"ಅಮ್ಮ ಸಾಲುಬಾಯಿ ಒಂದಷ್ಟು ಸವರ್ಣೀಯರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ನಾನು ಆಗಾಗ ಅವರ ಹಿಂದೆ ಹೋಗುತ್ತಿದ್ದೆ" ಎಂದು ಗಂಗಾಧರ್ ನೆನಪಿಸಿಕೊಳ್ಳುತ್ತಾರೆ. "ಪ್ರತಿ ವರ್ಷ, ಎರಡು ಅಥವಾ ಮೂರು ಬಾರಿ ಅವರು ಮತ್ತು ಊರಿನ ಇನ್ನೂ ಕೆಲವು ಮಹಿಳೆಯರು ಈ ಕೆಲಸ ಮಾಡುತ್ತಿದ್ದರು. ಕೊಟ್ಟಿಗೆಯನ್ನು ಗುಡಿಸಿ ಸ್ವಚ್ಛಗೊಳಿಸಿ, ಇಡೀ ಮನೆ ಮತ್ತು ಅಂಗಳವನ್ನು ಗುಡಿಸಿದ ನಂತರ, ಮಣ್ಣಿನ ನೆಲಕ್ಕೆ ಸಗಣಿ ಸಾರಿಸುತ್ತಿದ್ದರು. ಕೆಲಸ ಮುಗಿದ ನಂತರ ಆ ಮನೆಯ ಯಜಮಾನತಿ ಬೇಯಿಸಿದ ಬೇಳೆ ಅಥವಾ ಬೇಸನ್ ತುಂಬಿದ ಪಾತ್ರೆಯನ್ನು ಅವರ ಮುಂದೆ ತಂದಿಡುತ್ತಿದ್ದರು. ಜೊತೆಗೆ 10-15 ಭಕ್ರಿಗಳನ್ನು (ರೊಟ್ಟಿಗಳನ್ನು) ಎಸೆಯುತ್ತಿದ್ದರು, ಅದನ್ನು ಅಮ್ಮ ತನ್ನ ಸೀರೆಯ ಸೆರಗಿನಲ್ಲಿ ಹಿಡಿಯುತ್ತಿದ್ದರು. ಆ ಭಕ್ರಿಗಳನ್ನು ನೀಡುವಾಗ ಮನೆಯ ಮಾಲೀಕರು ಅಮ್ಮನನ್ನು ಮುಟ್ಟದಂತೆ ಎಚ್ಚರಿಕೆ ವಹಿಸುತ್ತಿದ್ದರು."
ಬಲೂತೇದಾರಿ ವ್ಯವಸ್ಥೆಯ ಅಡಿಯಲ್ಲಿ - ಪ್ರತಿಯೊಂದು ಜಾತಿಗೂ ನಿರ್ದಿಷ್ಟ ಪಾತ್ರ ಮತ್ತು ಕೆಲಸವನ್ನು ನಿಯೋಜಿಸಲಾಗಿದ್ದ ಜಾತ್ಯಾಧಾರಿತ ಪದ್ಧತಿ - ಇದನ್ನು 'ಮಾಂಗ್ಕಿ' ಎಂದು ಕರೆಯಲಾಗುತ್ತಿತ್ತು.ಮಾಂಗ್ ಸಮುದಾಯ ಇದನ್ನು ಮಾಡಲೇಬೇಕಿತ್ತು. ಇದರೊಂದಿಗೆ ಅವರು ಬಿದಿರಿನ ಪೊರಕೆಗಳು, 'ಕಂಗಿ' ಮತ್ತು 'ದುರ್ಡಿ' (ಧಾನ್ಯ ಸಂಗ್ರಹಿಸುವ ಬುಟ್ಟಿಗಳು ಮತ್ತು ಪಾತ್ರೆಗಳು) ತಯಾರಿಸುತ್ತಿದ್ದರು. ಇವುಗಳನ್ನು ಕೊಟ್ಟು ಬದಲಿಗೆ ಧಾನ್ಯ ಮತ್ತು ಆಹಾರವನ್ನು ಪಡೆಯುತ್ತಿದ್ದರು.
