ಗಮನಿಸಿ: ಪರಿಯು ವೃದ್ಧರ ಬಗ್ಗೆ ಮತ್ತು ಅಂಗವೈಕಲ್ಯದ ಬಗ್ಗೆ ಹಲವಾರು ವರದಿಗಳನ್ನು ಪ್ರಕಟಿಸಿದೆ. ಸದ್ಯ ನಾವು ಅವುಗಳನ್ನು ನಿರ್ದಿಷ್ಟ ವಿಷಯಗಳಿಗೆ ಕೇಂದ್ರೀಕರಿಸಿ ವರದಿ ಮಾಡಲಿದ್ದೇವೆ. ಇದು ನಮ್ಮ ಮೊದಲ ಲೇಖನವಾಗಿದೆ.


Sangrur, Punjab
|WED, OCT 01, 2025
ಪಂಜಾಬ್: ಹಸಿರು ಕ್ರಾಂತಿ ಮತ್ತು ರಕ್ತಸಿಕ್ತ ಕೊಯ್ಲು
ಪಂಜಾಬಿನ ಗ್ರಾಮೀಣ ಪ್ರದೇಶಗಳ ಜನರು ಕೃಷಿ ಯಂತ್ರೋಪಕರಣಗಳ ಅವಘಡಗಳಿಂದ ಅಂಗವಿಕಲರಾಗಿ, ವ್ಯಥೆಯ ಜೀವನವನ್ನು ಸಾಗಿಸುತ್ತಿರುವುದು ಸರ್ವೆ ಸಾಮಾನ್ಯ ಸಂಗತಿಯಾಗಿದೆ. ಅಕ್ಟೋಬರ್ 1 ನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ವೃದ್ಧರ ದಿನವೆಂದು ಘೋಷಿಸಿರುವ ಹಿನ್ನಲೆಯಲ್ಲಿ, ವೃದ್ಧಾಪ್ಯ ಮತ್ತು ಅಂಗವೈಕಲ್ಯದ ಬಗ್ಗೆ ಒಂದು ವರದಿ
Author
Editor
Photo Editor
Translator
ಸುರ್ಜೀತ್ ಸಿಂಗ್ ಅವರು ಕೆಲವು ದಶಕಗಳ ಹಿಂದೆ ತಮ್ಮ ಬಲಗೈಯನ್ನು ಕಳೆದುಕೊಂಡರು. ಆದರೆ ತಮ್ಮ ದೇಹದಲ್ಲಿ ಒಂದು ಅಂಗವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲ.
“ಮೇವು ಕತ್ತರಿಸುವುದನ್ನು ಬಿಟ್ಟು ಬೇರೆಲ್ಲಾ ಕೆಲಸ ನಾನು ಮಾಡುತ್ತೇನೆ - ಅದನ್ನು ಮಾಡಲು ಎರಡು ಕೈಗಳು ಬೇಕು, ಒಂದು ಕೈಯಲ್ಲಿ ಮೇವನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿರುವ ಕತ್ತಿಯಿಂದ ಅದನ್ನು ಕೊಯ್ಯಬೇಕು,” ಎಂದು ಹಿರಿಯ ರೈತ ಸುರ್ಜೀತ್ ಸಿಂಗ್ ಹೇಳುತ್ತಾರೆ. ಆಮೇಲೆ, ಸಂಗ್ರೂರ್ ಜಿಲ್ಲೆಯ ರಂಗಿಯಾನ್ ಗ್ರಾಮದಲ್ಲಿರುವ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಪ್ರತಿದಿನ ಮಾಡುವ ಕೆಲಸಗಳ ಲೆಕ್ಕ ಕೊಡುತ್ತಾರೆ.
ಮಾತಿನ ಮಧ್ಯೆ ಅವರ ಹೆಂಡತಿ ಕುಲ್ವಂತ್ ಕೌರ್ ಬಾಯಿ ಹಾಕುತ್ತಾರೆ. ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಗಂಡ ಹೇಳಿದ್ದನ್ನೆಲ್ಲಾ ನಿರಾಕರಿಸುತ್ತಾರೆ. “ಇವರಿಗೆ ತಮ್ಮ ಪ್ಯಾಂಟಿನ ಲಾಡಿಯನ್ನು ಕಟ್ಟಲೂ ಆಗೋದಿಲ್ಲ,” ಎಂದು ಅವರು ಹೇಳಿದರು. “ಬೆಳಗ್ಗೆ ಕಕ್ಕುಸಿಗೆ ಹೋದರೆ ಸರಿಯಾಗಿ ತೊಳೆದುಕೊಳ್ಳಲೂ ಇವರಿಗೆ ಸಾಧ್ಯವಿಲ್ಲ. ತಮ್ಮ ಬೆನ್ನನ್ನು ತಾವೇ ಕೆರೆದುಕೊಳ್ಳಲು ಇವರಿಗೆ ಕೈಯೇ ಇಲ್ಲ. ಬೆನ್ನು ತುರಿಸಿದರೆ ಓಡಿ ಹೋಗಿ ಗೋಡೆ ಅಥವಾ ಮರಕ್ಕೆ ಉಜ್ಜಿಕೊಳ್ಳುತ್ತಾರೆ,” ಎಂದು ಕುಲ್ವಂತ್ ಕೌರ್ ಹೇಳಿದರು.
