ಈ ಲೇಖನಕ್ಕೆ ಪುಲಿಟ್ಜರ್ ಕೇಂದ್ರದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಕೌಂಟೆಬಿಲಿಟಿ ನೆಟ್ ವರ್ಕ್ ಸಹಾಯ ದೊರಕಿರುತ್ತದೆ.
ಪೂರ್ವ ಭಾರತದ ರಾಜ್ಯಗಳಲ್ಲಿ ಒಂದಾದ ಜಾರ್ಖಂಡ್ ಮೂಲದ ಬಾಸಿಂಗ್ ಮುಂಡಾ ತನ್ನ ಪೂರ್ವಜರ ಗೌರವಾರ್ಥವಾಗಿ ಸ್ಮರಣಿಕೆ ಫಲಕಗಳನ್ನು ಇರಿಸಿರುವ ಹೊಲವೊಂದರಲ್ಲಿ ನಿಂತಿದ್ದಾರೆ. ತಲೆಮಾರುಗಳ ಹಿಂದೆ ಅವರ ಈ ಹಿರಿಯರು ಸ್ಥಳೀಯರನ್ನು ಅವರ ನೆಲದಿಂದ ಓಡಿಸುತ್ತಿದ್ದ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತಮ್ಮ ನಾಯಕ ಬಿರ್ಸಾ ಮುಂಡಾ ಅವರೊಂದಿಗೆ ಹೋರಾಟದಲ್ಲಿ ಕೈಜೋಡಿಸಿದ್ದರು. ಬಿರ್ಸಾ ಮುಂಡಾ 1899ರಲ್ಲಿ ಬ್ರಿಟಿಷ್ ಭೂಕಬಳಿಕೆ ನೀತಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ಸಂಘಟಿಸಿದ್ದರು.
ಇದಾಗಿ ಈಗ ಒಂದು ಶತಮಾನ ಕಳೆದಿದೆ. ದುರಂತವೆನ್ನುವಂತೆ ಇಂದು ನಲವತ್ತರ ಹರೆಯದ ಮುಂಡಾ ಬುಡಕಟ್ಟಿಗೆ ಸೇರಿದ ಬಾಸಿಂಗ್ ಅವರಂತಹ ಆದಿವಾಸಿ ರೈತರು ಹೊಸ ರೂಪದ ಒಕ್ಕಲೆಬ್ಬಿಸುವಿಕೆಗೆ ಸಾಕ್ಷಿಯಾಗುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ, ಸರ್ಕಾರವು ಅವರ ಭೂ ದಾಖಲೆಗಳನ್ನು ಅವರ ಒಪ್ಪಿಗೆಯಿಲ್ಲದೆ ಮತ್ತು ಅವರಿಗೆ ತಿಳಿಸದೆಯೇ ಡಿಜಿಟಲೀಕರಣಗೊಳಿಸಿದೆ. ಈ ಪ್ರಕ್ರಿಯೆಯಲ್ಲಿ, ನೂರಾರು ರೈತರು ಅಧಿಕೃತ ದಾಖಲೆಗಳಲ್ಲಿ ತಮ್ಮ ಭೂಮಿಯ ವಿಸ್ತೀರ್ಣವು ಹಠಾತ್ತನೆ ಕುಗ್ಗಿರುವುದನ್ನು, ಗಡಿಗಳು ಬದಲಾಗಿರುವುದನ್ನು ಮತ್ತು ಮಾಲೀಕತ್ವವು ಸದ್ದಿಲ್ಲದರೆ ಕೈಜಾರಿ ಹೋಗಿರುವುದನ್ನು ಗಮನಿಸಿದ್ದಾರೆ.
ಅದು ಏಪ್ರಿಲ್ ತಿಂಗಳ ಒಂದು ದಿನ. ರಾಜ್ಯದ ರಾಜಧಾನಿ ರಾಂಚಿಯಿಂದ 33 ಕಿಲೋಮೀಟರ್ ದೂರದಲ್ಲಿರುವ ಖುಂಟಿ ಜಿಲ್ಲೆಯ ದರಗಾಮಕ್ಕೆ ಹೋಗುವ ರಸ್ತೆಯುದ್ದಕ್ಕೂ ಮರಗಳ ವಸಂತ ಬಂದಿರುವುದನ್ನು ಸೂಚಿಸಲೋ ಎನ್ನುವಂತೆ ಹೂಗಳನ್ನು ಅರಳಿಸಿ ನಿಂತಿದ್ದವು. ಸ್ಥಳೀಯ ಬುಡಕಟ್ಟು ಪ್ರಕೃತಿ ಆರಾಧನೆಯ ಭಾಗವಾಗಿ ಆಚರಿಸುವ ʼಸರ್ಹುಲ್ʼ ಹಬ್ಬ ಮುಗಿದು ಕೆಲವು ದಿನಗಳಷ್ಟೇ ಕಳೆದಿದ್ದವು. ಅಲ್ಲಿನ ಸ್ಥಳೀಯ ಮಾರುಕಟ್ಟೆ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು.
ಮುಂದೆ ಬಂದರೆ ಬಾಸಿಂಗ್ ಮತ್ತು ಇತರ ಹಲವರು ತಮ್ಮ ಮನೆಗಳ ಹೊರಗಿನ ಬಯಲು ಪ್ರದೇಶದಲ್ಲಿ, ಪಲಾಶ (ಮುತ್ತುಗ) ಮತ್ತು ಅಶ್ವತ್ಥ ಮರಗಳ ನೆರಳಿನಲ್ಲಿ ಜಮಾಯಿಸಿ, ತಮ್ಮ ಭಾಷೆಯಾದ ಮುಂಡಾರಿಯಲ್ಲಿ ಹರಟುತ್ತಿದ್ದರು.
