ರಣದೀಪ್ ಸಿಂಗ್ ಪಾಲಿಗೆ ಅಮೇರಿಕಾದಿಂದ ಭಾರತದ ಅಮೃತಸರಕ್ಕೆ ಹೊರಟಿದ್ದ ಸಿ – 17 ವಿಮಾನದಲ್ಲಿ ಕೈಕಾಲು ಕಟ್ಟಿಸಿಕೊಂಡು ಇಳಿಯುವ ಅದೃಷ್ಟವಿರಲಿಲ್ಲ. 264 ದಿನಗಳ ಕಾಲ ವಿವಿಧ ದೇಶಗಳಲ್ಲಿ ಹೋರಾಡಿದ ಅವರು ಈ ವರ್ಷದ ಫೆಬ್ರವರಿ 21ರಂದು ಡಂಕಿ ಮಾರ್ಗದ ಮೂಲಕ ಅಮೇರಿಕಾಕ್ಕೆ ಹೋಗಲು ಯತ್ನದಲ್ಲಿರುವಾಗ ಕಾಂಬೋಡಿಯಾದಲ್ಲಿ ಅಸುನೀಗಿದರು.
ಈ ವಿಷಯದಲ್ಲಿ ನಾವು ಪರ್ಗತ್ ಸಿಂಗ್ ಅವರನ್ನು ಅದೃಷ್ಟಶಾಲಿ ಎನ್ನಬಹುದು. ವಿದೇಶಕ್ಕೆ ಹಾರುವ ಕನಸಿನ ರೆಕ್ಕೆಯನ್ನೇರಿ ಹೊರಟ ಈ ಯುವಕನ ಪ್ರಯಾಣ ಕುಟುಂಬದ 3 ಎಕರೆ ಭೂಮಿಯಲ್ಲಿ ಅರ್ಧದಷ್ಟನ್ನು ಮತ್ತು ಅಮ್ಮನ ಬಹುತೇಕ ಚಿನ್ನಾಭರಣಗಳನ್ನು ಮಾರುವುದರೊಂದಿಗೆ ಆರಂಭಗೊಂಡು, ಮತ್ತೆ ಭಾರತಕ್ಕೆ ಗಡೀಪಾರಾಗುವುದರೊಂದಿಗೆ ಅಂತ್ಯಗೊಂಡಿತು. ಅವರು ಕೈಕೋಳದೊಂದಿಗೆ ದೇಶಕ್ಕೆ ಮರಳಿದರಾದರೂ, ತನ್ನ ಕತೆಯನ್ನು ಹೇಳಿಕೊಳ್ಳಲು ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇತ್ತ ಪಂಜಾಬಿನ ಮೊಹಾಲಿ ಜಿಲ್ಲೆಯ ಶೇಖ್ಪುರ ಕಲಾನ್ ಗ್ರಾಮದಲ್ಲಿರುವ ರಣದೀಪ್ ಅವರ ಮನೆಯಲ್ಲಿ ಸತಾರ್ ಎನ್ನುವ ಆಚರಣೆ ನಡೆಯುತ್ತಿತ್ತು. ಕುಟುಂಬದಲ್ಲಿ ಯಾರಾದರೂ ತೀರಿಕೊಂಡಾಗ ನೆಲದ ಮೇಲೆ ಕುಳಿತು ಶೋಕಿಸುವ ಆಚರಣೆಗೆ ಈ ಹೆಸರಿದೆ. ಇಡೀ ಮನೆಯಲ್ಲಿನ ಶೋಕತಪ್ತ ವಾತಾವರಣ ರಣದೀಪ್ ಅವರ ಹೃದಯ ವಿದ್ರಾವಕ ಕತೆಯನ್ನು ಹೇಳುತ್ತಿತ್ತು. ಪಾರ್ಥೀವ ಶರೀರ ಬರುವುದನ್ನು ಕಾಯುತ್ತಾ ಕುಳಿತಿದ್ದ ಜನರಿಗೆ ಆ ಎರಡು ಕೋಣೆಯ ಮನೆಯ ಜಾಗ ಸಾಲುತ್ತಿರಲಿಲ್ಲ. ಆದರೆ ಸದ್ಯಕ್ಕೆ ಶವ ಬರುವ ಸಾಧ್ಯತೆಗಳು ಕಾಣುತ್ತಿರಲಿಲ್ಲ. ಏಕೆಂದರೆ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೃತ ದೇಹವನ್ನು ಸ್ವದೇಶಕ್ಕೆ ಕಳುಹಿಸಲು ತಗಲುವ ಎಲ್ಲಾ ವೆಚ್ಚವನ್ನು, ಎಂದರೆ 7,100 ಅಮೇರಿಕನ್ ಡಾಲರ್ (ಸುಮಾರು 6,21,000 ರೂ.) ಮೊತ್ತವನ್ನು ಮೊದಲೇ ಕಟ್ಟುವಂತೆ ಸೂಚಿಸಿತ್ತು.