ಇಷ್ಟಾದರೂ, ಅಂಗವಿಕಲರಿಗೆ ಸಿಗುವ ಯಾವುದೇ ಸೌಲಭ್ಯವನ್ನು ಪಡೆಯಲು ಸುರ್ಜೀತ್ ಸಿಂಗ್ ಅವರಿಗೆ 'ಅರ್ಹತೆ' ಇರಲಿಲ್ಲ. ಅವರು ಪಟ್ವಾರಿ (ಭೂ ದಾಖಲೆಗಳನ್ನು ಮಾಡುವ ಗ್ರಾಮದ ಸರ್ಕಾರಿ ಅಧಿಕಾರಿ) ಅವರೊಂದಿಗೆ ಮಾತನಾಡಿದರು. “ಆದರೆ ಅವರು ‘ನಿಮಗೆ ಜಮೀನು ಇರುವುದರಿಂದ ನೀವು ಅದಕ್ಕೆ ಅರ್ಹರಲ್ಲʼ ಎಂದು ನನಗೆ ಹೇಳಿದರು. ಹಾಗಾಗಿ ನಾನು ಸುಮ್ಮನೆ ಮನೆಗೆ ವಾಪಾಸ್ ಬಂದೆ,” ಎಂದು ಅವರು ಹೇಳಿದರು. ಇದು ಹಾಸ್ಯಾಸ್ಪದ ಸಂಗತಿ, ಏಕೆಂದರೆ ಭೂಮಾಲೀಕರು ಮತ್ತು ಭೂರಹಿತರು ಇಬ್ಬರೂ ಕಾನೂನಿನ ಅಡಿಯಲ್ಲಿ ಈ ಸೌಲಭ್ಯಕ್ಕೆ ಅರ್ಹರು. ಸುರ್ಜೀತ್ರವರಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಅವರಿಗೆ ಅಂಗವಿಕಲರ ಪಿಂಚಣಿಯೂ ಸಿಗುವುದಿಲ್ಲ (ಪಂಜಾಬ್ನಲ್ಲಿ ತಿಂಗಳಿಗೆ 1,500 ರುಪಾಯಿ). 60-69 ವರ್ಷದೊಳಗಿನವರಿಗೆ ಸಿಗುವ 1,500 ರುಪಾಯಿ ಮತ್ತು 70 ವರ್ಷ ಮೀರಿದವರಿಗೆ ಸಿಗುವ 2,000 ರುಪಾಯಿಗಳ ವೃದ್ಧಾಪ್ಯ ಪಿಂಚಣಿಯೂ ಸಿಗುವುದಿಲ್ಲ.

Vishav Bharti

Vishav Bharti
72 ವರ್ಷ ಪ್ರಾಯದ ಶಾಂತ ಸ್ವಭಾವದ ವ್ಯಕ್ತಿಯಾಗಿರುವ ಸುರ್ಜೀತ್ ಅವರು ತಮ್ಮ ಒಂದು ಕೈಯಿಂದಲೇ ನಿಲ್ಲಿಸದೆ ಕೆಲಸ ಮಾಡಬಲ್ಲ ಅಗಾಧ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ. ಅಷ್ಟಕ್ಕೂ ಅವರು ತಮ್ಮ ಕೈಯೊಂದನ್ನು ಕಳೆದುಕೊಂಡಿದ್ದಾದರೂ ಹೇಗೆ? ಅದು ತೊಂಬತ್ತರ ದಶಕದ ಮಧ್ಯದಲ್ಲಿ ನಡೆದ ಘಟನೆ ಎಂದು ಸುರ್ಜೀತ್ ಹೇಳುತ್ತಾರೆ. “ನನ್ನ ಸಹೋದರ ನನ್ನನ್ನು ಮೇವು ಕತ್ತರಿಸಲು ಬಿಡುತ್ತಿರಲಿಲ್ಲ, ತಡೆಯುತ್ತಿದ್ದರು. ಯಾಕೆಂದರೆ ನಾನು ಗಮನಕೊಟ್ಟು ಕೆಲಸ ಮಾಡುತ್ತಿರಲಿಲ್ಲ. ಆ ದಿನ ನಾವು ಟೋಕಾ (ಮೇವು ಕತ್ತರಿಸುವ) ಯಂತ್ರಗಳನ್ನು ರಿಪೇರಿ ಮಾಡಿದ್ದೆವು, ಅದರಲ್ಲಿ ಕಬ್ಬನ್ನು ಮೇವಿಗಾಗಿ ಕತ್ತರಿಸುತ್ತಿದ್ದೆವು. ಮೊದಲು ನನ್ನ ಬೆರಳುಗಳು ರೋಲರ್ಗಳಲ್ಲಿ ಸಿಕ್ಕಿಹಾಕಿಕೊಂಡವು, ಅದು ತೋಳಿನ ತನಕ ನನ್ನ ಇಡೀ ಕೈಯನ್ನೇ ಒಳಗೆ ಎಳೆಯಿತು,” ಎನ್ನುವಾಗ ಅವರ ಕೆಂಪು ಕಣ್ಣುಗಳು ಶೂನ್ಯದೆಡೆಗೆ ದಿಟ್ಟಿಸಿ ನೋಡುತ್ತಿದ್ದವು.
