ಹತಾನಾದ ಸರ್ಕಾರಿ ಆಸ್ಪತ್ರೆಯ ಮುಖ್ಯ ದ್ವಾರದ ಮುಂದೆ ಆಟೋ ರಿಕ್ಷಾವೊಂದನ್ನು ನಿಲ್ಲಿಸಲಾಗಿತ್ತು. ಒಳಗೆ, ಒಬ್ಬ ಮಹಿಳೆ ಪ್ರಜ್ಞೆ ತಪ್ಪಿ ಮಲಗಿದ್ದರು. ಇನ್ನೊಬ್ಬರು ಅಳುತ್ತಾ: "ಮಾಜಾ ಸೋನಿಯಾ, ಮಾಜಾ ಸೋನಿಯಾ, ಕುಠೆ ಗೆಲಾ ರೇ ಮಾಜಾ ಸೋನಿಯಾ [ನನ್ನ ಚಿನ್ನಾ ಎಲ್ಲಿ ಹೊರಟು ಹೋದೆ]?” ಕೂಗುತ್ತಿರುವ ಸದ್ದು ಮಾರ್ದನಿಸುತ್ತಿತ್ತು. ಇನ್ನೂ ಕೆಲವು ಕುಟುಂಬಗಳು ಒಟ್ಟುಗೂಡಿ ದಾಖಲೆಪತ್ರಗಳನ್ನು ಒಟ್ಟುಮಾಡಲು ಪ್ರಯತ್ನಿಸುತ್ತಿದ್ದರು. ಮತ್ತೆ ಕೆಲವರು ಬೇರೆ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಲು ಓಡಾಡುತ್ತಿದ್ದರು.
ಅದು ಮೇ ತಿಂಗಳ ಬಿರುಬಿಸಿಲ ಬೇಸಗೆಯ ಮಧ್ಯಾಹ್ನ, ಅಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಹತಾನೆ ಗ್ರಾಮದ ರೆವೆರಾ ಆಸ್ಪತ್ರೆಯ ಹೊರಗೆ ಗಲಿಬಿಲಿಯ ವಾತಾವರಣವಿತ್ತು.
ಗುರು ಚೌಧರಿ ಆಸ್ಪತ್ರೆಯ ಆವರಣದ ಹೊರಗಿನ ಮರದ ಕೆಳಗೆ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ನಿರಂತರವಾಗಿ ಕೂಗುತ್ತಾರೆ. ಅವರು ತಮ್ಮ ಸೋದರ ಮಾವನ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾರೆ. "ದೇವಲಾ ಪ್ರೀತಿಯ ಝಾಲಾ ಕಲ್ ರಾತ್ [ಅವರು ಕಳೆದ ರಾತ್ರಿ ನಿಧನರಾದರು]" ಎಂದು ಅವರು ಫೋನಿನಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದರು. "ಅವರು ನನಗೆ ಸಹೋದರನಿದ್ದಂತೆ" ಎಂದು ಅವರು ದುಃಖದಿಂದ ಹೇಳುತ್ತಾರೆ. "ಈ ವಿಡಿಯೋ ನೋಡಿ. ಆರಾಮಾಗಿದ್ದ. ನನ್ನ ಸಹೋದರಿ ಆಸ್ಪತ್ರೆಯಲ್ಲಿ ಅವನೊಂದಿಗೆ ಇದ್ದಳು. ಅವನಿಗೆ ಹಾಕಲಾಗಿದ್ದ ಆಮ್ಲಜಕನ ಬಾಟಲಿಯಿಂದ ಸೋರುತ್ತಲೇ ಇತ್ತು... ಅವಳು ವೈದ್ಯರಿಗೆ ಬಂದು ಅವನನ್ನು ನೋಡುವಂತೆ ಹೇಳುತ್ತಲೇ ಇದ್ದಳು..."
ಗುರು ಅವರ ಸೋದರ ಮಾವ 35 ವರ್ಷದ ವಾಮನ್ ದಿಘಾ ಅವರನ್ನು ಏಪ್ರಿಲ್ 23ರಂದು ಕುಟುಂಬವು ರೆವೆರಾಗೆ ಸ್ಥಳಾಂತರಗೊಳ್ಳುವ ಮೊದಲು ಹಳ್ಳಿಯ ಬಳಿಯ ಎರಡು ಸಣ್ಣ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. "ಅವರಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳವರೆಗೆ ತೀವ್ರ ಜ್ವರವೂ ಇತ್ತು, ಕೊನೆಗೆ ನಾವು ಭಯಭೀತರಾಗಿ ಟೆಸ್ಟ್ ಮಾಡಿಸಲು ನಿರ್ಧರಿಸಿದೆವು" ಎಂದು ಗುರು ಹೇಳುತ್ತಾರೆ. "ಅವರಿಗೆ ನ್ಯುಮೋನಿಯಾ ಇದೆ, ಕೋವಿಡ್ ಕೂಡ ಬರಬಹುದು ಎಂದು ವೈದ್ಯರು ಹೇಳಿದರು, ಆಗ ಅವರನ್ನು ತಕ್ಷಣ ದಾಖಲಿಸಬೇಕಾಯಿತು. ಹತ್ತಿರದ ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆಗಳು ಅಥವಾ ಆಮ್ಲಜನಕ ಇರಲಿಲ್ಲ. ”
ಪಾಲ್ಘರ್ನ ಮೊಖಡಾ ತಾಲ್ಲೂಕಿನ ತಕ್ಪಾಡಾ ಗ್ರಾಮದಿಂದ ಅದೇ ಜಿಲ್ಲೆಯ ವಿಕ್ರಮಗಡ್ ತಾಲ್ಲೂಕಿನ ಸರ್ಕಾರಿ ಸ್ವಾಮ್ಯದ ರೆವೆರಾಗೆ ಕುಟುಂಬವು ಆಂಬ್ಯುಲೆನ್ಸಿನಲ್ಲಿ ಸುಮಾರು 60 ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು. ಇದು ಕೋವಿಡ್ ರೋಗಿಗಳಿಗೆಂದೇ 200 ಹಾಸಿಗೆಗಳನ್ನು ಹೊಂದಿರುವ ತಾಲ್ಲೂಕಿನ ಏಕೈಕ ಕೋವಿಡ್ ಆಸ್ಪತ್ರೆ (ಅವುಗಳಲ್ಲಿ ಅರ್ಧದಷ್ಟು ಪ್ರತ್ಯೇಕ ಹಾಸಿಗೆಗಳು ಮತ್ತು ಉಳಿದವು ಆಮ್ಲಜನಕ, ವೆಂಟಿಲೇಟರ್ ಅಥವಾ ಐಸಿಯು ಸೌಲಭ್ಯ ಇರುವವು; ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಜಿಲ್ಲೆಯ ಸರ್ಕಾರಿ ವೆಬ್ಸೈಟಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ.










