ಅವನಿಗೆ ವಿರಾಟ್ ಕೊಹ್ಲಿ ಆರಾಧ್ಯ ದೈವ. ಅವಳಿಗೆ ಬಾಬರ್ ಆಜಮ್ ಎಂದರೆ ಅಚ್ಚುಮೆಚ್ಚು. ಕೊಹ್ಲಿ ಸೆಂಚುರಿ ಹೊಡೆದಾಗಲೆಲ್ಲ ಅವನು ಅದನ್ನು ಅವಳಿಗೆ ತಿಳಿಸುತ್ತಿದ್ದ, ಮತ್ತು ಬಾಬರ್ ಚೆನ್ನಾಗಿ ಆಡಿದಾಗಲೆಲ್ಲ ಅವಳು ಅವನನ್ನು ರೇಗಿಸುತ್ತಿದ್ದಳು. ಕ್ರಿಕೆಟ್ ಜಗಳವೆನ್ನುವುದು ಆಯೇಷಾ ಮತ್ತು ನೂರುಲ್ ಹಸನ್ರ ಪ್ರೇಮದ ಭಾಷೆಯಾಗಿತ್ತು. ಅವರ ಪ್ರೇಮ ಯಾವ ಮಟ್ಟಿಗಿತ್ತೆಂದರೆ ಅಕ್ಕಪಕ್ಕದವರು ಅವರಿಬ್ಬರದು ಪ್ರೇಮ ವಿವಾಹವೆಂದು ನಂಬುವಷ್ಟು.
2023ರ ಜೂನ್ ತಿಂಗಳಿನಲ್ಲಿ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆಯಾದ ಸಮಯದಲ್ಲಿ ಆಯೇಷಾರ ಕಣ್ಣುಗಳು ಬೆಳಗಿದವು. ಭಾರತ ಮತ್ತು ಪಾಕಿಸ್ಥಾನದ ನಡುವಿನ ಪಂದ್ಯವನ್ನು ಅಕ್ಟೋಬರ್ 14ರಂದು ಗುಜರಾತಿನ ಅಹ್ಮದಾಬಾದಿನಲ್ಲಿ ಆಯೋಜಿಸಲಾಗಿತ್ತು. “ನಾವು ಸ್ಟೇಡಿಯಮ್ಮಿಗೆ ಹೋಗಿ ಮ್ಯಾಚ್ ನೋಡೋಣ ಎಂದು ನೂರುಲ್ ಬಳಿ ಹೇಳಿದ್ದೆ” ಎಂದು 30 ವರ್ಷದ ಆಯೇಷಾ ಪಶ್ಚಿಮ ಮಹಾರಾಷ್ಟ್ರದ ರಾಜಾಚೆ ಕುರ್ಲೆಯಲ್ಲಿರುವ ತಮ್ಮ ತವರು ಮನೆಯಲ್ಲಿ ಕುಳಿತು ಹೇಳಿದರು. “ಭಾರತ ಮತ್ತು ಪಾಕಿಸ್ಥಾನ ಆಡುವುದು ಬಹಳ ಅಪರೂಪ. ಅದು ನಮ್ಮಿಬ್ಬರ ನೆಚ್ಚಿನ ಆಟಗಾರರು ಒಂದೇ ಪಂದ್ಯದಲ್ಲಿ ಆಡುವುದನ್ನು ನೋಡಲು ಅಪೂರ್ವ ಅವಕಾಶವಾಗಿತ್ತು.”
30 ವರ್ಷದ ನೂರುಲ್ ಹಲವು ಕರೆಗಳನ್ನು ಮಾಡುವ ಮೂಲಕ ಪಂದ್ಯಕ್ಕೆ ಎರಡು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದು ಗಂಡ ಹೆಂಡತಿಗೆ ಸಂಭ್ರಮ ಮೂಡಿಸಿತ್ತು. ಆ ಹೊತ್ತಿಗೆ ಆಯೇಷಾ ಆರು ತಿಂಗಳ ಗರ್ಭಿಣಿ. ಅವರು ಸತಾರಾ ಜಿಲ್ಲೆಯ ಪುಸೆಸಾವಲಿ ಗ್ರಾಮದಿಂದ 750 ಕಿಲೋಮೀಟರ್ ಪ್ರಯಾಣವನ್ನು ನಿಖರವಾಗಿ ಯೋಜಿಸಿದರು. ರೈಲು ಟಿಕೆಟ್ ಗಳನ್ನು ಕಾಯ್ದಿರಿಸಲಾಯಿತು ಮತ್ತು ವಸತಿ ವ್ಯವಸ್ಥೆ ಮಾಡಲಾಯಿತು. ಕಡೆಗೆ ಪಂದ್ಯದ ದಿನವೂ ಬಂದಿತು. ಆದರೆ ಅವರಿಬ್ಬರು ಆ ಪಂದ್ಯವನ್ನು ನೋಡಲು ಹೋಗಲಿಲ್ಲ.
ಅಕ್ಟೋಬರ್ 14, 2023ರ ಸೂರ್ಯ ಉದಯಿಸುವ ಹೊತ್ತಿಗೆ ನೂರುಲ್ ತೀರಿಕೊಂಡು ಒಂದು ತಿಂಗಳಾಗಿತ್ತು, ಮತ್ತು ಆಯೇಷಾ ದುಃಖದ ಕಡಲಿನಲ್ಲಿ ಮುಳುಗಿದ್ದರು.