ಅವರು ಮಾತು ನಿಲ್ಲಿಸಿದಾಗ, ಅವರ ಪತ್ನಿ 65 ವರ್ಷದ ಕುಲ್ವಂತ್ ಕೌರ್ ಅವರು ಮಾತನ್ನು ಮುಂದುವರಿಸುತ್ತಾರೆ. “ಮೇವು ಕತ್ತರಿಸಿದಂತೆ ಕೈಯೂ ತುಂಡು ತುಂಡಾಗಿ ಹೋಗಿತ್ತು. ಎಲ್ಲೆಲ್ಲೂ ರಕ್ತ. ಅದನ್ನು ನೋಡಿ ನಾನು ಮೂರ್ಛೆ ತಪ್ಪಿ ಬಿದ್ದೆ,” ಎಂದು ಅವರು ಹೇಳಿದರು. ಇದಾದ ಮೇಲೆ, ಸುರ್ಜೀತ್ ಅವರು ಸುಮಾರು 20 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆ ದುರಂತವನ್ನು ನೆನೆದು ದುಃಖಿಸಲೂ ಅವರಲ್ಲಿ ಸಮಯ ಇರಲಿಲ್ಲ. ಎಲ್ಲದಕ್ಕೂ ಮೇಲೆ, ಸಂಪಾದನೆ ಮಾಡಲು ಜೀವವಾದರೂ ಉಳಿದಿತ್ತು. ಸುಮಾರು ಒಂದುವರೆ ತಿಂಗಳಾದ ಮೇಲೆ ಅವರು ಕೆಲಸ ಮಾಡಲು ಹೊಲಕ್ಕೆ ಹೋದರು. “ನಮ್ಮ ನೆರೆಮನೆಯವರೊಬ್ಬರು ಎಷ್ಟೇ ತಡೆದರೂ ಕೇಳದೆ, ರಿಪೇರಿ ಕೆಲಸ ಮಾಡಲು ಸುರ್ಜೀತ್ ತಮ್ಮ ಒಂದು ಕೈಯನ್ನು ಬಳಸಿ ಕೊಳವೆಬಾವಿಗೆ ಇಳಿದ ಬಗ್ಗೆ ಅವರೇ ನಮಗೆ ಬಂದು ಹೇಳಿದರು. ಕೈಯನ್ನು ಕಳೆದುಕೊಂಡ ನೋವಿನಲ್ಲಿ ಅವರು ಒಂದೇ ಒಂದು ದಿನ ದುಃಖಿಸಿದ್ದನ್ನು ನಾನು ನೋಡಿಲ್ಲ,” ಎಂದು ಕುಲ್ವಂತ್ ಹೇಳುತ್ತಾರೆ.
“ಅವರ ಎರಡೂ ಕೈಗಳು ಸರಿ ಇರುತ್ತಿದ್ದರೆ ಈ ಗೋಡೆಗಳಿಗೆ ಶುದ್ಧ ಚಿನ್ನದ ತಗಡನ್ನು ಹೊದಿಸುತ್ತಿದ್ದರೋ ಏನೋ. ಅವರು ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು,” ಎಂದು ಅವರು ಹೇಳುತ್ತಾರೆ.
ಸುರ್ಜೀತ್ ಸಿಂಗ್ ಮತ್ತು ಅವರಂತಹ ಅನೇಕರ ನೆನಪಿನ ಜೋಳಿಗೆಯಲ್ಲಿ ಎಪ್ಪತ್ತರ ದಶಕದ ಆರಂಭದಲ್ಲಿ ಬಂದ ಹಸಿರು ಕ್ರಾಂತಿ ಮತ್ತು ಅದು ತಂದ ತಂತ್ರಜ್ಞಾನಗಳು ಹಾಗೂ ಯಾಂತ್ರೀಕರಣದ 'ಸುಗ್ಗಿ'ಯ ನೆನಪುಗಳಿವೆ. ಇವರ ಕತೆಗಳಂತ ಹಲವಾರು ಕತೆಗಳು ಪಂಜಾಬ್ನ ಹಳ್ಳಿಗಳಲ್ಲಿವೆ, ಆದರೆ ಗಾಢ ಮೌನದಲ್ಲಿ ಹುದುಗಿಹೋಗಿವೆ.

