾತ್ರ ತಲುಪಲು ಸಾಧ್ಯ.
ರಾಯಲಿ ಬಾಯಿವರೂ ಸೇರಿದಂತೆ ಈ ಊರಿನ ಹೆಚ್ಚಿನ ಜನರು ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿರುವ ಗರಾಸಿಯ ಎನ್ನುವ ಸಮುದಾಯಕ್ಕೆ ಸೇರಿದವರು. ಪ್ರಸ್ತುತ ನಲವತ್ತರ ಆಸುಪಾಸಿನಲ್ಲಿರುವ ಅವರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಆದರೆ ಇದು ಅವರೊಬ್ಬರ ಕತೆಯಲ್ಲ ಉಪ್ಲಗಢದ ಒಟ್ಟು ಮಹಿಳೆಯರಲ್ಲಿ ಶೇಕಡಾ ಹತ್ತರಷ್ಟು ಮಹಿಳೆಯರು ಸಾಕ್ಷರರಾದರೆ, ಇಲ್ಲಿನ ಗಂಡಸರಲ್ಲಿ ಕೇವಲ 27 ಶೇಕಡಾದಷ್ಟು ಸಾಕ್ಷರತೆಯಿದೆ (ಆಧಾರ: 2011ರ ಜನಗಣತಿ).