ಬಾಸಿಂಗ್ 2023ರಲ್ಲಿ ತಮ್ಮ 20 ಊರಿನಿಂದ ಕಿಲೋಮೀಟರ್ ದೂರದಲ್ಲಿರುವ ಖುಂಟಿ ಎನ್ನುವಲ್ಲಿನ ಭೂ ಮತ್ತು ಕಂದಾಯ ಇಲಾಖೆಯ ಕಚೇರಿಯಿಂದ ಆನ್ಲೈನ್ ತೆರಿಗೆ ರಸೀದಿಯನ್ನು ಪಡೆದರು. ಬಾಸಿಂಗ್ ಮತ್ತು ಅವರ ಸಹೋದರರ ಹೆಸರಿನಲ್ಲಿ ಒಟ್ಟು 52 ಎಕರೆ ಮತ್ತು 52 ಡಿಸ್ಮಿಲ್ ಜಮೀನು ಇತ್ತು. ಅವರ ಕುಟುಂಬವು ಈ ಜಮೀನಿನಲ್ಲಿ ಭತ್ತ ಮತ್ತು ಕಿರುಧಾನ್ಯಗಳನ್ನು ಬೆಳೆಯುತ್ತಾರೆ. ಆದರೆ ಅವರಿಗೆ ಸಿಕ್ಕ ರಶೀದಿಯಲ್ಲಿ ಅವರ ಭೂಮಿಯ ಅಳತೆಯನ್ನು ತಪ್ಪಾಗಿ, ಅಂದರೆ 52 ಎಕರೆ ಮತ್ತು 5 ಡಿಸ್ಮಿಲ್ ಎಂದು ನಮೂದಿಸಲಾಗಿತ್ತು.
ಒಂದು ಎಕರೆಯ ನೂರನೇ ಒಂದು ಭಾಗದಷ್ಟು ಭೂಮಿಯನ್ನು ಸೆಂಟ್ರಲ್ ಮತ್ತು ಪೂರ್ವ ಭಾರತದಲ್ಲಿ ಹೆಚ್ಚಾಗಿ 'ಡಿಸ್ಮಿಲ್' ಎಂದು ಕರೆಯಲಾಗುತ್ತದೆ. ಒಂದು ಡಿಸ್ಮಿಲ್ ಎಂದರೆ ಸುಮಾರು 435.6 ಚದರ ಅಡಿಗಳು. ಈ ಪದವು ಇಂಗ್ಲಿಷ್ ಭಾಷೆಯ 'ಡೆಸಿಮಲ್' ಎಂಬ ಪದದಿಂದ ಬಂದಿದೆ. ಲೆಕ್ಕ ಹಾಕಿ ನೋಡಿದರೆ, ಒಂದು ಡಿಸ್ಮಿಲ್ ಅಂದರೆ ಮುಂಬೈಯ ಒಂದು ಸಾಧಾರಣ ಬೆಡ್ರೂಮ್ ಇರುವ ಫ್ಲ್ಯಾಟ್ನಷ್ಟು ಜಾಗ. ಹೀಗಿರುವಾಗ, ಬಾಸಿಂಗ್ ಅವರ ಭೂಮಿಯು ಸರ್ಕಾರಿ ದಾಖಲೆಗಳಲ್ಲಿ ರಾತ್ರೋರಾತ್ರಿ ಅವರಿಗೆ ಯಾವುದೇ ಮುನ್ಸೂಚನೆ ಇಲ್ಲದೆಯೇ 47 ಡಿಸ್ಮಿಲ್ನಷ್ಟು ಕಡಿಮೆಯಾಗಿಬಿಟ್ಟಿದೆ.
ಆದರೆ ಇದು ಬಾಸಿಂಗ್ ಒಬ್ಬರ ಕತೆಯಲ್ಲ.
"ಭೂ ದಾಖಲೆಗಳಲ್ಲಿ ಬಹಳಷ್ಟು ಕೈಚಳಕ ನಡೆದಿದೆ. ಈ ಡಿಜಿಟಲೀಕರಣ ಆಗುವುದಕ್ಕಿಂತ ಮೊದಲು ನಮ್ಮ ಖಾತೆ ಅಡಿಯಲ್ಲಿ ಬರುತ್ತಿದ್ದ ರಕ್ಬಾ (ಭೂಮಿಯ ವಿಸ್ತೀರ್ಣ) ಬೇರೆಯೇ ಇತ್ತು. ಈಗಿನ ಆನ್ಲೈನ್ ದಾಖಲೆಗಳು ಮತ್ತು ರಸೀದಿಗಳಲ್ಲಿ ಕೆಲವು ಜಮೀನುಗಳನ್ನೇ ತೆಗೆದುಹಾಕಲಾಗಿದೆ, ಜೊತೆಗೆ ವಿಸ್ತೀರ್ಣವನ್ನೂ ಕಡಿಮೆ ಮಾಡಲಾಗಿದೆ" ಎಂದು ಬಾಸಿಂಗ್ ಹೇಳುತ್ತಾರೆ. ಮುಂದುವರಿದು ಅವರು, "ನಮ್ಮ ಭೂಮಿ ದಾಖಲೆಗಳನ್ನು ಯಾವಾಗ ಡಿಜಿಟಲ್ ಮಾಡುತ್ತಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ. ಯಾವುದೋ ಸಂದರ್ಭದಲ್ಲಿ ಅಕಸ್ಮಾತ್ತಾಗಿ ನೋಡಿದಾಗಷ್ಟೇ ಇಂತಹ ತಪ್ಪುಗಳು ನಮ್ಮ ಗಮನಕ್ಕೆ ಬರುತ್ತವೆ" ಎನ್ನುತ್ತಾರೆ.