Vishav Bharti
ಈ ರಾಜ್ಯದಲ್ಲಿ ಕೇವಲ 1975 ರಿಂದ 1978 ರವರೆಗೆ 841 ಕೃಷಿ ಯಂತ್ರೋಪಕರಣಗಳ ಅವಘಡಗಳು ಸಂಭವಿಸಿವೆ.
ಪಂಜಾಬ್ ಕೃಷಿ ಮಾರುಕಟ್ಟೆ ಮಂಡಳಿ ಸಂಗ್ರಹಿಸಿದ ದತ್ತಾಂಶದ ಪ್ರಕಾರ, 2007–12 ರ ನಡುವೆ ಒಟ್ಟು 6,196 ಕೃಷಿ ಅವಘಡಗಳು ಸಂಭವಿಸಿವೆ. ಇವುಗಳಲ್ಲಿ, 4,218, ಅಥವಾ ಶೇಕಡಾ 68.08 ಮೇವು ಕತ್ತರಿಸುವ ಯಂತ್ರದಿಂದ ಸಂಭವಿಸಿವೆ. 1,395, ಅಥವಾ ಶೇಕಡಾ 22.51 ಕೊಯ್ಲು ಮಾಡುವ ಯಂತ್ರಗಳು ಮತ್ತು ಥ್ರೆಷರ್ಗಳಲ್ಲಿ ಸಂಭವಿಸಿವೆ. 583, ಅಥವಾ ಶೇಕಡಾ 9.41 ಟ್ರ್ಯಾಕ್ಟರ್ಗಳು ಮತ್ತು ಕೃಷಿ ಸಂಬಂಧಿತ ಇತರ ಉಪಕರಣಗಳನ್ನು ಬಳಸುವಾಗ ನಡೆದಿವೆ.
ಮಾರುಕಟ್ಟೆ ಮಂಡಳಿಯು ಇಂತಹ ಅವಘಡಗಳ ಡೇಟಾವನ್ನು ವಿಶ್ಲೇಷಿಸಿ ಮತ್ತೊಂದು ಅಧ್ಯಯನವನ್ನು ಮಾಡಿದೆ. ಇದರಲ್ಲಿರುವ ಅಂಕಿಅಂಶ ಒಂದು ಅಂದಾಜು. ಮೇವು ಕತ್ತರಿಸುವ ಯಂತ್ರ ಮತ್ತು ಥ್ರೆಷರ್-ಸಂಬಂಧಿತ ಅವಘಡಗಳಲ್ಲಿ ಶೇಕಡಾ 67.5 ಪ್ರಕರಣಗಳಲ್ಲಿ ಬೆರಳುಗಳು ಕತ್ತರಿಸಲ್ಪಟ್ಟಿವೆ ಎಂದು ಈ ಅಧ್ಯಯನ ತೋರಿಸಿದೆ. ಶೇಕಡಾ 18.2 ರಷ್ಟು ಪ್ರಕರಣಗಳಲ್ಲಿ ಜನರು ಕೈಗಳನ್ನು ಕಳೆದುಕೊಂಡಿದ್ದಾರೆ. ಶೇಕಡಾ 10.5 ರಷ್ಟು ಜನರು ತೋಳಿನಿಂದಲೇ ಕೈಯನ್ನು ಕಳೆದುಕೊಂಡಿದ್ದಾರೆ. ಕೃಷಿ ಅವಘಡಗಳಲ್ಲಿ ಬಲಿಯಾದವರಿಗೆ ಸಿಗುವ ಪರಿಹಾರದ ಕುರಿತು 2017 ರ ಅಧ್ಯಯನವನ್ನು ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕೃಷಿ ಯಂತ್ರೋಪಕರಣಗಳು ಮತ್ತು ವಿದ್ಯುತ್ ಎಂಜಿನಿಯರಿಂಗ್ ವಿಭಾಗ ನಡೆಸಿದೆ.
ಆದರೆ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಈ ಅಧ್ಯಯನವು ಮಾರುಕಟ್ಟೆ ಮಂಡಳಿ ಕೊಟ್ಟಿರುವ ದತ್ತಾಂಶದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. 2007-12 ರ ಅವಧಿಯಲ್ಲಿ ಕೇವಲ ಮೂರು ವರ್ಷಗಳಲ್ಲಿ ನಡೆದಿರುವ ನೈಜ ಕೃಷಿ ಅವಘಡಗಳ ಸಂಖ್ಯೆ 9,188 ಮತ್ತು 25 ಕೋಟಿ ರುಪಾಯಿಗಳ ಪರಿಹಾರವನ್ನು ಪ್ರತಿಯೊಬ್ಬರಿಗೂ ಸರಾಸರಿ 50,000 ರುಪಾಯಿಗಳಿಗಿಂತಲೂ ಕಡಿಮೆ ಎಂಬಂತೆ ಕೇವಲ 5,492 ಜನರಿಗೆ ಮಾತ್ರ ನೀಡಲಾಗಿದೆ ಎಂದು ಮಾರುಕಟ್ಟೆ ಮಂಡಳಿಯ ಅಂಕಿಅಂಶ ಹೇಳುತ್ತದೆ. ಇದರರ್ಥ, ಬಹುಶಃ ಕನಿಷ್ಠ 3,696 ಸಂತ್ರಸ್ತರು ಅಥವಾ ಒಟ್ಟು 9,188 ರಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಜನರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.