ಮುಂದೆ ಗಂಗಾಧರ್ ಅವರ ತಂದೆ ಸಾರಾಯಿ ತಯಾರಿಸಲು ಪ್ರಾರಂಭಿಸಿದರು. ಇದರಿಂದ ಒಂದಷ್ಟು ಹಣ ಸಿಗತೊಡಗಿತು. ಒಂದು ದಿನ ಪೊಲೀಸರು ಬಂದು ಕಳ್ಳಬಟ್ಟಿ ಸಾರಾಯಿ ಕಾಯಿಸುತ್ತಿದ್ದ ಆರೋಪದ ಮೇಲೆ ಅಪ್ಪನನ್ನು ಬಂಧಿಸಿದರು. ಪೋತರಾಜು ಸಂಪ್ರದಾಯದಂತೆ ಅವರು ಬಿಟ್ಟಿದ್ದ ಕೂದಲನ್ನು ಪೊಲೀಸರು ಬಲವಂತವಾಗಿ ಕತ್ತರಿಸಿದರು. ಅಲ್ಲದೆ, ಮುಂದೆ ಸಾರಾಯಿ ಕಾಯಿಸುವುದನ್ನು ತಡೆಯುವ ಸಲುವಾಗಿ ಅವರಿಗೆ ಕೋತ್ವಾಲ್ ಕೆಲಸವನ್ನೂ ನೀಡಿದರು."
70ರ ದಶಕದ ಅಂತ್ಯ ಮತ್ತು 80ರ ದಶಕದ ಆರಂಭದ ಸುಮಾರಿಗೆ, ಹಳೆಯ ಬಲೂತೇದಾರಿ ವ್ಯವಸ್ಥೆ ಹೊಸ ರೂಪವನ್ನು ಪಡೆಯತೊಡಗಿತು. ಕೊತ್ವಾಲ್ ಹುದ್ದೆ ಇದಕ್ಕೊಂದು ಉದಾಹರಣೆಯಾಗಿತ್ತು. ಒಂದು ರೀತಿಯಲ್ಲಿ ಅವರು ಊರಿನ ಸೇವಕರಾಗಿದ್ದರು. ಬಲೂತೇದಾರಿ ಪದ್ಧತಿಯಲ್ಲಿ ಮಹಾರ್ ಮತ್ತು ಮಾಂಗ್ ಸಮುದಾಯದವರು ಇಡೀ ಊರಿಗೆ ಸೇವೆ ಸಲ್ಲಿಸುತ್ತಿದ್ದರು. ಆದರೆ ಕೊತ್ವಾಲ್ ಪದ್ಧತಿಯಡಿ ಸಣ್ಣ ಮೊತ್ತದ ಸಂಭಾವನೆಯನ್ನೂ ಕೊಡಲಾಗುತ್ತಿತ್ತು. ಈ ಕೊತ್ವಾಲರು ಊರಿನ ಜನರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ರಾಜ್ಯ ಸರ್ಕಾರದಿಂದ ನೇಮಕಗೊಂಡ ಸೇವಕ ಎನ್ನಬಹುದು. ಗಂಗಾಧರ್ ಅವರ ತಂದೆಗೆ ಈ ಹುದ್ದೆ ಸಿಗುವುದರೊಂದಿಗೆ ಊರಿನಲ್ಲಿ ಒಂದಷ್ಟು ಸಾಮಾಜಿಕ ಗೌರವವೂ ಸಿಗತೊಡಗಿತು. ಹೀಗೆ ಬದುಕಿನಲ್ಲಿ ಒಂದು ಹೆಜ್ಜೆ ಮೇಲೆ ತಲುಪಿದ ಅವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ನಿರ್ಧರಿಸಿದರು.
