20 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರವೊಂದು ಇಂದು ಮತ್ತೆ ಕಾಡಬಹುದೆಂದು ಬಾಳಾಸಾಹೇಬ್ ಲೋಂಡೆಯವರು ಯೋಚಿಸಿರಲಿಲ್ಲ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫುರ್ಸುಂಗಿ ಎಂಬ ಸಣ್ಣ ಪಟ್ಟಣದಲ್ಲಿ ಸಣ್ಣ ರೈತರ ಕುಟುಂಬದಲ್ಲಿ ಜನಿಸಿದ ಲೋಂಡೆ ಮೊದಲಿಗೆ ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅಲ್ಲಿ ಅವರು ಮುಖ್ಯವಾಗಿ ಹತ್ತಿಯನ್ನು ಬೆಳೆಯುತ್ತಿದ್ದರು. ನಂತರ ಅವರಿಗೆ 18 ವರ್ಷ ವಯಸ್ಸಾದಾಗ, ಒಂದಷ್ಟು ಹೆಚ್ಚುವರಿ ಆದಾಯಕ್ಕಾಗಿ ಚಾಲಕನಾಗಿಯೂ ಕೆಲಸ ಮಾಡಲು ನಿರ್ಧರಿಸಿದರು.
"ಜಾನುವಾರುಗಳನ್ನು ಸಾಗಿಸುವ ವ್ಯವಹಾರವನ್ನು ನಡೆಸುತ್ತಿದ್ದ ಮುಸ್ಲಿಂ ಕುಟುಂಬಕ್ಕೆ ಸ್ನೇಹಿತರೊಬ್ಬರು ನನ್ನನ್ನು ಪರಿಚಯಿಸಿದರು" ಎಂದು 48 ವರ್ಷದ ಅವರು ಹೇಳುತ್ತಾರೆ. "ಅವರಿಗೆ ಚಾಲಕನ ಅಗತ್ಯವಿತ್ತು, ನಾನು ಅಲ್ಲಿ ಕೆಲಸಕ್ಕೆ ಸೇರಿಕೊಂಡೆ."
ಒಬ್ಬ ಉದ್ಯಮಶೀಲ ಯುವಕನಾಗಿದ್ದ ಲೋಂಡೆಯವರು ವ್ಯವಹಾರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಸುಮಾರು ಒಂದು ದಶಕದ ಕಳೆಯುವ ಹೊತ್ತಿಗೆ, ಲೋಂಡೆ ಕೆಲಸವನ್ನು ಕಲಿತು ಒಂದಷ್ಟು ಹಣವನ್ನೂ ಉಳಿಸಿದ್ದರು.
"8 ಲಕ್ಷ ರೂ.ಗಳಿಗೆ ಒಂದು ಸೆಕೆಂಡ್ ಹ್ಯಾಂಡ್ ಟ್ರಕ್ ಖರೀದಿಸಿ ಇನ್ನೂ 2 ಲಕ್ಷ ರೂ.ಗಳ ಬಂಡವಾಳ ಕೈಯಲ್ಲಿ ಉಳಿದಿತ್ತು" ಎಂದು ಅವರು ಹೇಳುತ್ತಾರೆ. "10 ವರ್ಷಗಳಲ್ಲಿ, ಮಾರುಕಟ್ಟೆಯಲ್ಲಿ ರೈತರು ಮತ್ತು ವ್ಯಾಪಾರಿಗಳೊಂದಿಗೆ ಒಳ್ಳೆಯ ಸಂಪರ್ಕವನ್ನೂ ಸಾಧಿಸಿದ್ದೆ."
ಲೋಂಡೆಯವರ ವ್ಯವಹಾರ ಅವರ ಕೈ ಹಿಡಿಯಿತು. ಬೆಳೆ ಬೆಲೆಗಳ ಕುಸಿತ, ಹಣದುಬ್ಬರ ಮತ್ತು ಹವಾಗುಣ ಬದಲಾವಣೆಯಿಂದ ಅವರ ಐದು ಎಕರೆ ಕೃಷಿ ಭೂಮಿ ನಷ್ಟ ಅನುಭವಿಸಿದ್ದ ಸಂದರ್ಭದಲ್ಲಿ ಈ ವ್ಯವಹಾರವೇ ಅವರನ್ನು ಉಳಿಸಿತ್ತು.
ಅವರ ಕೆಲಸ ಸರಳವಾಗಿತ್ತು. ಹಳ್ಳಿಯ ವಾರದ ಸಂತೆಗಳಲ್ಲಿ ಜಾನುವಾರು ಮಾರಾಟ ಮಾಡಲು ಬಯಸುವ ರೈತರಿಂದ ಜಾನುವಾರುಗಳನ್ನು ಖರೀದಿಸಿ ಅವುಗಳನ್ನು ಕಸಾಯಿಖಾನೆ ಅಥವಾ ಜಾನುವಾರು ಕೊಳ್ಳಲು ಬಯಸುವ ರೈತರಿಗೆ ಮಾರುವುದು ಅವರ ವ್ಯವಹಾರದ ಸ್ವರೂಪವಾಗಿತ್ತು. ಲಾಭವಾಗಿ ಕಮಿಷನ್ ದೊರೆಯುತ್ತಿತ್ತು. ವ್ಯವಹಾರ ಆರಂಭಿಸಿದ ಸುಮಾರು ಒಂದು ದಶಕದ ನಂತರ. 2014ರಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಚಿಸಿ ಇನ್ನೊಂದು ಟ್ರಕ್ ಖರೀದಿಸಿದರು.
ಪೆಟ್ರೋಲ್ ವೆಚ್ಚ, ವಾಹನ ನಿರ್ವಹಣಾ ವೆಚ್ಚ ಮತ್ತು ಚಾಲಕನ ಸಂಬಳವನ್ನು ಕೊಟ್ಟ ನಂತರ, ಆ ಸಮಯದಲ್ಲಿ ಅವರ ಸರಾಸರಿ ಮಾಸಿಕ ಆದಾಯವು ಸುಮಾರು 1 ಲಕ್ಷ ರೂಪಾಯಿಯಷ್ಟಿತ್ತು. ಮುಸ್ಲಿಂ ಖುರೇಷಿ ಸಮುದಾಯದ ಪ್ರಾಬಲ್ಯದ ಈ ವ್ಯಾಪಾರದಲ್ಲಿ ತೊಡಗಿರುವ ಕೆಲವೇ ಹಿಂದೂಗಳಲ್ಲಿ ಅವರೂ ಒಬ್ಬರಾಗಿದ್ದರು ಎಂಬುದು ಇಲ್ಲಿ ಅವರ ವ್ಯವಹಾರಕ್ಕೆ ತೊಡಕೇನೂ ಆಗಿರಲಿಲ್ಲ. "ಅವರು ತಮ್ಮ ಸಂಪರ್ಕಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುತ್ತಾ ನನ್ನೊಂದಿಗೆ ಉದಾರವಾಗಿ ನಡೆದುಕೊಂಡಿದ್ದರು" ಎಂದು ಅವರು ಹೇಳುತ್ತಾರೆ. "ನಾನು ಬದುಕಿನಲ್ಲಿ ಒಂದು ನೆಲೆ ಸಿಕ್ಕಿತು ಎಂದು ಭಾವಿಸಿದ್ದೆ."