ಹಸಿರು ಕ್ರಾಂತಿಯ ಕಾಲದಲ್ಲಿ ಹೊಸ ರೀತಿಯ ಯಂತ್ರೋಪಕರಣಗಳು ಬಂದ ಕೂಡಲೇ ಈ ರೀತಿಯ ಅವಘಡಗಳು ಸಂಭವಿಸಲು ಆರಂಭವಾದವು. ಕೃಷಿ ಅವಘಡಗಳಿಂದ ಅಂಗವಿಕಲರಾಗಿರುವ ಒಬ್ಬನೇ ಒಬ್ಬ ಮನುಷ್ಯ ಇಲ್ಲದ ಊರು ಪಂಜಾಬಿನಲ್ಲಿ ನಿಮಗೆ ಕಾಣಲು ಸಿಗುವುದಿಲ್ಲ. ನೋವಿನ ಸಂಗತಿಯೇನೆಂದರೆ, ಅಂಗವಿಕಲರಾದ ಮೇಲೆ ಈ ಸಂತ್ರಸ್ತರ ಬದುಕು ಸಂಕಷ್ಟಗಳಿಂದ ತುಂಬಿಹೋಗಿರುವುದು. "ಇವರ ವಾರ್ಷಿಕ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ ಮತ್ತು ಶಾಶ್ವತ ದೈಹಿಕ ಅಂಗವೈಕಲ್ಯವು ಅವರನ್ನು ದೊಡ್ಡಮಟ್ಟದ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಸಿದೆ,” ಎಂದು ಚಂಡೀಗಢ ಮೂಲದ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಅಂಡ್ ಕಮ್ಯುನಿಕೇಷನ್ ನಡೆಸಿದ ಅಧ್ಯಯನವೊಂದು ಹೇಳುತ್ತದೆ. "ಇದರಿಂದಾಗಿ ಅವರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಲು ಇತರನ್ನು ಅವಲಂಬಿಸಲಬೇಕಾದ ಪರಿಸ್ಥಿತಿ ಬಂದಿದೆ.”
ಕೃಷಿ ಅವಘಡಗಳಿಗೆ ಒಳಗಾದ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು. ಭಾರತದ ಸಂಸತ್ತು 1983 ರಲ್ಲಿ ಅಪಾಯಕಾರಿ ಯಂತ್ರಗಳು (ನಿಯಂತ್ರಣ) ಕಾಯ್ದೆಯನ್ನು ಅಂಗೀಕರಿಸಿತು. ಇದಾದ ನಂತರದ ವರ್ಷ ಪಂಜಾಬ್ ಕೃಷಿ ಅವಘಡಗಳ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡುವ ಯೋಜನೆಯನ್ನು ಆರಂಭಿಸಿತು. ಆದರೆ 1984 ರಲ್ಲಿ ಈ ಯೋಜನೆ ಜಾರಿಯಾದಾಗಿನಿಂದ ಅದರ ಅನುಷ್ಠಾನ ಮಾತ್ರ ತೀರ ಕಳೆಪೆಯಾಗಿದೆ. ಅದಕ್ಕೆ ಜೀವಂತ ಸಾಕ್ಷಿಯೇ ಸುರ್ಜೀತ್ ಸಿಂಗ್.
ಪಟಿಯಾಲ ಸಂಸ್ಥಾನದ ಊಳಿಗಮಾನ್ಯ ಪದ್ದತಿಯ ವಿರುದ್ಧ ಹೋರಾಡಿದ ಚರಿತ್ರೆಯನ್ನು ಹೊಂದಿರುವ ಇವರ ಗ್ರಾಮವಾದ ರಂಗಿಯಾನ್ನಲ್ಲಿ, ಕೃಷಿ ಯಂತ್ರೋಪಕರಣಗಳಿಂದ ಸಂಭವಿಸಿದ ಅವಘಡಗಳಲ್ಲಿ ಜನರು ಅಂಗವಿಕಲರಾಗಿರುವ ಹಲವಾರು ಪ್ರಕರಣಗಳು ಕಾಣಸಿಗುತ್ತವೆ. ಅವರಲ್ಲಿ ಹೆಚ್ಚಿನವರು ಸಾವನ್ನಪ್ಪಿದ್ದಾರೆ, ಸುರ್ಜೀತ್ ಸೇರಿದಂತೆ ಇನ್ನೂ ಇಬ್ಬರು ಈಗಲೂ ಬದುಕಿದ್ದಾರೆ.