ಗಂಗಾಧರ್, ಅವರ ಅಣ್ಣ ಮತ್ತು ಐವರು ಸಹೋದರಿಯರು ಸೇರಿದಂತೆ ಎಲ್ಲಾ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದರು. ಹೆಣ್ಣುಮಕ್ಕಳು 3 ಅಥವಾ 4ನೇ ತರಗತಿಯವರೆಗೆ ಓದಿದರು. ಆದರೆ ಗಂಡುಮಕ್ಕಳು 10ನೇ ತರಗತಿಯವರೆಗೆ ತಲುಪಿದರು. ಶಿಕ್ಷಣ ಪಡೆದ ಅವರೆಲ್ಲ ಮಾಂಗ್ಕಿ ಕೆಲಸದ ಜಾತಿ ಆಧಾರಿತ ಹೊರೆಗಳನ್ನು ತಿರಸ್ಕರಿಸಿ ಹೊಸ ಹಾದಿಯನ್ನು ಆರಿಸಿಕೊಂಡರು. ಅವರ ಅಣ್ಣ ತಂದೆ ಜಾಗಕ್ಕೆ ಕೊತ್ವಾಲ್ ಆಗಿ ಸೇರಿಕೊಂಡರು. ಗಂಗಾಧರ್ ಅವರಿಗೆ ಯಾವುದೇ ಕಾಯಂ ಉದ್ಯೋಗ ಇದ್ದಿರಲಿಲ್ಲ. ಅವರು ಕೂಲಿ ಕೆಲಸ ಮಾಡುತ್ತಾ, ಬಿಡುವಿನ ಸಮಯದಲ್ಲಿ ಅಂಬೇಡ್ಕರ್ ಅವರ ಬದುಕು ಮತ್ತು ಕೆಲಸಗಳನ್ನು ಪ್ರಚಾರ ಮಾಡುವ ಭೀಮ ಗೀತೆಗಳನ್ನು ಹಾಡುತ್ತಿದ್ದರು.
ಗಂಗಾಧರ್ ಅವರಿಗೆ ಮೊದಲಿನಿಂದಲೂ ಹಾಡುಗಾರಿಕೆಯ ಮೇಲೆ ಹೆಚ್ಚು ಒಲವಿತ್ತು. ಈ ಕಲೆ ತನಗೆ ತನ್ನ ತಾಯಿ ಹಾಗೂ ಸಹೋದರಿಯರಿಂದ ಬಳುವಳಿಯಾಗಿ ಬಂದಿದೆಯೆನ್ನುವುದು ಅವರ ನಂಬಿಕೆ. ಈ ಮಹಿಳೆಯರು ಬೇರೆ ಬೇರೆ ದೇವರುಗಳನ್ನು ಆರಾಧಿಸುತ್ತಿದ್ದರು. ಇದರ ಸಲುವಾಗಿ ವಾರದ ಬೇರೆ ಬೇರೆ ದಿನಗಳಂದು ಉಪವಾಸ ಮತ್ತು ಇತರ ಆಚರಣೆಗಳನ್ನು ಮಾಡುತ್ತಿದ್ದರು. ನಿಜದಲ್ಲಿ ಈ ಮಹಿಳೆಯರು ಉಪವಾಸ ಮಾಡುವ ಮೂಲಕ ಆಹಾರವನ್ನು ಉಳಿಸುತ್ತಿದ್ದರು. "ಅಮ್ಮ ಮತ್ತು ಸಹೋದರಿಯರು ಜಿಂತೂರಿನ [ಪರ್ಭಣಿಯಿಂದ 50 ಕಿಲೋಮೀಟರ್ ದೂರದ ಪಟ್ಟಣ] ಗೋಸಾವಿ ದಾಸರ ಅನುಯಾಯಿಗಳಾಗಿದ್ದರು. ಅವರು ತಮ್ಮ ಶಿಷ್ಯರೊಂದಿಗೆ ವಿವಿಧ ಸ್ಥಳಗಳಿಗೆ ಅಲೆದಾಡುತ್ತಿದ್ದರು. ಅವರು ಹುಟ್ಟಿನಿಂದ ಮಹಾರ್ ಸಮುದಾಯದವರಾಗಿದ್ದರು ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರಲಿಲ್ಲ. ನನ್ನ ಮನೆಯವರು ಭಾನುವಾರ ಧುರ್ಪದಾ ಮಾಯಿ, ಸೋಮವಾರ ಮಹಾದೇವ ಮತ್ತು ಬುಧವಾರ ಕೃಷ್ಣನ ಹೆಸರಿನಲ್ಲಿ ಉಪವಾಸ ಮಾಡುತ್ತಿದ್ದರು.”