ಕ್ರೂಸ್ ಬೋಟ್ ಸಜ್ನೆಖಾಲಿ ಹುಲಿ ಸಂರಕ್ಷಿತ ಪ್ರದೇಶ, ಪಿರ್ಖಾಲಿ ಮತ್ತು ದೋಬಂಕಿ ಹುಲಿ ಸಂರಕ್ಷಿತ ಪ್ರದೇಶಗಳ ಮೂಲಕ ಸಾಗುತ್ತಿರುವಾಗ ಭಾನುಮತಿಯವರು ತಮ್ಮ ಸುತ್ತಮುತ್ತ ಕಾಣುವ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾರೆ. ವಿಶಾಲವಾಗಿ ಹರಿಯುವ ನೀರು, ವಾಚ್ ಟವರ್, ರೆಂಬೆಕೊಂಬೆಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು ಅವರ ಕಣ್ಣುಗಳಲ್ಲಿ ಹಾದುಹೋಗುತ್ತವೆ. ಬೋಟಿನಲ್ಲಿ ಅಡುಗೆ ಮಾಡುವವರು, ಅವರ ಸಹಾಯಕರು ಯಾವಾಗಲೂ ಕೆಲಸದಲ್ಲೇ ಮುಳುಗಿರುತ್ತಾರೆ. ಅವರೆ ಬೇಳೆ, ಆಲೂಗಡ್ಡೆಗಳನ್ನು ಬೇಯಿಸುವುದು, ಶುಂಠಿ - ಬೆಳ್ಳುಳ್ಳಿಯನ್ನು ಕತ್ತರಿಸುವುದು, ಸಾಂಬಾರು ಮಾಡಲು ಮಸಾಲೆ ಅರೆಯುವುದು, ಹೀಗೆ ಅಡುಗೆಯ ಸಿದ್ಧತೆಗಳು ಬೋಟಿನಲ್ಲಿ ನಡೆಯುತ್ತಿದೆ.
ಸಮಯವಾದಂತೆ ಬೋಟ್ನಲ್ಲಿ ಬಿಸಿಯೂ ಹೆಚ್ಚಾಗುತ್ತಿದೆ, ಅಡುಗೆ ಮಾಡುತ್ತಿರುವ ಹೆಂಗಸರು ತಂಪಾಗುವ ತನಕ ಕೊಂಚ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಹಾಗಾಗಿ “ತರಾತರಿ ಹಾತ್ ಚಾಲಾ [ಬೇಗ ಬೇಗ ಕೆಲಸ ಮಾಡಿ],” ಎಂದು ಒಬ್ಬರಿಗೊಬ್ಬರು ಹೇಳುತ್ತಾರೆ. "ಒಮ್ಮೆ ಮೋಟಾರು ಓಡಲು ಶುರು ಮಾಡಿದ ಮೇಲೆ, ನಾವು ಬೆಂದುಹೋಗುತ್ತೇವೆ,” ಎಂದು ಲಿಪಿಕಾ ಮೊಂಡಲ್ ನಗುತ್ತಾ ಹೇಳುತ್ತಾರೆ. ಅಡುಗೆ ಮಾಡುವ, ಕೆಲವೊಮ್ಮೆ ಸಹಾಯಕಿಯಾಗಿಯೂ ಕೆಲಸ ಮಾಡುವ ಇವರು ಮೋಟಾರಿನ ಬಿಸಿಯ ಬಗ್ಗೆ ಹೇಳುತ್ತಾರೆ. ಕ್ರೂಸ್ ಬೋಟಿನ ಅಡುಗೆ ಮನೆ ಆ ಮೋಟಾರಿನ ಪಕ್ಕವೇ ಇರುವುದರಿಂದ, ಮೋಟಾರ್ ಕಾದಂತೆ ಅಡುಗೆ ಮನೆಯೂ ಬಿಸಿಯಾಗುತ್ತದೆ. ಈ ಬಿಸಿ ಯಾವಾಗಲೂ ಹೀಗೇ ಇರುತ್ತದೆ ಎಂದು ಅಡುಗೆಯವರು, ಸಹಾಯಕರು ಹೇಳುತ್ತಾರೆ. ಐದು ನಿಮಿಷ ತಣ್ಣಗಿರುವ ಜಾಗಕ್ಕೆ ಹೋಗೋಣ ಎಂದರೆ, ಅದೂ ಇವರಿಗೆ ಸಾಧ್ಯವಿಲ್ಲ.
ಕಲ್ಕತ್ತೆಯಿಂದ ನೂರಹತ್ತು ಕಿಲೋಮೀಟರ್ ದೂರದಲ್ಲಿರುವ ಈ ಸುಂದರ್ ಬನ್ ಮ್ಯಾಂಗ್ರೋವ್ ಕಾಡುಗಳ ಗೋಶಬಾ ದ್ವೀಪದ ಪಾಖಿರಾಲಯ್ ಗ್ರಾಮದಿಂದ ಈ ಕ್ರೂಸ್ ಬೋಟ್ಗಳು ಹೊರಡುತ್ತವೆ. ಸುಂದರ ಬನ್ಗಳ ದಟ್ಟ ಅರಣ್ಯಕ್ಕೆ ಪ್ರವೇಶದ್ವಾರವಾಗಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಈ ಪ್ರದೇಶದಲ್ಲಿ ಬಂಗಾಳದ ಹುಲಿಗಳನ್ನು (ಪ್ಯಾಂಥೆರಾ ಟೈಗ್ರಿಸ್ ಟೈಗ್ರಿಸ್) ನೋಡಬಹುದು.
ಈ ಪ್ರವಾಸದ ನಿರ್ವಾಹಕರು ಸಾಮಾನ್ಯವಾಗಿ ಸುಮಾರು 40 ಮಂದಿ ಪ್ರವಾಸಿಗಳನ್ನು ಬೋಟಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಒಬ್ಬನಿಗೆ 2,000 - 5,000 ರುಪಾಯಿ ಕೊಟ್ಟರೆ ಆರು ಗಂಟೆಗಳ ಕಾಲ ಈ ಬೋಟ್ ವಿಹಾರವನ್ನು ಮಾಡಬಹುದು. ಎರಡು ದಿನಗಳ ಕಾಲ ಈ ವಿಹಾರ ಮಾಡಬೇಕೆಂದರೆ ಹೆಚ್ಚು ಹಣ ಕೊಡಬೇಕಾಗುತ್ತದೆ. ಈ ಬೋಟ್ಗಳಲ್ಲಿ ಸಾಮಾನ್ಯವಾಗಿ ಎರಡು ಡೆಕ್ಗಳು ಇರುತ್ತವೆ. ಕೆಳಗಿನ ಡೆಕ್ನಲ್ಲಿ ಹಾಸಿಗೆ ಮತ್ತು ತಲೆದಿಂಬುಗಳಿದ್ದು, ಬಿಸಿಲಿನ ಹೊತ್ತು ಪ್ರವಾಸಿಗರು ಇಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು.