1982 ರಲ್ಲಿ ಥ್ರೆಷರ್ ಬಳಸುವಾಗ ತಮ್ಮ ಬಲಗೈ ಮತ್ತು ತೋಳಿನ ಭಾಗವನ್ನು ಕಳೆದುಕೊಂಡ 73 ವರ್ಷ ಪ್ರಾಯದ ರೈತ ಪಾಲ್ ಸಿಂಗ್, ನಾಲ್ಕು ದಶಕಗಳ ಹಿಂದಿನ ಆ ಘಟನೆಯನ್ನು ನೆನಪಿಸಿಕೊಂಡು ನಡುಗುತ್ತಾರೆ. "ನಾನು ಕಡಾ (ಸಿಖ್ ಕೈಗಡಗ) ಧರಿಸಿದ್ದೆ. ನನಗೆ ಸುಮ್ಮನೆ ಯಾವುದೇ ಕೆಲಸ ಮಾಡದೆ ಕುಳಿತುಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ನಾನು ಥ್ರೆಷರ್ಗೆ ಆಯಿಲ್ ಹಾಕುತ್ತಿದೆ. ಆಯಿಲ್ ಹಾಕುವಾಗ ಥ್ರೆಷರ್ ರನ್ ಆಗುತ್ತಿತ್ತು. ನನ್ನ ಕೈಯಲ್ಲಿದ್ದ ಕಡಾ ಫೀಡರ್ ನಲ್ಲಿರುವ ದೊಡ್ಡ ಬೋಲ್ಟ್ ಗಳಲ್ಲಿ ಒಂದರಲ್ಲಿ ಸಿಕ್ಕಿಹಾಕಿಕೊಂಡಿತು. ಅದು ನನ್ನ ಕೈಯನ್ನು ಎಷ್ಟು ಜೋರಾಗಿ ಒಳಗೆ ಎಳೆಯಿತು ಎಂದರೆ ನನ್ನ ಮೂಳೆಗಳು ಮುರಿದು ಹೋದವು. ಕ್ಷಣಾರ್ಧದಲ್ಲಿ ಮಣಿಕಟ್ಟಿನ ಒಂದು ಭಾಗದೊಂದಿಗೆ ನನ್ನ ಕೈ ನೆಲದ ಮೇಲೆ ಬಿದ್ದಿತ್ತು. ದಪ್ಪ ಮತ್ತು ದುಂಡಾಗಿದ್ದ ಆ ಕಡಾ ಆಯತಾಕಾರಕ್ಕೆ ತಿರುಗಿತ್ತು. ಆ ನೋವನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಬದಲು ನನ್ನ ಕೈ ಚಾಫ್ ಕಟ್ಟರ್ಗೆ (ಮೇವು ಕತ್ತರಿಸುವ ಯಂತ್ರ) ಸಿಕ್ಕಿ ತುಂಡಾಗಿದ್ದರೂ ಚಿಂತೆ ಇರಲಿಲ್ಲ, ಇಷ್ಟು ನೋವು ಇರುತ್ತಿರಲಿಲ್ಲೇನೋ,” ಎಂದು ಅವರು ಹೇಳುತ್ತಾರೆ.
ಇದಾಗಿ ಪಾಲ್ ಸಿಂಗ್ ಅವರು 20-25 ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದರು. ಸುರ್ಜೀತ್ ಅವರಂತೆಯೇ ಇವರೂ ತಮಗಾದ ದುರಂತದ ಬಗ್ಗೆ ಯೋಚಿಸುತ್ತಾ ಸಮಯ ಕಳೆಯಲಿಲ್ಲ. "ನಾನು ಎರಡೇ ಎರಡು ತಿಂಗಳಲ್ಲಿ ಟ್ರ್ಯಾಕ್ಟರ್ ಓಡಿಸಲು ಆರಂಭಿಸಿದೆ. ಎಂದಿನಂತೆ, ಉಳುಮೆ ಮತ್ತು ಬಿತ್ತನೆ ಕೆಲಸ ಸುಲಭವಾಗಿ ಮಾಡುತ್ತಿದ್ದೆ. ಎರಡೂ ಕೈಗಳನ್ನು ಬಳಸಿ ಸಮತಟ್ಟು ಮಾಡುವ ಕೆಲಸವನ್ನು ಕೂಡ ನಾನು ನನ್ನ ಈ ಒಂದು ಕೈಯಿಂದಲೇ ಮಾಡುತ್ತಿದ್ದೆ. ಸಮತಟ್ಟು ಮಾಡುವ ಕೆಲಸವನ್ನು ಬೆಳಗ್ಗೆ 4 ಗಂಟೆಗೆ ಆರಂಭಿಸಿ, 16 ಗಂಟೆಗಳ ಕಾಲ ಮಾಡುತ್ತಿದ್ದೆ,” ಎಂದು ಅವರು ಹೇಳುತ್ತಾರೆ.