ರಣದೀಪ್ ಅವರ ತಂದೆ 55 ವರ್ಷದ ಬಲ್ವಿಂದರ್ ಸಿಂಗ್ ಅವರಿಗೆ ಈ ಆರು ಅಂಕಿಯ ಲೆಕ್ಕಾಚಾರ ಅರ್ಥವಾಗುವುದಿಲ್ಲ. ಅವರೊಬ್ಬ ದಿನಗೂಲಿ ನೌಕರ. ಅದೃಷ್ಟವಿದ್ದು ಕೆಲಸ ಸಿಕ್ಕಿದರೆ ಅವರಿಗೆ ಆ ದಿನ ಸಿಗುವುದು 500 ರೂಪಾಯಿ ಕೂಲಿ. ಬಲ್ವಿಂದರ್ ಅಂದು ಅಲ್ಲಿಗೆ ಬಂದಿದ್ದ ಎಲ್ಲ ಪರಿಚಿತ, ಅಪರಿಚಿತರ ಜೊತೆ, ಕ್ಷೀಣ ಭರವಸೆಯ ಕಣ್ಣುಗಳೊಂದಿಗೆ ಒಂದೇ ಒಂದು ವಿನಂತಿಯನ್ನು ಸಣ್ಣ ದನಿಯಲ್ಲಿ ಮಾಡುತ್ತಿದ್ದರು: “ಬಾಡಿ ಲೇ ಕೇ ಆವೂನ್ ದಾ ದೇಖೋ [ದಯವಿಟ್ಟು ಹೆಣ ತರಿಸುವುದಕ್ಕೆ ಏನಾದರೂ ವ್ಯವಸ್ಥೆ ಮಾಡಿ].”
ನಿರುದ್ಯೋಗ ಮತ್ತು ಇತರ ಬಿಕ್ಕಟ್ಟುಗಳ ಕಾರಣಕ್ಕೆ ಪಂಜಾಬ್ ಬಿಟ್ಟು ಓಡಲು ಹಂಬಲಿಸುತ್ತಿದ್ದದ್ದು 24 ವರ್ಷದ ರಣದೀಪ್ ಒಬ್ಬರೇ ಅಲ್ಲ. ಭೂರಹಿತದಲಿತ ಕುಟುಂಬದಲ್ಲಿ ಜನಿಸಿದ ಅವರು, ಸತತ ಬೆಳೆ ವೈಫಲ್ಯಗಳು, ಕೆಲಸದ ಅಲಭ್ಯತೆ ಮತ್ತು ಆತ್ಮಹತ್ಯೆಗಳ ಪಂಜಾಬಿನ ಅಲೆಗ್ರಾಮೀಣ ಪ್ರದೇಶವನ್ನು ಕಾಡುತ್ತಿದ್ದ ವಾತಾವರಣದಲ್ಲೇ ರಣದೀಪ್ ಬೆಳೆದು ದೊಡ್ಡವರಾದರು.