ಇಷ್ಟಾದರೂ ಇವರ ಜೀವನದಲ್ಲಿ ಹೆಚ್ಚು ಬದಲಾವಣೆಗಳೇನೂ ಆಗಲಿಲ್ಲ ಎಂದು ಅವರು ಹೇಳುತ್ತಾರೆ. "ಹೆಚ್ಚೇನೂ ಇಲ್ಲ. ನನ್ನ ಮುಷ್ಟಿ ಬಿಗಿಯಾಗಿದೆ ಎಂದು ನಾನು ಭಾವಿಸುತ್ತೇನೆ, ಯಾವ ಪರಿಸ್ಥಿತಿಯಲ್ಲಿಯೂ ಮುಷ್ಟಿಯನ್ನು ತೆರೆಯಲು ಸಾಧ್ಯವಿಲ್ಲ. ನನ್ನ ಬಲಗೈಯನ್ನು ಎಷ್ಟರ ಮಟ್ಟಿಗೆ ಬಳಸುತ್ತಿದ್ದೇನೆ ಎಂದರೆ ಹಿಂದೆ ಎಡಗೈಯಿಂದ ಕೆಲಸ ಮಾಡುತ್ತಿದ್ದೆ ಎಂಬುದೂ ಮರೆತು ಹೋಗಿದೆ,” ಎನ್ನುತ್ತಾರೆ ಅವರು.

Vishav Bharti

Vishav Bharti
ಪಾಲ್ ಸಿಂಗ್ ಅವರಂತೆ, ಅದೇ ಊರಿನ ಸುಮಾರು 70 ವರ್ಷ ಪ್ರಾಯದ ನಸೀಬ್ ಕೌರ್ ಅವರ ಎಡಗೈ ಅವರಿಗೆ ಒಂದು ನೆನಪಾಗಿ ಮಾತ್ರ ಉಳಿದಿದೆ. ಸುಮಾರು ಒಂದು ದಶಕದ ಹಿಂದೆ ಮೇವು ಕತ್ತರಿಸುವ ಯಂತ್ರದಲ್ಲಿ ಕೆಲಸ ಮಾಡುವಾಗ ಅವರು ಕೈ ಕತ್ತರಿಸಲ್ಪಟ್ಟಿತು. "ಮೇವನ್ನು ಕತ್ತರಿಸುವುದು ನನ್ನ ಒಂದು ದಿನನಿತ್ಯದ ಕೆಲಸವಾಗಿತ್ತು, ನಾನು ಬಾಲ್ಯದಿಂದಲೇ ಆ ಕೆಲಸವನ್ನು ಮಾಡುತ್ತಿದ್ದೆ. ಅವತ್ತು ಸಂಜೆ 7 ಗಂಟೆಯಾಗಿತ್ತು. ಮೊದಲಿಗೆ, ನನ್ನ ಹೆಬ್ಬೆರಳು ರೋಲರ್ ಒಳಗೆ ಸಿಕ್ಕಿಹಾಕಿಕೊಂಡಿತು, ನಂತರ ನನ್ನ ಇಡೀ ಕೈ ಒಳಗೆ ಹೋಯಿತು. ನಾನು ಕಿರುಚಾಡಲು ಆರಂಭಿಸಿದೆ. ನನ್ನ ಸೊಸೆ ಭಯದಿಂದ ಹೆದರಿಹೋಗಿದ್ದಳು. ಹಾಗಾಗಿ, ಅವಳಿಗೆ ಎಂಜಿನ್ ಅನ್ನು ನಿಲ್ಲಿಸಲು ಆಗಲಿಲ್ಲ. ನನ್ನ ಕಿರುಚಾಟ ಕೇಳಿ ನೆರೆಹೊರೆಯವರು ನಮ್ಮ ಮನೆಗೆ ಓಡೋಡಿ ಬಂದು ಎಂಜಿನ್ ನಿಲ್ಲಿಸಿ ಯಂತ್ರದಿಂದ ನನ್ನ ಕೈಯನ್ನು ಹೊರಗೆ ತೆಗೆದುಹಾಕಿದರು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಈ ಊರಿನಲ್ಲಿ ತಿಂಗಳಿಗೆ 1,500 ರುಪಾಯಿಗಳ ವೃದ್ಧಾಪ್ಯ ವೇತನ ಪಡೆಯುವ ಮೂವರಲ್ಲಿ ಇವರೂ ಒಬ್ಬರು. ಆದರೆ ಅವರಿಗೆ ಯಾವುದೇ ಪರಿಹಾರವಾಗಲೀ, ಅಂಗವಿಕಲರ ಪಿಂಚಣಿಯಾಗಲೀ ಸಿಗಲಿಲ್ಲ. ಈ ಮೂವರಲ್ಲಿ ಪಾಲ್ ಸಿಂಗ್ ಅವರಿಗೆ ಮಾತ್ರ ತಿಂಗಳಿಗೆ 1,500 ರುಪಾಯಿಗಳ ಅಂಗವಿಕಲರ ಪಿಂಚಣಿ ಬರುತ್ತಿದೆ. ಆದರೆ ಸುರ್ಜೀತ್ ಸಿಂಗ್ ಅವರಿಗೆ ಎನೇನೂ ಸಿಗುವುದಿಲ್ಲ. ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯವನ್ನು ಪಡೆಯುವುದು ಇವರಿಗೆ ಸುಲಭದ ಕೆಲಸವಲ್ಲ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಇದು ಒಂದು ದೊಡ್ಡ ಆಡಳಿತಾತ್ಮಕ ಸಮಸ್ಯೆಯಾಗಿದೆ. ಅಧಿಕಾರಿಗಳು ಸಾಮಾನ್ಯವಾಗಿ ತಪ್ಪಾದ ಅಥವಾ ಯಾವುದೇ ವಿವರಣೆ ನೀಡದೆ ಇವರಿಗೆ ಈ ಸೌಲಭ್ಯಗಳನ್ನು ಕೊಡಲು ನಿರಾಕರಿಸುತ್ತಾರೆ.
ನಸೀಬ್ ಅವರು ತಾವು ಕೂದಲನ್ನು ಬಾಚಿ, ಜಡೆ ಕಟ್ಟಿಕೊಳ್ಳುತ್ತಿದ್ದ, ಅಡುಗೆ ಮನೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಮತ್ತು ಬೇಗ ಬೇಗ ದನದ ಹಾಲು ಕರೆಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಇದ್ದಕ್ಕಿದ್ದಂತೆ ಅವರು ಆಲೋಚನೆಯಲ್ಲಿ ಮುಳುಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು, ಅವರು "ಈಗ ನನಗೆ ಅದನ್ನೆಲ್ಲಾ ಮಾಡಲು ಸಾಧ್ಯವಿಲ್ಲ," ಎಂದು ಹೇಳುತ್ತಾರೆ.

Vishav Bharti
ಇವರಿಗೆ ರೊಟ್ಟಿ ತಟ್ಟಲು ಆಗುತ್ತಿದೆಯೇ? "ಹೌದು, ಮಾಡಲೇಬೇಕು. ಅದು ಯಾವ ಅಸಮ ಆಕಾರದಲ್ಲಿ ಬಂದರೂ, ಅದನ್ನು ಬಿಟ್ಟು ಇನ್ನೇನು ಮಾಡಬಹುದು? ಇದೆನ್ನೆಲ್ಲಾ ಈ ಕಣ್ಣುಗಳಿಂದ ನೋಡಲು ನಾನು ಮಾಡಿದ ಪಾಪವಾದರೂ ಏನು?” ಎಂದು ಹೇಳುವಾಗ ಅವರ ಕಣ್ಣುಗಳು ಉಬ್ಬಿ, ಕಣ್ಣೀರು ಕೆನ್ನೆಗಳ ಮೇಲೆ ಉರುಳಿದವು. ತನ್ನ ಬಿಳಿ ದುಪಟ್ಟಾದಿಂದ ಕಣ್ಣೀರನ್ನು ಒರಸಿಕೊಂಡರು. "ಕಷ್ಟದ ದಿನಗಳನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ," ಎನ್ನುತ್ತಾ ಸುರ್ಜೀತ್ ಅವರ ಪತ್ನಿ ಕುಲ್ವಂತ್ ನಸೀಬ್ ಅವರನ್ನು ಸಮಾಧಾನಪಡಿಸಿದರು.
ಇದೆನ್ನೆಲ್ಲಾ ನೋಡುತ್ತಿದ್ದ ಸುರ್ಜೀತ್ ಸಿಂಗ್ ಸದ್ದಿಲ್ಲದೆ ಮಂಚದಿಂದ ಎದ್ದು ತಮ್ಮ ಎತ್ತನ್ನು ಕಟ್ಟಿಹಾಕಿರುವ ಗೂಟದ ಕಡೆಗೆ ಹೋಗುತ್ತಾರೆ. ತಮ್ಮ ಮೊಂಡು ಬಲಗೈಯಿಂದ ಹಗ್ಗದ ಗಂಟನ್ನು ಬಿಚ್ಚಲು ಆರಂಭಿಸುತ್ತಾರೆ. ತುಂಡಾಗಿರುವ ಅವರ ಬಲಗೈ ಇನ್ನೂ ಕೆಲಸ ಮಾಡುತ್ತಿರುವಂತೆ ತೋರುತ್ತಿತ್ತು.
ಈಸ್ಟೋರಿಯನ್ನು 2025ರ ಪಾರಿ ಸೀನಿಯರ್ ಫೆಲೋಷಿಪ್ ಅಡಿಯಲ್ಲಿ ವರದಿ ಮಾಡಲಾಗಿದೆ.
ಅನುವಾದ: ಚರಣ್ ಐವರ್ನಾಡು
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/in-punjab-green-revolution-red-harvest-kn

